ನೌಕರರ ಹಿತಾಸಕ್ತಿ ಕಾಪಾಡಲು ಜಿಲ್ಲಾಡಳಿತ ಸಿದ್ಧ; ಪರಿಣಾಮಕಾರಿ ಸೇವೆಗೆ ಕೌಶಲ್ಯ ನವೀಕರಣ ಅಗತ್ಯ: ಜಿಲ್ಲಾಧಿಕಾರಿ ದಿವ್ಯ ಪ್ರಭು

Spread the love

🏛️ ನೌಕರರ ಹಿತಾಸಕ್ತಿ ಕಾಪಾಡಲು ಜಿಲ್ಲಾಡಳಿತ ಸಿದ್ಧ; ಪರಿಣಾಮಕಾರಿ ಸೇವೆಗೆ ಕೌಶಲ್ಯ ನವೀಕರಣ ಅಗತ್ಯ: ಜಿಲ್ಲಾಧಿಕಾರಿ ದಿವ್ಯ ಪ್ರಭು

ಧಾರವಾಡ, ನ.12: ಸರ್ಕಾರಿ ಸೇವೆಗಳನ್ನು ಪರಿಣಾಮಕಾರಿಯಾಗಿ ಸಾರ್ವಜನಿಕರಿಗೆ ತಲುಪಿಸುವಲ್ಲಿ ಸರ್ಕಾರಿ ನೌಕರರ ಪಾತ್ರ ಪ್ರಮುಖವಾಗಿದ್ದು, ಅವರ ಹಿತಾಸಕ್ತಿ ಕಾಪಾಡಲು ಹಾಗೂ ಎಲ್ಲ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಲು ಜಿಲ್ಲಾಡಳಿತ ಸದಾ ಸಿದ್ಧವಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ಜಿಲ್ಲಾ ಘಟಕದ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾದ ಎಚ್.ಆರ್.ಎಂ.ಎಸ್-2, ಇಎಸ್‌ಆರ್ ಮತ್ತು ಕೆಎಸ್‌ಎಸ್ ಯೋಜನೆ ಕುರಿತ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯ ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿ, ಜಿಲ್ಲೆಗೆ ಹಲವು ಪ್ರಶಸ್ತಿಗಳನ್ನು ತಂದುಕೊಡುವಲ್ಲಿ ನೌಕರರ ಬದ್ಧತೆ ಮತ್ತು ಸಕ್ರಿಯ ಪಾಲ್ಗೊಳ್ಳುವಿಕೆ ಕಾರಣವಾಗಿದೆ ಎಂದು ಶ್ಲಾಘಿಸಿದರು. ವೃತ್ತಿಯಲ್ಲಿ ಕೌಶಲ್ಯ ಮತ್ತು ನೈಪುಣ್ಯತೆಯನ್ನು ವೃದ್ಧಿಪಡಿಸಲು ಕಾಲಕಾಲಕ್ಕೆ ತರಬೇತಿ ಅಗತ್ಯವಿದೆ ಎಂದು ಅವರು ಹೇಳಿದರು.

ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಕ್ಕಾಗಿ ಭಾಗವಹಿಸಿದ ನೌಕರರಿಗೆ ಗೌರವಧನ ನೀಡಲು ಸರ್ಕಾರದಿಂದ 7 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದೆ ಎಂದು ಅವರು ಮಾಹಿತಿ ನೀಡಿದರು. ತಹಶೀಲ್ದಾರರಿಗೆ ಸಮೀಕ್ಷೆ ಕೈಗೊಂಡ ಸಿಬ್ಬಂದಿಗಳಿಗೆ ಗೌರವಧನ ಬಿಡುಗಡೆ ಮಾಡಲು ಸೂಚಿಸಲಾಗಿದೆ. ಸಮೀಕ್ಷೆಯ ಸಮಯದಲ್ಲಿ ಅಪಘಾತ ಅಥವಾ ಅನಾರೋಗ್ಯಕ್ಕೆ ಒಳಗಾದ ನೌಕರರ ಮನವಿಗಳನ್ನು ಪರಿಗಣಿಸಿ, ಕೆಸಿಎಸ್‌ಆರ್ ನಿಯಮಾವಳಿಯ ಪ್ರಕಾರ ಅವರಿಗೆ ವಿಶೇಷ ರಜೆ ಮತ್ತು ವೈದ್ಯಕೀಯ ವೆಚ್ಚ ಮರುಪಾವತಿ ನೀಡಲು ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಸರ್ಕಾರಿ ನೌಕರರ ಆರೋಗ್ಯ ರಕ್ಷಣೆಗಾಗಿ ಜಾರಿಯಲ್ಲಿರುವ ಆರೋಗ್ಯ ಸಂಜೀವಿನಿ ಯೋಜನೆಗೆ ಜಿಲ್ಲೆಯಲ್ಲಿ ಹೆಚ್ಚಿನ ಆಸ್ಪತ್ರೆಗಳು ನೋಂದಣಿಯಾಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಭರವಸೆ ನೀಡಿದರು. ಈಗಾಗಲೇ ಹುಬ್ಬಳ್ಳಿಯ 13 ಆಸ್ಪತ್ರೆಗಳು ನೋಂದಣಿಯಾಗಿದ್ದು, ಇನ್ನೂ ಐದು ಆಸ್ಪತ್ರೆಗಳು ಒಪ್ಪಿಗೆ ನೀಡಿವೆ. ನೌಕರರ ಹಿತದೃಷ್ಟಿಯಿಂದ ಮುಂದಿನ ವಾರದಲ್ಲಿ ಭಾರತೀಯ ವೈದ್ಯಕೀಯ ಸಂಘ ಹಾಗೂ ಪ್ರಮುಖ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿ ಹೆಚ್ಚಿನ ಆಸ್ಪತ್ರೆಗಳನ್ನು ಯೋಜನೆಗೆ ಸೇರಿಸಲಾಗುವುದು ಎಂದರು.

ನೌಕರರ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಲು ಜಿಲ್ಲಾಡಳಿತ ಹೆಚ್ಚಿನ ಮುತುವರ್ಜಿ ವಹಿಸಲಿದೆ ಎಂದು ಅವರು ಹೇಳಿದರು. ಇಲಾಖೆಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರೂ ತಮ್ಮ ಕಾರ್ಯಕ್ಕೆ ಸಂಬಂಧಿಸಿದ ಸಂಪೂರ್ಣ ತಿಳುವಳಿಕೆ ಹೊಂದಿರಬೇಕು. ಆಧುನಿಕ ತಂತ್ರಜ್ಞಾನ ಬಳಕೆಯು ಆಡಳಿತದ ಪಾರದರ್ಶಕತೆ ಮತ್ತು ದಕ್ಷತೆಯನ್ನು ಹೆಚ್ಚಿಸುತ್ತಿದೆ. ಎಚ್.ಆರ್.ಎಂ.ಎಸ್-2, ಇಎಸ್‌ಆರ್ ಮತ್ತು ಕೆ-2 ನಂತಹ ತಂತ್ರಾಂಶಗಳು ಆಡಳಿತ ಸರಳೀಕರಣಕ್ಕೆ ಸಹಕಾರಿಯಾಗಿವೆ ಎಂದು ಹೇಳಿದರು.

ನೌಕರರು ತಮ್ಮ ಕೌಶಲ್ಯ ಮತ್ತು ಜ್ಞಾನವನ್ನು ಕಾಲಾನುಗತವಾಗಿ ನವೀಕರಿಸಿಕೊಳ್ಳಬೇಕು. ಇಂದಿನ ವೇಗದ ಜಗತ್ತಿನಲ್ಲಿ ತಂತ್ರಜ್ಞಾನ ಮತ್ತು ಆಡಳಿತಾತ್ಮಕ ಪದ್ಧತಿಗಳು ನಿರಂತರವಾಗಿ ಬದಲಾಗುತ್ತಿದ್ದು, ತರಬೇತಿಗಳ ಸದುಪಯೋಗ ಪಡೆದು ತಂತ್ರಾಂಶಗಳ ಪರಿಣಾಮಕಾರಿ ಬಳಕೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ಮಾತನಾಡಿ, ಕೆಲಸದ ಒತ್ತಡದ ನಡುವೆಯೂ ನೌಕರರು ತಮ್ಮ ಆರೋಗ್ಯದ ಕಡೆ ಗಮನಹರಿಸಬೇಕು ಮತ್ತು ತಾಂತ್ರಿಕವಾಗಿ ನೈಪುಣ್ಯತೆಯನ್ನು ವೃದ್ಧಿಪಡಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಾಗಾರದ ವೇದಿಕೆಯಲ್ಲಿ ಬೆಂಗಳೂರು ಯೋಜನಾ ನಿರ್ದೇಶಕರ ಕಚೇರಿಯ ಅಧಿಕಾರಿಗಳು ಹಾಗೂ ನೌಕರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ನೂತನವಾಗಿ ರಾಜ್ಯ ಉಪಾಧ್ಯಕ್ಷರಾಗಿ ನೇಮಕಗೊಂಡ ಜಿಲ್ಲಾ ಅಧ್ಯಕ್ಷ ಎಸ್.ಎಫ್. ಸಿದ್ದನಗೌಡರ ಮತ್ತು ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ನೇಮಕಗೊಂಡ ರಮೇಶ್ ಎಂ. ಹೋಲ್ತಿಕೊಟಿ ಅವರನ್ನು ಸನ್ಮಾನಿಸಲಾಯಿತು.

Leave a Reply

Your email address will not be published. Required fields are marked *