ಡಾ. ಎಂ.ಎಂ. ಕಲಬುರ್ಗಿ ಸಂಸ್ಮರಣಾ ಉಪನ್ಯಾಸ ನಾಳೆ ಧಾರವಾಡದಲ್ಲಿ ಆಯೋಜನೆ

Spread the love

ಧಾರವಾಡ, ನವೆಂಬರ್ 27: ಕನ್ನಡದ ಶ್ರೇಷ್ಠ ಸಂಶೋಧಕ, ವಿದ್ವಾಂಸ ಡಾ. ಎಂ.ಎಂ. ಕಲಬುರ್ಗಿ ಅವರ ಸಂಸ್ಮರಣೆಯ ದತ್ತಿ ಕಾರ್ಯಕ್ರಮವನ್ನು ಕರ್ನಾಟಕ ವಿದ್ಯಾವರ್ಧಕ ಸಂಘವು ನವೆಂಬರ್ 28, 2025 ರಂದು ಹಮ್ಮಿಕೊಂಡಿದೆ. ಈ ದತ್ತಿ ಉಪನ್ಯಾಸ ಕಾರ್ಯಕ್ರಮವು ಬೆಳಿಗ್ಗೆ 11 ಗಂಟೆಗೆ ಕಲ್ಯಾಣನಗರದಲ್ಲಿರುವ ಡಾ. ಹಿರೇಮಲ್ಲೂರ ಈಶ್ವರನ್ ಪದವಿಪೂರ್ವ ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆಯಲಿದೆ.

​ಪ್ರೊ. ಶಶಿಧರ ತೋಡಕರ ಅವರು ಸಂಘದಲ್ಲಿ ಸ್ಥಾಪಿಸಿದ ದತ್ತಿಯ ಅಂಗವಾಗಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ, ಮುಳಗುಂದದ ಶ್ರೀ ಆರ್.ಎನ್. ದೇಶಪಾಂಡೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಆರ್.ಎಂ. ಕಲ್ಲನಗೌಡರ ಅವರು ‘ಡಾ. ಎಂ.ಎಂ. ಕಲಬುರ್ಗಿ ಜೀವನ ಮತ್ತು ಸಾಧನೆ’ ಕುರಿತು ವಿಶೇಷ ಅತಿಥಿ ಉಪನ್ಯಾಸ ನೀಡಲಿದ್ದಾರೆ. ಡಾ. ಹಿರೇಮಲ್ಲೂರ ಈಶ್ವರನ್ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರಿ. ಶಶಿಧರ ತೋಡಕರ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.

​ಕಲಬುರ್ಗಿ ಅವರ ಬಹುಮುಖ ಸಾಧನೆಗಳ ಸ್ಮರಣೆ

​ಡಾ. ಎಂ.ಎಂ. ಕಲಬುರ್ಗಿ (1938–2015) ಅವರು ಕನ್ನಡ ಪಾಂಡಿತ್ಯ ಪರಂಪರೆಯಲ್ಲಿ ಗಟ್ಟಿದುಳಿದ ವಿದ್ವಾಂಸರಾಗಿದ್ದರು. ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗಳ ಬಹುಶಿಸ್ತೀಯ ಅಧ್ಯಯನಕ್ಕೆ ಅವರು ನೀಡಿದ ಕೊಡುಗೆ ಅಪೂರ್ವ. ಅವರು ಪ್ರಥಮ ಶ್ರೇಣಿಯ ಸಂಶೋಧಕರಾಗಿ, ಸಮರ್ಥ ಮಾರ್ಗದರ್ಶಕರಾಗಿ, ಕರ್ನಾಟಕ ವಿಶ್ವವಿದ್ಯಾಲಯದ ವಿಭಾಗದ ದಕ್ಷ ಅಧ್ಯಕ್ಷರಾಗಿ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಾದರಿ ಕುಲಪತಿಯಾಗಿ ಸೇವೆ ಸಲ್ಲಿಸಿದ್ದರು. ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಸಹಕಾರ್ಯದರ್ಶಿಯಾಗಿ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಸಂಘದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ ಕಲಬುರ್ಗಿ ಅವರು, ವಿಶೇಷವಾಗಿ 1982 ರಲ್ಲಿ ಕ.ವಿ.ವ. ಸಂಘದ ನೇತೃತ್ವದಲ್ಲಿ ನಡೆದ ಗೋಕಾಕ ಭಾಷಾ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ವಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಗುಬ್ಬೇವಾಡ ಗ್ರಾಮದಲ್ಲಿ 28-11-1938 ರಂದು ಜನಿಸಿದ ಇವರು 30-8-2015 ರಂದು ಲಿಂಗೈಕ್ಯರಾದರು.

​ಈ ಉಪನ್ಯಾಸ ಕಾರ್ಯಕ್ರಮದಲ್ಲಿ ಸಾಹಿತಿಗಳು, ಕಲಾವಿದರು, ಚಿಂತಕರು, ವಿದ್ಯಾರ್ಥಿಗಳು, ಸಂಘದ ಆಜೀವ ಸದಸ್ಯರು ಹಾಗೂ ಆಸಕ್ತ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 94480-22950 ಕ್ಕೆ ಸಂಪರ್ಕಿಸಬಹುದು.

Leave a Reply

Your email address will not be published. Required fields are marked *