
ಧಾರವಾಡ: ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳ ಜೊತೆಗೆ ಸಂಗೀತ ಲೋಕಕ್ಕೆ ಅಪಾರ ಕೊಡುಗೆ ನೀಡುತ್ತಿರುವ ಧಾರವಾಡ ಕರೋಕೆ ತಂಡದ ಸೇವೆ ಅತ್ಯಂತ ಶ್ಲಾಘನೀಯವಾಗಿದೆ ಎಂದು ಬೇಲೂರು ಶಿವಾನಂದ ಮಠದ ಶ್ರೀ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು. ನಗರದ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಧಾರವಾಡ ಕರೋಕೆ ತಂಡ ಹಮ್ಮಿಕೊಂಡಿದ್ದ ‘ಕನ್ನಡ ಗಾನ ಕೌಸ್ತುಭ-2025’ ರ ಏಳನೇ ಆವೃತ್ತಿಯ ಕನ್ನಡ ಗೀತೆಗಳ ಸಂಗೀತ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. ಪ್ರತಿಯೊಬ್ಬರೂ ಜೀವನದಲ್ಲಿ ಒಂದು ಒಳ್ಳೆಯ ಗುರಿಯನ್ನು ಹೊಂದಿರಬೇಕು ಹಾಗೂ ಸಾಧಕರಾಗಿ ಬದುಕಬೇಕು ಎಂದು ಕರೆ ನೀಡಿದ ಶ್ರೀಗಳು, ಕಳೆದ ಏಳು ವರ್ಷಗಳಿಂದ ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಿರುವ ಕರೋಕೆ ತಂಡದ ಕಲಾ ಸೇವೆ ನಿರಂತರವಾಗಿ ಸಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕೇಶ್ವಾಪುರ ಚರ್ಚಿನ ಡಾ. ಮೈಕಲ್ ಸೌಝಾ ಜೋಸೆಫ್ ಮಾತನಾಡಿ, ಸಂಗೀತವು ಕೇವಲ ಮನೋರಂಜನೆಯಲ್ಲದೆ ಹಲವಾರು ರೋಗಗಳನ್ನು ವಾಸಿ ಮಾಡುವ ಅದ್ಭುತ ಶಕ್ತಿಯನ್ನು ಹೊಂದಿದೆ. ಮೈನುದ್ದೀನ್ ಅವರ ತಂಡವು ಸಂಗೀತದ ಜೊತೆಗೆ ಶೈಕ್ಷಣಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬರುತ್ತಿರುವುದು ಅರ್ಥಪೂರ್ಣವಾಗಿದೆ ಎಂದರು.
ಹೊನ್ನಾಪುರ ಸೂಫಿ ಆಶ್ರಮದ ಹಜರತ ಸಯ್ಯದ ಮೋಹಿದ್ದಿನ ಷಾ ಚಿಸ್ತಿ ಅಲ್ ಖಾದ್ರಿ ಮಾತನಾಡಿ, ಧಾರವಾಡ ಕರೋಕೆ ತಂಡವು ಸಂಗೀತದ ಮೂಲಕ ಸರ್ವ ಧರ್ಮ ಸಮನ್ವಯತೆಯನ್ನು ಸಾಧಿಸುತ್ತಿದೆ. ಇಲ್ಲಿನ ವೇದಿಕೆಯಲ್ಲಿ ಸ್ಪರ್ಧಿಸಿದ ಪ್ರತಿಭೆಗಳು ಇಂದು ವಿವಿಧ ರಾಷ್ಟ್ರೀಯ ವಾಹಿನಿಗಳ ಸಂಗೀತ ಸ್ಪರ್ಧೆಗಳಲ್ಲಿ ಗುರುತಿಸಿಕೊಳ್ಳುತ್ತಿರುವುದು ಹೆಮ್ಮೆಯ ವಿಷಯ ಎಂದು ಭಾವೈಕ್ಯತೆಯ ಸಂದೇಶ ಸಾರಿದರು.
ನಂತರ ಸವಿತಾ ಅಮರಶೆಟ್ಟಿ ಮಾತನಾಡಿ, ಕನ್ನಡದ ಬಗ್ಗೆ ಅಭಿಮಾನ ಇಟ್ಟುಕೊಂಡು ನಡೆಸುವ ಇಂತಹ ಕಾರ್ಯಕ್ರಮಗಳು ಭಾಷೆಯ ಉಳಿವಿಗಾಗಿ ಕೆಲಸ ಮಾಡುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಾದ ಅಲ್ತಾಫ್ ಅಹ್ಮದ ಎಮ್. ಡುಬ್ಬಾಳ, ಮಾಬುಸಾಬ ಯರಗುಪ್ಪಿ, ಸಂಜಯಕುಮಾರ ಬಿರಾದಾರ, ಪ್ರಮೀಳಾ ಗು. ಜಕ್ಕಣ್ಣವರ, ಮಾರ್ತಾಂಡಪ್ಪ ಕತ್ತಿ, ಅಬ್ದುಲ್ ಖಾದರ ಜಿಲಾನಿ ಕಿಲ್ಲೇದಾರ ಸೇರಿದಂತೆ ಅನೇಕ ಗಣ್ಯರನ್ನು ಸನ್ಮಾನಿಸಲಾಯಿತು. ಕನ್ನಡ ಚಲನಚಿತ್ರ ಗೀತೆಗಳ ಸ್ಪರ್ಧೆಯಲ್ಲಿ ಫಕ್ಕಿರೇಶ್ ಹಿರೇಮಠ ಪ್ರಥಮ ಸ್ಥಾನ ಪಡೆದರೆ, ಕೃಷ್ಣಮೂರ್ತಿ ಕಟ್ಟಿಮನಿ ದ್ವಿತೀಯ, ಸಂಜನಾ ಎಸ್.ಸಿ ತೃತೀಯ ಹಾಗೂ ಅದ್ವಿಕಾ ಬಿ.ಜಿ ಚತುರ್ಥ ಸ್ಥಾನ ಪಡೆದುಕೊಂಡು ಪ್ರಶಸ್ತಿಗೆ ಭಾಜನರಾದರು.
ಸಮಾರಂಭದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾಪೌರರಾದ ಜ್ಯೋತಿ ಪಾಟೀಲ, ಪಾಲಿಕೆ ಸದಸ್ಯ ಸುರೇಶ ಬೇದರೆ, ವಕೀಲ ಸಂತೋಷ ಪಟ್ಟಣಶೆಟ್ಟಿ, ಡಾ. ವೀಣಾ ಬಿರಾದಾರ, ಶ್ರೀ ಕೃಷ್ಣಾ ಕೊಳ್ಳಾನಟ್ಟಿ, ಮಹಮ್ಮದ ಇಸ್ಮಾಯಿಲ್ ದೇವರಾಯ, ಗಂಗಾಧರ ಘೋಡಕೆ ಹಾಗೂ ಕರೋಕೆ ತಂಡದ ಗೌರವ ಅಧ್ಯಕ್ಷ ಬಾಬಾಜಾನ ಮುಲ್ಲಾ, ಶ್ರೀಧರ ಕುಲಕರ್ಣಿ, ಸುಪ್ರಿಯಾ ಭಟ್, ಮೈನುದ್ದಿನ ಕಿರವಾಡಿ ಸೇರಿದಂತೆ ಅನೇಕ ಗಣ್ಯರು ಹಾಗೂ ಕಲಾಭಿಮಾನಿಗಳು ಉಪಸ್ಥಿತರಿದ್ದರು.

