ಧಾರವಾಡ: ನಗರದ ವಿವಿಧ ಬಡಾವಣೆಗಳ ರಸ್ತೆ ಬದಿ ಹಾಗೂ ವಿವಿಧ ಕಚೇರಿಗಳ ಆವರಣದಲ್ಲಿ ಅಪಾಯಕಾರಿ ಸ್ಥಿತಿಯಲ್ಲಿರುವ ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆಯು ಜನೆವರಿ 08 ರಂದು ಬಹಿರಂಗ ಹರಾಜು ಪ್ರಕ್ರಿಯೆಯನ್ನು ಹಮ್ಮಿಕೊಂಡಿದೆ.
ನಗರದ ಸಾರ್ವಜನಿಕ ಸ್ಥಳಗಳಲ್ಲಿ ಸಂಚಾರಕ್ಕೆ ಹಾಗೂ ಕಟ್ಟಡಗಳಿಗೆ ಮುಳುವಾಗುವಂತಿರುವ ಒಟ್ಟು 32 ಮರಗಳು ಮತ್ತು 39 ಮರದ ಟೊಂಗೆಗಳನ್ನು ಕಡಿಯಲು ಈ ಹರಾಜು ನಡೆಸಲಾಗುತ್ತಿದೆ. ಆಸಕ್ತರು ಜನೆವರಿ 08, 2026 ರಂದು ಮಧ್ಯಾಹ್ನ 3 ಗಂಟೆಗೆ ಧಾರವಾಡದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯಲ್ಲಿ ನಡೆಯಲಿರುವ ಹರಾಜಿನಲ್ಲಿ ಭಾಗವಹಿಸಬಹುದಾಗಿದೆ.
ಮರ ಸಂರಕ್ಷಣಾ ಕಾಯ್ದೆ 1976 ರ ಅನ್ವಯ ಈ ಮರಗಳ ತೆರವಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಯಾವುದೇ ತಕರಾರುಗಳನ್ನು ಹೊಂದಿದ್ದಲ್ಲಿ, ಜನೆವರಿ 07 ರ ಒಳಗಾಗಿ ಲಿಖಿತ ರೂಪದಲ್ಲಿ ದೂರು ಸಲ್ಲಿಸಲು ಅವಕಾಶ ನೀಡಲಾಗಿದೆ. ತಕರಾರು ಇರುವವರು ಧಾರವಾಡದ ಕೆ.ಸಿ. ಪಾರ್ಕ್ ಎದುರಿಗಿನ ಅರಣ್ಯ ಸಂಕೀರ್ಣದಲ್ಲಿರುವ ಮರ ಅಧಿಕಾರಿಯವರಿಗೆ ಅಥವಾ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ತಮ್ಮ ಮನವಿ ಸಲ್ಲಿಸಬಹುದಾಗಿದೆ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.

