ಜನೆವರಿ 5 ರಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರಿಂದ ‘ಅಕ್ಕ ಪಡೆ’ ಯೋಜನೆಗೆ ಚಾಲನೆ

Spread the love

ಧಾರವಾಡ: ಸಂಕಷ್ಟದಲ್ಲಿರುವ ಹಾಗೂ ಅಪಾಯದ ಅಂಚಿನಲ್ಲಿರುವ ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗಾಗಿ ರಾಜ್ಯ ಸರ್ಕಾರವು ಮಹತ್ವಾಕಾಂಕ್ಷಿ ‘ಅಕ್ಕ ಪಡೆ’ ಯೋಜನೆಯನ್ನು ಜಾರಿಗೆ ತಂದಿದ್ದು, ಜನೆವರಿ 5 ರಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು ಈ ಯೋಜನೆಗೆ ಜಿಲ್ಲೆಯಲ್ಲಿ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ.

​ನಗರದ ಸೃಜನಾ ರಂಗಮಂದಿರದಲ್ಲಿ ಅಂದು ಬೆಳಿಗ್ಗೆ 10 ಗಂಟೆಗೆ ಆಯೋಜಿಸಲಾಗಿರುವ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಸಮಾವೇಶದಲ್ಲಿ ಸಚಿವರು ಈ ಹೊಸ ರಕ್ಷಣಾ ಪಡೆಗೆ ಹಸಿರು ನಿಶಾನೆ ತೋರಿಸಲಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಡಿಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಈ ಯೋಜನೆಯು ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಕಾರ್ಯನಿರ್ವಹಿಸಲಿದೆ.

ತುರ್ತು ರಕ್ಷಣೆಯೇ ಮುಖ್ಯ ಉದ್ದೇಶ:

ದೌರ್ಜನ್ಯಕ್ಕೊಳಗಾದ ಅಥವಾ ತುರ್ತು ನೆರವಿನ ಅಗತ್ಯವಿರುವ ದುರ್ಬಲ ಮಹಿಳೆಯರು ಮತ್ತು ಮಕ್ಕಳಿಗೆ ತಕ್ಷಣ ಸ್ಪಂದಿಸುವುದು ಈ ಪಡೆಯ ಪ್ರಮುಖ ಕಾರ್ಯವಾಗಿದೆ. ಇದಕ್ಕಾಗಿ ಇಲಾಖೆಯು ಪ್ರತಿ ಜಿಲ್ಲೆಗೆ ಸುಸಜ್ಜಿತವಾದ ಒಂದು ಹೊಸ ಮಹೀಂದ್ರಾ ಬೊಲೆರೋ ವಾಹನವನ್ನು ಒದಗಿಸಿದೆ. ಈ ವಾಹನಕ್ಕೆ ನಾಲ್ವರು ತರಬೇತಿ ಪಡೆದ ಮಹಿಳಾ ಗೃಹರಕ್ಷಕರನ್ನು ಒಳಗೊಂಡ ವಿಶೇಷ ತಂಡವನ್ನು ನಿಯೋಜಿಸಲಾಗಿದ್ದು, ಈ ತಂಡವು ತ್ವರಿತವಾಗಿ ಘಟನಾ ಸ್ಥಳಕ್ಕೆ ಧಾವಿಸಿ ಸಂತ್ರಸ್ತರಿಗೆ ರಕ್ಷಣೆ ನೀಡಲಿದೆ.

​ಸರ್ಕಾರದ ಮಾರ್ಗಸೂಚಿಯಂತೆ ಜಿಲ್ಲಾ ಮಟ್ಟದಲ್ಲಿ ಈ ಪಡೆಯನ್ನು ಮರುಹಂಚಿಕೆ ಮಾಡಲಾಗಿದ್ದು, ಈಗಾಗಲೇ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡಿದೆ. ಈ ಹೊಸ ವ್ಯವಸ್ಥೆಯು ಜಿಲ್ಲೆಯ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *