
ಗುಣಮಟ್ಟ ಮತ್ತು ವಿತರಣಾ ಪ್ರಮಾಣದ ಬಗ್ಗೆ ಮಕ್ಕಳೊಂದಿಗೆ ಸಂವಾದ; ಸ್ವಚ್ಛತೆ ಕಾಪಾಡಲು ಸಿಬ್ಬಂದಿಗೆ ಸೂಚನೆ
ಬಳ್ಳಾರಿ: ನವೆಂಬರ್ 25: ಕೆಎಂಇಆರ್ಸಿ (KMERC) ಯ ಸಿಇಪಿಎಂಐಜೆಡ್ ಯೋಜನೆಯಡಿ ಪ್ರೌಢಶಾಲಾ ಮಕ್ಕಳಿಗೆ ನೀಡಲಾಗುತ್ತಿರುವ ಉಸುಳಿಕಾಳು ವಿತರಣೆಯ ಅನುಷ್ಠಾನ ಕಾರ್ಯಕ್ರಮವನ್ನು ಕೆಎಂಇಆರ್ಸಿ ವ್ಯವಸ್ಥಾಪಕ ನಿರ್ದೇಶಕ ಡಾ. ಸಂಜಯ್ ಎಸ್. ಬಿಜ್ಜೂರ್ ಅವರು ಇಂದು (ಮಂಗಳವಾರ) ದೋಣಿಮಲೈಯ ಸರ್ಕಾರಿ ಪ್ರೌಢಶಾಲೆಯಲ್ಲಿ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಶಾಲಾ ಮಕ್ಕಳೊಂದಿಗೆ ಸಂವಾದ ನಡೆಸಿದ ಡಾ. ಬಿಜ್ಜೂರ್ ಅವರು, ಮಕ್ಕಳಿಗೆ ನಿಗದಿತ ಪ್ರಮಾಣದಲ್ಲಿ ಕಾಳು ವಿತರಿಸಲಾಗಿದೆಯೇ, ರುಚಿಯಾಗಿರುತ್ತದೆಯೇ ಎಂಬುದರ ಬಗ್ಗೆ ಮಾಹಿತಿ ಪಡೆದುಕೊಂಡರು. ಕಾಳುಗಳ ಪ್ರಮಾಣ ಕಡಿಮೆಯಿದ್ದರೆ ತಕ್ಷಣ ಶಿಕ್ಷಕರ ಗಮನಕ್ಕೆ ತರುವಂತೆ ಮಕ್ಕಳಿಗೆ ಸಲಹೆ ನೀಡಿದರು. ಅಲ್ಲದೆ, ಶಾಲೆಯಲ್ಲಿ ಹಣ್ಣುಗಳನ್ನು ಸಹ ವಿತರಣೆ ಮಾಡುತ್ತಿದ್ದಾರೆಯೇ ಎಂದು ವಿಚಾರಿಸಿದರು.
ಬಳಿಕ ಅಡುಗೆ ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಅವರು, ಮಕ್ಕಳಿಗೆ ಗುಣಮಟ್ಟದ ಮೊಳಕೆಯೊಡೆದ ಕಾಳುಗಳನ್ನು ವಿತರಣೆ ಮಾಡಬೇಕು. ಅಡುಗೆ ಮನೆಯಲ್ಲಿ ಸ್ವಚ್ಛತೆಯನ್ನು ಕಡ್ಡಾಯವಾಗಿ ಕಾಯ್ದುಕೊಳ್ಳಬೇಕು ಮತ್ತು ಸರಿಯಾಗಿ ಬೇಯಿಸಿದ ಕಾಳನ್ನೇ ಮಕ್ಕಳಿಗೆ ನೀಡಬೇಕು ಎಂದು ನಿರ್ದೇಶಿಸಿದರು.

ಪರಿಶೀಲನೆಯ ನಂತರ, ಡಾ. ಸಂಜಯ್ ಎಸ್. ಬಿಜ್ಜೂರ್ ಅವರು ಸ್ವತಃ ಮಕ್ಕಳಿಗೆ ಉಸುಳಿಕಾಳು ವಿತರಣೆ ಮಾಡಿ, ತಾವು ಸಹ ಸವಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕರಾದ ದ್ವಿತೀಯ ಸೇರಿದಂತೆ ಸಮಗ್ರ ಶಿಕ್ಷಣ ಅಭಿಯಾನದ ಅಧಿಕಾರಿಗಳು, ಮಧ್ಯಾಹ್ನ ಬಿಸಿಯೂಟ ಯೋಜನಾಧಿಕಾರಿಗಳು, ಶಾಲಾ ಶಿಕ್ಷಕರು ಹಾಗೂ ಮಕ್ಕಳು ಉಪಸ್ಥಿತರಿದ್ದರು

