
ಧಾರವಾಡ: ನಗರದ ಮರಾಠಾ ಕಾಲನಿಯ ಯುನಿಟಿ ಆಸ್ಪತ್ರೆ ಸಮೀಪ ಶನಿವಾರ ಬೆಳಿಗ್ಗೆ ಮರಳು ತುಂಬಿದ ಟಿಪ್ಪರ್ನಿಂದ ಭೀಕರ ಸರಣಿ ಅಪಘಾತ ಸಂಭವಿಸಿದ್ದು, ಮಿತಿಮೀರಿ ಮರಳು ಸಾಗಿಸುವ ಟಿಪ್ಪರ್ಗಳ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಯಮ ಬಾಹಿರವಾಗಿ ಟಿಪ್ಪರ್ನಲ್ಲಿ ಹೆಚ್ಚು ಮರಳು ತುಂಬಿಕೊಂಡು ನಗರದ ಜನನಿಬಿಡ ಪ್ರದೇಶಗಳಲ್ಲಿ ಸಂಚರಿಸುತ್ತಿರುವುದೇ ಇಂತಹ ಅನಾಹುತಗಳಿಗೆ ಮೂಲ ಕಾರಣ ಎಂದು ಸ್ಥಳೀಯರು ಕಿಡಿಕಾರಿದ್ದಾರೆ.
ಶನಿವಾರ ಬೆಳಿಗ್ಗೆ ಮರಳು ತುಂಬಿದ ಟಿಪ್ಪರ್ ಮರಾಠಾ ಕಾಲನಿ ರಸ್ತೆಯಲ್ಲಿ ಸಂಚರಿಸುತ್ತಿದ್ದಾಗ ಹಠಾತ್ ಬ್ರೇಕ್ ವೈಫಲ್ಯ ಸಂಭವಿಸಿದೆ. ಮಿತಿಮೀರಿದ ಭಾರದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಟಿಪ್ಪರ್, ರಸ್ತೆ ಬದಿಯಲ್ಲಿ ನಿಂತಿದ್ದ ಹಾಗೂ ಚಲಿಸುತ್ತಿದ್ದ ಒಂದು ಕಾರು ಮತ್ತು ಮೂರು ಬೈಕ್ಗಳಿಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ವಾಹನಗಳು ಅಪ್ಪಚ್ಚಿಯಾಗಿದ್ದು, ಕೂದಲೆಳೆ ಅಂತರದಲ್ಲಿ ಭಾರಿ ಪ್ರಾಣಾಪಾಯ ತಪ್ಪಿದೆ. ಲಾಭದ ಆಸೆಗೆ ಬಿದ್ದು ಮಿತಿಮೀರಿ ಮರಳು ತುಂಬುವ ಮಾಲೀಕರು ಮತ್ತು ಚಾಲಕರು ವಾಹನಗಳ ತಾಂತ್ರಿಕ ಸ್ಥಿತಿಯನ್ನು ಕಡೆಗಣಿಸಿ ಜನರ ಜೀವದ ಜೊತೆ ಆಟವಾಡುತ್ತಿದ್ದಾರೆ ಎಂದು ಸಾರ್ವಜನಿಕರು ಖಂಡಿಸಿದ್ದಾರೆ.

ಅಪಘಾತ ಸಂಭವಿಸಿದ ತಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸಂಚಾರಿ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ವಾಹನಗಳನ್ನು ತೆರವುಗೊಳಿಸುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಘಟನೆಗೆ ಸಂಬಂಧಿಸಿದಂತೆ ಟಿಪ್ಪರ್ ಅನ್ನು ವಶಕ್ಕೆ ಪಡೆದಿರುವ ಪೊಲೀಸರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಗರ ಪ್ರದೇಶಗಳಲ್ಲಿ ಇಂತಹ ಭಾರೀ ವಾಹನಗಳ ಸಂಚಾರಕ್ಕೆ ಕಟ್ಟುನಿಟ್ಟಿನ ನಿಯಮ ರೂಪಿಸಬೇಕು ಹಾಗೂ ಮಿತಿಮೀರಿ ಮರಳು ಸಾಗಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಡಳಿತಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

