ಹುಬ್ಬಳ್ಳಿ-ಧಾರವಾಡ ನಡುವೆ ಇ-ಆರ್-ಟಿ ಸೇವೆ: ಸಚಿವ ಸಂತೋ‍ಷ್ ಲಾಡ್ ನೇತೃತ್ವದಲ್ಲಿ ಪ್ರಾತ್ಯಕ್ಷಿಕೆ

Spread the love

ಧಾರವಾಡ: ಹುಬ್ಬಳ್ಳಿ-ಧಾರವಾಡ ಮಹಾನಗರಗಳ ನಡುವೆ ಆರಂಭಿಸಲು ಉದ್ದೇಶಿಸಿರುವ ಎಲೆಕ್ಟ್ರಿಕ್ ರಾಪಿಡ್ ಟ್ರಾನ್ಸಿಟ್ (E-RT) ಯೋಜನೆಯ ಕುರಿತು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋ‍ಷ್ ಎಸ್. ಲಾಡ್ ಅವರು ಇತ್ತೀಚೆಗೆ ಬೆಳಗಾವಿಯ ಸುವರ್ಣ ಸೌಧದಲ್ಲಿ ಹಿರಿಯ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಯೋಜನೆಯ ಪ್ರಾತ್ಯಕ್ಷಿಕೆ (Demonstration) ವೀಕ್ಷಿಸಿದರು.

​ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿ ಮತ್ತು ನಗರಾಭಿವೃದ್ಧಿ ಸಚಿವರಾದ ಭೈರತಿ ಸುರೇಶ್ ಅವರ ಉಪಸ್ಥಿತಿಯಲ್ಲಿ ಈ ಮಹತ್ವದ ಸಭೆ ನಡೆಯಿತು. ಈ ಸಂದರ್ಭದಲ್ಲಿ ಮೂರೂ ಸಚಿವರು ಯೋಜನೆಯ ಸಾಧಕ-ಬಾಧಕಗಳ ಕುರಿತು ವಿವರವಾಗಿ ಚರ್ಚೆ ನಡೆಸಿದರು.

​ಶಾಸಕರು ಮತ್ತು ಉನ್ನತ ಅಧಿಕಾರಿಗಳ ಭಾಗಿ

​ಸಭೆಯಲ್ಲಿ ಶಾಸಕರಾದ ಎನ್. ಹೆಚ್. ಕೋನರಡ್ಡಿ, ಅರವಿಂದ್ ಬೆಲ್ಲದ, ಮಹೇಶ್ ಟೆಂಗಿನಕಾಯಿ, ಎಂ. ಆರ್. ಪಾಟೀಲ್ ಅವರು ಭಾಗವಹಿಸಿದ್ದರು. ಇದರ ಜೊತೆಗೆ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಧಾರವಾಡ ಜಿಲ್ಲಾಧಿಕಾರಿ ದಿವ್ಯಪ್ರಭು, ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಸಾರಿಗೆ ಇಲಾಖೆ ಕಾರ್ಯದರ್ಶಿ ಎನ್. ವಿ. ಪ್ರಸಾದ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

​ಗೃಹ ಕಚೇರಿ ಕೃಷ್ಣಾದಲ್ಲಿ ಯೋಜನೆ ವಿವರ

​ಇದೇ ಯೋಜನೆಯ ಕುರಿತು ಕೆಲವು ದಿನಗಳ ಹಿಂದೆ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರೊಂದಿಗೆ ನಡೆದ ಸಭೆಯಲ್ಲಿಯೂ ಸಚಿವ ಸಂತೋ‍ಷ್ ಲಾಡ್ ಅವರು ಭಾಗವಹಿಸಿ, ಯೋಜನೆಯ ಕುರಿತು ಸಂಪೂರ್ಣ ವಿವರ ನೀಡಿದ್ದರು.

​ಆ ಸಭೆಯಲ್ಲಿ, ವಿದ್ಯುತ್ ಕ್ಷಿಪ್ರ ಸಾರಿಗೆ (E-RT) ಪರಿಚಯಿಸಲು ರಾಜ್ಯ ಸರ್ಕಾರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿರುವ KESS ಇಂಡಿಯಾ ಕಂಪನಿಯ ಪ್ರತಿನಿಧಿಗಳು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು. ಈ ಇ-ಆರ್‍ಟಿ ಸೇವೆಯು ಹುಬ್ಬಳ್ಳಿ-ಧಾರವಾಡ ನಡುವಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರುವ ನಿರೀಕ್ಷೆ ಇದೆ.

Leave a Reply

Your email address will not be published. Required fields are marked *