ಧಾರವಾಡ: ಕೃಷಿ ಇಲಾಖೆಯ ವತಿಯಿಂದ ಆಯೋಜಿಸಲಾಗುತ್ತಿರುವ ಅಂತರಾಷ್ಟ್ರೀಯ ವಾಣಿಜ್ಯ ಮೇಳ-2025-26 ರ ಪೂರ್ವಭಾವಿಯಾಗಿ ಜಿಲ್ಲಾಮಟ್ಟದ ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳ (Land Races Products) ಪಾಕ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ರಾಜ್ಯಮಟ್ಟದ ಸ್ಪರ್ಧೆಗೆ ಪೂರಕವಾಗಿ ನಡೆಯುತ್ತಿರುವ ಈ ವಿಶಿಷ್ಟ ಸ್ಪರ್ಧೆಯು ಡಿಸೆಂಬರ್ 23 ರಂದು ಬೆಳಿಗ್ಗೆ 11 ಗಂಟೆಗೆ ನಗರದ ಧಾರವಾಡ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಜರುಗಲಿದೆ. ಪೌಷ್ಟಿಕಾಂಶಯುಕ್ತ ಸಿರಿಧಾನ್ಯಗಳ ಬಳಕೆ ಹಾಗೂ ನಮ್ಮ ಸಾಂಪ್ರದಾಯಿಕ ಆಹಾರ ಪದ್ಧತಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಈ ಪಾಕ ಸ್ಪರ್ಧೆಯಲ್ಲಿ ಜಿಲ್ಲೆಯ ಎಲ್ಲಾ ಸಾರ್ವಜನಿಕರಿಗೆ ಭಾಗವಹಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದ್ದು, ಕೃಷಿ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಉಳಿದ ಆಸಕ್ತರು ಪಾಲ್ಗೊಳ್ಳಬಹುದಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಅಭ್ಯರ್ಥಿಗಳು ತಮ್ಮ ಭಾವಚಿತ್ರದೊಂದಿಗೆ ಹೆಸರು, ಪೂರ್ಣ ವಿಳಾಸ ಹಾಗೂ ತಾವು ತಯಾರಿಸುವ ಖಾದ್ಯದ ವಿವರಗಳನ್ನು ತರಬೇಕು. ವಿಶೇಷವಾಗಿ ತಾವು ತಯಾರಿಸಿದ ಖಾದ್ಯದ ಜೊತೆಗೆ ಅದಕ್ಕೆ ಬೇಕಾಗುವ ಸಾಮಗ್ರಿಗಳು, ತಯಾರಿಸಲು ತಗಲುವ ಸಮಯ ಹಾಗೂ ತಯಾರಿಸುವ ವಿಧಾನದ ಕುರಿತು ಸಂಕ್ಷಿಪ್ತ ಮಾಹಿತಿಯನ್ನು ಸಿದ್ಧಪಡಿಸಿಕೊಂಡು ಖಾದ್ಯದೊಂದಿಗೆ ಹಾಜರಿರಬೇಕೆಂದು ಸೂಚಿಸಲಾಗಿದೆ.
ಸ್ಪರ್ಧೆಯ ಕುರಿತು ಹೆಚ್ಚಿನ ಮಾಹಿತಿ ಅಥವಾ ನೋಂದಣಿಗಾಗಿ ಆಸಕ್ತರು ದೂರವಾಣಿ ಸಂಖ್ಯೆಗಳಾದ 8277931374, 7795660295 ಅಥವಾ 7975916484 ಅನ್ನು ಸಂಪರ್ಕಿಸಬಹುದಾಗಿದೆ. ಜಿಲ್ಲೆಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಜಂಟಿ ಕೃಷಿ ನಿರ್ದೇಶಕರು ತಮ್ಮ ಪ್ರಕಟಣೆಯಲ್ಲಿ ಕೋರಿದ್ದಾರೆ.

