ಮಕ್ಕಳ ದಿನಾಚರಣೆ ಅಂಗವಾಗಿ ಜಿಲ್ಲಾ ಮಟ್ಟದ ಪೋಷಕ–ಶಿಕ್ಷಕರ ಮಹಾಸಭೆ ಯಶಸ್ವಿ: ಜವಾಬ್ದಾರಿ ಹಂಚಿಕೆಗೆ ಡಿಸಿ ಕರೆ

Spread the love


ಜಿಲ್ಲಾ ಮಟ್ಟದ ಪೋಷಕ–ಶಿಕ್ಷಕರ ಮಹಾಸಭೆ ಯಶಸ್ವಿಯಾಗಿ ನೆರವೇರಿತು

ಹುಬ್ಬಳ್ಳಿ ನ.14: ಪ್ರಸಕ್ತ ಸಾಲಿನ ಮಕ್ಕಳ ದಿನಾಚರಣೆಯನ್ನು ರಾಜ್ಯ ಸರ್ಕಾರದ ಸೂಚನೆಯಂತೆ ಪೋಷಕರಲ್ಲಿ ಮತ್ತು ಶಿಕ್ಷಕರಲ್ಲಿ ಜಾಗೃತಿ ಮೂಡಿಸಿ, ಅವರ ಜವಾಬ್ದಾರಿಯನ್ನು ನೆನಪಿಸುವ ಉದ್ದೇಶದಿಂದ ಇಂದು ಜಿಲ್ಲೆಯಾದ್ಯಂತ 896 ಶಾಲೆ ಮತ್ತು ಕಾಲೇಜುಗಳಲ್ಲಿ ಪೋಷಕ–ಶಿಕ್ಷಕರ ಮಹಾಸಭೆಗಳನ್ನು ಯಶಸ್ವಿಯಾಗಿ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಅವರು ತಿಳಿಸಿದ್ದಾರೆ.

ರಾಯನಾಳ ಗ್ರಾಮದ ಕೆಪಿಎಸ್ ಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ರಾಯನಾಳ ಗ್ರಾಮ ಪಂಚಾಯತ್, ಕರ್ನಾಟಕ ಪಬ್ಲಿಕ್ ಶಾಲೆ–ರಾಯನಾಳ ಹಾಗೂ ಪಿಯು ಕಾಲೇಜುಗಳ ಸಹಯೋಗದಲ್ಲಿ ನಡೆದ ಜಿಲ್ಲಾಮಟ್ಟದ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ಉತ್ತಮ ಮತ್ತು ಆದರ್ಶ ವ್ಯಕ್ತಿತ್ವ ರೂಪಿಸುವಲ್ಲಿ ಪೋಷಕರೂ ಹಾಗೂ ಶಿಕ್ಷಕರೂ ಸಮಾನ ಜವಾಬ್ದಾರಿ ವಹಿಸಬೇಕೆಂದು ತಿಳಿಸಿದರು. ಮಕ್ಕಳ ಮುಂದೆ ಪೋಷಕರು ಜವಾಬ್ದಾರಿಯುತವಾಗಿ ವರ್ತಿಸಿದಾಗ ಮಾತ್ರ ಅವರಲ್ಲಿ ಒಳ್ಳೆಯ ಸಂಸ್ಕಾರ ಬೆಳೆಸುವ ಸಾಧ್ಯತೆಯಿದೆ ಎಂದರು.

ಮಕ್ಕಳ ದೈಹಿಕ ಮತ್ತು ಬೌದ್ಧಿಕ ಬೆಳವಣಿಗೆಯು ಸಮಾನವಾಗಿ ಮಹತ್ವದ್ದಾಗಿದ್ದು, ಮಕ್ಕಳೊಂದಿಗೆ ದೈನಂದಿನವಾಗಿ ಬೆರೆಯುವ ಅವಕಾಶ ಶಿಕ್ಷಕರಿಗಿರುವುದರಿಂದ ಅವರು ತಮ್ಮ ಪಾತ್ರವನ್ನು ಹೆಚ್ಚು ಜವಾಬ್ದಾರಿಯಿಂದ ನಿಭಾಯಿಸಬೇಕೆಂದು ಜಿಲ್ಲಾಧಿಕಾರಿ ಹೇಳಿದರು. ಪಾಕ್ಸೋ ಕಾಯ್ದೆ, ಮಕ್ಕಳ ಹಕ್ಕುಗಳು ಮತ್ತು ಸಂರಕ್ಷಣೆಯ ಕುರಿತ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಅವಶ್ಯಕತೆಯಾಗಿವೆ ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ್ ಪಾಟೀಲ್ ಮಾತನಾಡಿ, ದೇಶದ ಮೊದಲ ಪ್ರಧಾನಮಂತ್ರಿ ಪಂಡಿತ್ ಜವಾಹರ್ಲಾಲ್ ನೆಹರು ಅವರ ಜನ್ಮದಿನವನ್ನು ಮಕ್ಕಳ ದಿನವನ್ನಾಗಿ ಆಚರಿಸುವ ಉದ್ದೇಶವೇ ಮಕ್ಕಳ ಜವಾಬ್ದಾರಿ ಮತ್ತು ಹಕ್ಕುಗಳನ್ನು ಸ್ಮರಿಸುವುದು ಎಂದು ಹೇಳಿದರು. ಮಕ್ಕಳ ಆಸಕ್ತಿ ಇರುವ ಕ್ಷೇತ್ರಗಳಲ್ಲಿ ಅವರಿಗೆ ಅವಕಾಶ ನೀಡುವ ಜವಾಬ್ದಾರಿ ಪೋಷಕರ ಮತ್ತು ಶಿಕ್ಷಕರ ಮೇಲಿದೆ ಎಂದು ಅವರು ಸೂಚಿಸಿದರು.

ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ್ ಬೊಮ್ಮಕನವರ್ ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯದಾದ್ಯಂತ ನಡೆಯುತ್ತಿರುವ ಮಹಾಸಭೆಯಲ್ಲಿ ಸಮುದಾಯ ಸಹಕಾರ ಅತ್ಯಂತ ಅಗತ್ಯವೆಂದು ಅಭಿಪ್ರಾಯಿಸಿದರು.

ಜಿಲ್ಲೆಯಲ್ಲಿ ನಡೆದ ಮಹಾಸಭೆಯ ವಿವರ:
ಜಿಲ್ಲೆಯ 746 ಸರಕಾರಿ ಪ್ರಾಥಮಿಕ ಮತ್ತು 112 ಸರಕಾರಿ ಪ್ರೌಢಶಾಲೆಗಳನ್ನು ಸೇರಿ ಒಟ್ಟು 858 ಶಾಲೆಗಳಲ್ಲಿ ಕಾರ್ಯಕ್ರಮ ನಡೆಯಿತು. 3,33,337 ಶಾಲಾ ಮಕ್ಕಳು ಹಾಗೂ 36 ಪಿಯುಸಿ ಕಾಲೇಜುಗಳ 50,643 ವಿದ್ಯಾರ್ಥಿಗಳು ಪಾಲ್ಗೊಂಡರು. ಖಾಸಗಿ ಶಾಲಾ–ಕಾಲೇಜುಗಳನ್ನು ಒಳಗೊಂಡಂತೆ ಒಟ್ಟು 4,90,980 ವಿದ್ಯಾರ್ಥಿಗಳು ಭಾಗವಹಿಸಿದರು.

ಕಾರ್ಯಕ್ರಮದಲ್ಲಿ ಪಂಡಿತ್ ಜವಾಹರ್ಲಾಲ್ ನೆಹರು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಸಾಧನೆಗೈದ ವಿದ್ಯಾರ್ಥಿಗಳು ಮತ್ತು ದಾನಿಗಳನ್ನು ಸನ್ಮಾನಿಸಲಾಯಿತು. ಸ್ಕೌಟ್–ಗೈಡ್ ವಿದ್ಯಾರ್ಥಿಗಳಿಗೆ ಸಮವಸ್ತ್ರಗಳನ್ನು ವಿತರಿಸಲಾಯಿತು. ಶಾಲಾ ಮಕ್ಕಳಿಂದ ದೊಡ್ಡಾಟ ಹಾಗೂ ಸ್ತ್ರೀ ಕುಣಿತ ಪ್ರದರ್ಶನ ನೀಡಲಾಯಿತು.

ಮಕ್ಕಳ ಹಕ್ಕುಗಳು ಮತ್ತು ರಕ್ಷಣೆ ಕುರಿತು ವಕೀಲರು ಹಾಗೂ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯೆ ನೂರ್ ಜಹಾನ್ ಕಿಲ್ಲೇದಾರ್ ಉಪನ್ಯಾಸ ನೀಡಿದರು. ‘ಶಿಕ್ಷಣದಲ್ಲಿ ಭಾಗಿದಾರರ ಪಾತ್ರ’ ಕುರಿತು ಗೋಕುಲ ಪಿಯುಸಿ ಕಾಲೇಜಿನ ಪ್ರಾಚಾರ್ಯ ಎಫ್.ಬಿ. ಸೊರಟೂರ್ ಮಾರ್ಗದರ್ಶನ ನೀಡಿದರು.

ಕಾರ್ಯಕ್ರಮದಲ್ಲಿ ತಹಶೀಲ್ದಾರ ಜೆ.ಬಿ. ಮಜ್ಜಗಿ, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಸ್.ಎಸ್. ಕೆಳದಿಮಠ, ಪಿಯು ಶಿಕ್ಷಣ ಉಪ ನಿರ್ದೇಶಕಿ ತೇಜಸ್ವಿನಿ ನಾರಾಯಣಕರ, ರಾಯನಾಳ ಗ್ರಾಮ ಪಂಚಾಯತಿ ಅಧ್ಯಕ್ಷ ರುದ್ರಪ್ಪ ಮೇಟಿ, ಉಪಾಧ್ಯಕ್ಷೆ ಗಂಗಮ್ಮ ಮಾರಡಗಿ, ಕೆಡಿಪಿ ಸದಸ್ಯ ನಾಗರಾಜ ಹೆಗ್ಗಣ್ಣವರ ಸೇರಿದಂತೆ ಅಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.


Leave a Reply

Your email address will not be published. Required fields are marked *