
ಧಾರವಾಡ: ಸಾಹಿತ್ಯ ಎಂಬುದು ಕೇವಲ ಅಕ್ಷರಗಳ ಜೋಡಣೆಯಲ್ಲ, ಅದು ಮನುಷ್ಯತ್ವದ ಘನತೆಯನ್ನು ಎತ್ತಿ ಹಿಡಿಯುವ ಶಕ್ತಿಯಾಗಬೇಕು. ಕರುಣೆ ಮತ್ತು ಕ್ರೌರ್ಯಗಳ ನಡುವಿನ ಸಂಘರ್ಷದಲ್ಲಿ ಯಾವಾಗಲೂ ಕಾರುಣ್ಯವೇ ಜಯಗಳಿಸಬೇಕು ಎಂದು ಖ್ಯಾತ ಸಾಹಿತಿ ಪ್ರೊ. ರಾಘವೇಂದ್ರ ಪಾಟೀಲರು ಆಶಯ ವ್ಯಕ್ತಪಡಿಸಿದರು.
ನಗರದ ಅನುಷ್ಕಾ ಪ್ರಕಾಶನ ಹಾಗೂ ಹಿರೇಮಲ್ಲೂರು ಈಶ್ವರನ್ ಪದವಿಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ನಾಲ್ಕು ಪ್ರಮುಖ ಕೃತಿಗಳ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ಸಾಹಿತ್ಯವು ಒಂದು ಉನ್ನತ ಕಲೆಯಾಗಿದ್ದು, ಅದು ಮಾನವನ ಅನುಭವದ ಸಾರವನ್ನು ಹಿಡಿದಿಟ್ಟು ಓದುಗನ ಜೀವನಕ್ಕೆ ಅರ್ಥಪೂರ್ಣ ದಾರಿಯನ್ನು ತೋರಿಸಬೇಕು ಎಂದ ಅವರು, ಬಿಡುಗಡೆಗೊಂಡ ಕೃತಿಗಳ ಲೇಖಕರಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಪ್ರೊ. ಮಾಲತಿ ಪಟ್ಟಣಶೆಟ್ಟಿಯವರ ‘ಕಣ್ಣಂಚಿನ ತಾರೆ’, ವಿಕಾಸ ಹೊಸಮನಿಯವರ ‘ಜೀವ ಸಂವಾದ’, ಡಾ. ಸುಭಾಷ್ ಪಟ್ಟಾಜೆಯವರ ‘ಕಾಡುಸಂಪಿಗೆ’ ಹಾಗೂ ‘ಮಾಲತಿ ಪಟ್ಟಣಶೆಟ್ಟಿ ವ್ಯಕ್ತಿತ್ವ-ಸಾಹಿತ್ಯ’ ಎಂಬ ನಾಲ್ಕು ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಲಾಯಿತು. ‘ಜೀವ ಸಂವಾದ’ ಕೃತಿಯ ಕುರಿತು ಮಾತನಾಡಿದ ಪ್ರೊ. ಅರುಂಧತಿ ಸವದತ್ತಿಯವರು, ಐದು ದಶಕಗಳ ಸುದೀರ್ಘ ಕಾದಂಬರಿ ಸಾಹಿತ್ಯವನ್ನು ಸಿಂಹಾವಲೋಕನ ಮಾಡುವ ಕಷ್ಟಕರ ಕೆಲಸವನ್ನು ಲೇಖಕರು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಡಾ. ಅನಿತಾ ಗುಡಿಯವರು ‘ಮಾಲತಿ ಪಟ್ಟಣಶೆಟ್ಟಿ ವ್ಯಕ್ತಿತ್ವ-ಸಾಹಿತ್ಯ’ ಕೃತಿಯನ್ನು ವಿಶ್ಲೇಷಿಸಿ, ಸಂಘರ್ಷಮಯ ಜೀವನದ ನಡುವೆಯೂ ಮಾಲತಿಯವರು ಸಾಹಿತ್ಯ ಲೋಕದಲ್ಲಿ ಮಾಡಿದ ಸಾಧನೆ ಇಂದಿನ ಯುವತಿಯರಿಗೆ ದೊಡ್ಡ ಸ್ಫೂರ್ತಿಯಾಗಿದೆ. ಈ ಕೃತಿಯು ಅವರ ವ್ಯಕ್ತಿತ್ವವನ್ನು ವಸ್ತುನಿಷ್ಠವಾಗಿ ಕಟ್ಟಿಕೊಟ್ಟಿದೆ ಎಂದರು. ಹಾಗೆಯೇ ‘ಕಾಡುಸಂಪಿಗೆ’ ಕಥಾಸಂಕಲನದ ಬಗ್ಗೆ ಮಾತನಾಡಿದ ಲಿಂಗರಾಜ ಸೊಟ್ಟಪ್ಪನವರು, ಗಂಡು-ಹೆಣ್ಣಿನ ಸಂಕೀರ್ಣ ಸಂಬಂಧಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸುವ ಈ ಕಥೆಗಳು ಪ್ರೇಮ ಮತ್ತು ಕಾಮದ ಕುರಿತು ಮರುಚಿಂತನೆ ನಡೆಸುವಂತೆ ಪ್ರೇರೇಪಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರೇಮಲ್ಲೂರು ಈಶ್ವರನ್ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಪ್ರೊ. ಶಶಿಧರ ತೋಡಕರ ವಹಿಸಿದ್ದರು. ವೇದಿಕೆಯಲ್ಲಿ ಸಾಹಿತಿಗಳಾದ ಪ್ರೊ. ಮಾಲತಿ ಪಟ್ಟಣಶೆಟ್ಟಿ, ವಿಕಾಸ ಹೊಸಮನಿ ಹಾಗೂ ಡಾ. ಸುಭಾಷ್ ಪಟ್ಟಾಜೆ ಉಪಸ್ಥಿತರಿದ್ದರು. ಕುಮಾರಿ ಡಿಂಪಲ್ ಪ್ರಾರ್ಥಿಸಿದರು, ನಗೀನಾ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರೆ, ಪ್ರೊ. ಸೀಮಾ ಕುಲಕರ್ಣಿ ವಂದನಾರ್ಪಣೆ ಮಾಡಿದರು.

