ಧಾರವಾಡ ಜಿಲ್ಲೆಯಲ್ಲಿ ಬೆಂಬಲ ಬೆಲೆಯಡಿ 13,340 ಕ್ವಿಂಟಲ್ ಹೆಸರು ಖರೀದಿ: ರೈತರಿಗೆ 9.51 ಕೋಟಿ ರೂ. ಹಣ ಪಾವತಿ

Spread the love

ಧಾರವಾಡ: ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಧಾರವಾಡ ಜಿಲ್ಲೆಯಲ್ಲಿ ಎಫ್.ಎ.ಕ್ಯೂ ಗುಣಮಟ್ಟದ 13,340.50 ಕ್ವಿಂಟಲ್ ಹೆಸರು ಕಾಳು ಉತ್ಪನ್ನವನ್ನು ಖರೀದಿಸಲಾಗಿದ್ದು, ಈವರೆಗೆ 1,512 ರೈತರಿಗೆ ಒಟ್ಟು 9,51,85,408 ರೂಪಾಯಿಗಳನ್ನು ಡಿಬಿಟಿ ಮೂಲಕ ನೇರವಾಗಿ ಅವರ ಖಾತೆಗಳಿಗೆ ಪಾವತಿಸಲಾಗಿದೆ ಎಂದು ಕೃಷಿ ಮಾರುಕಟ್ಟೆ ಇಲಾಖೆಯ ಉಪನಿರ್ದೇಶಕ ವಿ.ಎಮ್. ಲಮಾಣಿ ತಿಳಿಸಿದ್ದಾರೆ. ಬಾಕಿ ಇರುವ ಸುಮಾರು 210 ರೈತರಿಗೆ ಹಣ ಪಾವತಿಸುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಬರುವ ಶನಿವಾರದೊಳಗೆ ಬಾಕಿ ಮೊತ್ತ ಪಾವತಿಯಾಗಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಜಿಲ್ಲೆಯಲ್ಲಿ ಸಪ್ಟೆಂಬರ್ 2025 ರಿಂದ ಜನವರಿ 22, 2026 ರವರೆಗೆ ಪ್ರತಿ ಕ್ವಿಂಟಲ್ ಹೆಸರು ಕಾಳಿಗೆ 8,768 ರೂಪಾಯಿಗಳ ದರ ನಿಗದಿಪಡಿಸಿ ಖರೀದಿ ಪ್ರಕ್ರಿಯೆ ನಡೆಸಲಾಗಿತ್ತು.

​ಈ ಬಾರಿ ಜಿಲ್ಲೆಯ 97,406 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬಿತ್ತನೆಯಾಗಿದ್ದರೂ, ಮುಂಗಾರು ಹಂಗಾಮಿನಲ್ಲಿ ಸುರಿದ ಅತಿಯಾದ ಮಳೆಯಿಂದಾಗಿ ಉತ್ಪನ್ನದ ಗುಣಮಟ್ಟದ ಮೇಲೆ ಭಾರಿ ಪರಿಣಾಮ ಬೀರಿದೆ. ಮಳೆಯ ಕಾರಣದಿಂದ ಹೆಸರು ಕಾಳುಗಳು ಸಂಪೂರ್ಣ ಕಪ್ಪಾಗಿದ್ದು, ಎಫ್.ಎ.ಕ್ಯೂ ಗುಣಮಟ್ಟದ ಖರೀದಿ ಗುರಿ ತಲುಪುವುದು ಕಷ್ಟ ಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ರೈತರಿಗೆ ಅನುಕೂಲವಾಗುವಂತೆ ಗುಣಮಟ್ಟದ ವರ್ಗೀಕರಣದಲ್ಲಿ ಸಡಲಿಕೆ ಮಾಡಿ ದರ ನಿಗದಿಪಡಿಸುವಂತೆ ಧಾರವಾಡ ಜಿಲ್ಲಾಧಿಕಾರಿಗಳು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಸರ್ಕಾರದ ಮುಂದಿನ ನಿರ್ದೇಶನದ ಮೇರೆಗೆ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.

​ಇದೇ ವೇಳೆ, ಬ್ಯಾಹಟ್ಟಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಖರೀದಿ ಕೇಂದ್ರದಲ್ಲಿ ಉತ್ಪನ್ನ ಮಾರಾಟ ಮಾಡಿದ್ದ ಸುಮಾರು 72 ರೈತರ ಹೆಸರು ಕಾಳು ಎಫ್.ಎ.ಕ್ಯೂ ಗುಣಮಟ್ಟ ಹೊಂದಿರದ ಕಾರಣ, ಖರೀದಿ ಸಂಸ್ಥೆಯು ಆ ಉತ್ಪನ್ನಗಳನ್ನು ಹಿಂದಿರುಗಿಸಲು ಕ್ರಮ ಕೈಗೊಂಡಿದೆ. ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯ ಮಾರಾಟ ಮಹಾಮಂಡಳದ ಮೂಲಕ ಒಟ್ಟು 23 ಖರೀದಿ ಕೇಂದ್ರಗಳನ್ನು ಸ್ಥಾಪಿಸಿ ಈ ಖರೀದಿ ಪ್ರಕ್ರಿಯೆ ನಡೆಸಲಾಗಿತ್ತು. ರಾಜ್ಯದ ಒಟ್ಟು 14 ಜಿಲ್ಲೆಗಳಿಂದ 38 ಸಾವಿರ ಮೆಟ್ರಿಕ್ ಟನ್ ಹೆಸರು ಖರೀದಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ಗುಣಮಟ್ಟದ ಸಡಲಿಕೆಯ ಕುರಿತು ಸರ್ಕಾರದ ನಿರ್ಧಾರಕ್ಕಾಗಿ ರೈತರು ಕಾಯುತ್ತಿದ್ದಾರೆ.

Leave a Reply

Your email address will not be published. Required fields are marked *