ವಿಕಲಚೇತನತೆ ದೌರ್ಬಲ್ಯವಲ್ಲ, ವಿಶೇಷ ಚೈತನ್ಯ: ಡಾ. ಕಮಲಾ ಬೈಲೂರ

Spread the love

ಧಾರವಾಡ: ವಿಕಲಚೇತನತೆಯು ದೌರ್ಬಲ್ಯವಲ್ಲ, ಬದಲಿಗೆ ಅವರಲ್ಲಿ ವಿಶೇಷ ಚೈತನ್ಯ ಮತ್ತು ಕೌಶಲ್ಯ ಅಡಗಿದೆ. ಅವರು ಆತ್ಮಸ್ಥೈರ್ಯದಿಂದ ಸಾಧನೆಗೆ ಮುಂದಾಗಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರೂಪಣಾಧಿಕಾರಿ ಡಾ. ಕಮಲಾ ಬೈಲೂರ ಅವರು ಕರೆ ನೀಡಿದರು.

​ಅವರು ಗುರುವಾರದಂದು (ನ.27) ನಗರದ ಆರ್.ಎನ್. ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ವಿಕಲಚೇತನರ ಕ್ರೀಡಾ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಈ ಕಾರ್ಯಕ್ರಮವನ್ನು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹು-ಧಾ ಮಹಾನಗರ ಪಾಲಿಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಲಾಗಿತ್ತು.

​ವಿಕಲಚೇತನರಿಗೆ ಅಗತ್ಯವಿರುವ ಸಹಾಯ, ಪ್ರೋತ್ಸಾಹ ಮತ್ತು ಸೌಲಭ್ಯಗಳನ್ನು ಒದಗಿಸುವುದು ಸರ್ಕಾರ ಮತ್ತು ಸಮಾಜದ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಡಾ. ಕಮಲಾ ಬೈಲೂರ ಹೇಳಿದರು. ಅವರನ್ನು ಕೇವಲ ದಯೆ ಅಥವಾ ಕರುಣೆಯ ದೃಷ್ಟಿಯಿಂದ ನೋಡದೆ, ಅವರಲ್ಲಿರುವ ಕೌಶಲ್ಯ, ಪ್ರತಿಭೆ ಮತ್ತು ಸಾಮರ್ಥ್ಯಗಳನ್ನು ಗುರುತಿಸಿ, ಸೂಕ್ತ ವೇದಿಕೆ ಕಲ್ಪಿಸುವುದು ಅತ್ಯಂತ ಮುಖ್ಯ ಎಂದು ಅವರು ಪ್ರತಿಪಾದಿಸಿದರು.

​ಇದೇ ವೇಳೆ ಅತಿಥಿಯಾಗಿದ್ದ ಬಸೀರ್ ಅಹಮ್ಮದ್ ಜಮಾದಾರ ಅವರು ಮಾತನಾಡಿ, ವಿಕಲಚೇತನರ ಸಾಮರ್ಥ್ಯಕ್ಕೆ ವೇದಿಕೆ ಕಲ್ಪಿಸುವುದು ಸಮಾಜದ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಅವರನ್ನು ಪ್ರೋತ್ಸಾಹಿಸುವ ಮನೋಭಾವ ಎಲ್ಲರಿಗೂ ಸ್ಫೂರ್ತಿದಾಯಕವಾದದ್ದು. ಕ್ರೀಡಾಂಗಣದಲ್ಲಿ ಆಯೋಜಿಸಿರುವ ಇಂತಹ ಸ್ಪರ್ಧೆಗಳು ಅವರಿಗೆ ಆತ್ಮವಿಶ್ವಾಸ ಹೆಚ್ಚಿಸಲು, ಪ್ರತಿಭೆ ಪ್ರದರ್ಶಿಸಲು ಮತ್ತು ಸಮಾಜದ ಮುಖ್ಯವಾಹಿನಿಗೆ ಸೇರಿಕೊಳ್ಳಲು ನೆರವಾಗುತ್ತವೆ ಎಂದು ಹೇಳಿದರು.

​ಕಾರ್ಯಕ್ರಮದ ವೇದಿಕೆಯಲ್ಲಿ ಮಜೇಥಿಯಾ ಫೌಂಡೇಶನ್ ಸಿಇಓ ಡಾ. ಸುನೀಲ್‌ಕುಮಾರ್ ಕುಕನೂರ, ವಿಶ್ವಧರ್ಮ ಸಮೂಹ ಸಂಸ್ಥೆಯ ಕಾರ್ಯದರ್ಶಿ ಐ.ಕೆ. ಲಕ್ಕುಂಡಿ, ಪ್ರಿಯದರ್ಶಿನಿ ಶ್ರವಣ ನ್ಯೂನತೆವುಳ್ಳ ಮಕ್ಕಳ ಶಾಲೆಯ ಅಧ್ಯಕ್ಷ ಡಿ.ಡಿ. ಮೆಚ್ಚಣ್ಣವರ, ವಿಶ್ವಧರ್ಮ ಬುದ್ಧಿಮಾಂದ್ಯ ಮಕ್ಕಳ ಶಾಲೆಯ ಅಧೀಕ್ಷಕ ಗುರು ಲಕ್ಕುಂಡಿ ಹಾಗೂ ಸರ್ಕಾರಿ ಅಂಧ ಮಕ್ಕಳ ಶಾಲೆಯ ಅಧೀಕ್ಷಕ ಎಂ.ಆರ್. ಸಾಬೋಜಿ ಅವರು ಉಪಸ್ಥಿತರಿದ್ದರು.

​ಕಾರ್ಯಕ್ರಮದಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಸವಿತಾ ಕಾಳೆ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹುಬ್ಬಳ್ಳಿ ಸರಕಾರಿ ಅಂದ ಬಾಲಕರ ಶಾಲೆಯ ಶಿಕ್ಷಕ ಅಣ್ಣಪ್ಪ ಕೋಳಿ ಅವರು ಕಾರ್ಯಕ್ರಮವನ್ನು ನಿರೂಪಿಸಿ, ವಂದನಾರ್ಪಣೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಸಂಘ ಸಂಸ್ಥೆಗಳ ವಿಕಲಚೇತನ ಮಕ್ಕಳು, ಪುನರ್ವಸತಿ ಕಾರ್ಯಕರ್ತರು ಮತ್ತು ಸಾರ್ವಜನಿಕರು ಉತ್ಸಾಹದಿಂದ ಭಾಗವಹಿಸಿದ್ದರು.

Leave a Reply

Your email address will not be published. Required fields are marked *