
ಧಾರವಾಡ: ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯಗಳು ತಲುಪಬೇಕು ಎಂಬ ಧ್ಯೇಯದೊಂದಿಗೆ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಧಾರವಾಡ ಜಿಲ್ಲೆಯು ಶೇ. 98 ರಷ್ಟು ಪ್ರಗತಿ ಸಾಧಿಸುವ ಮೂಲಕ ಇಡೀ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ ಎಂದು ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಂ. ರೇವಣ್ಣ ಅವರು ಹರ್ಷ ವ್ಯಕ್ತಪಡಿಸಿದರು.
ನಗರದ ಕೆ.ಸಿ.ಡಿ ಕಾಲೇಜು ಆವರಣದ ಸೃಜನಾ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಪ್ರಾಧಿಕಾರದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ‘ಪಂಚ ಗ್ಯಾರಂಟಿ ಯೋಜನಾ ಕಾರ್ಯಾಗಾರ ಮತ್ತು ಗ್ಯಾರಂಟಿ ಉತ್ಸವ’ವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾವು ನೀಡಿದ್ದ 165 ಭರವಸೆಗಳನ್ನು ಅತ್ಯಲ್ಪ ಅವಧಿಯಲ್ಲಿ ಈಡೇರಿಸಿದ್ದಾರೆ. ಗ್ಯಾರಂಟಿ ಯೋಜನೆಗಳು ಮನೆ ಮನೆಗೆ ತಲುಪುತ್ತಿರುವುದಕ್ಕೆ ಇಂದು ಇಲ್ಲಿ ನೆರೆದಿರುವ ಮಹಿಳೆಯರ ಸಂಖ್ಯೆಯೇ ಸಾಕ್ಷಿಯಾಗಿದೆ. ಈ ಹಿಂದೆ ಡಿ. ದೇವರಾಜ ಅರಸ್, ಬಂಗಾರಪ್ಪ ಹಾಗೂ ಎಸ್.ಎಂ. ಕೃಷ್ಣ ಅವರಂತಹ ಮಹನೀಯರು ನೀಡಿದ ಜನಪರ ಕೊಡುಗೆಗಳ ಹಾದಿಯಲ್ಲೇ ಸಿದ್ದರಾಮಯ್ಯನವರು ಜನಸಾಮಾನ್ಯರ ಅಭಿವೃದ್ಧಿಗೆ ನಾಂದಿ ಹಾಡಿದ್ದಾರೆ ಎಂದು ಅವರು ಬಣ್ಣಿಸಿದರು.

ರಾಜ್ಯದಲ್ಲಿ ಸುಮಾರು 1 ಲಕ್ಷ ಕೋಟಿ ರೂ.ಗಳನ್ನು ನೇರವಾಗಿ ಜನರ ಖಾತೆಗೆ ತಲುಪಿಸಲಾಗುತ್ತಿದೆ. ಶಕ್ತಿ ಯೋಜನೆಯಡಿ 638 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದು, ಈ ಸಾಧನೆಗಾಗಿ ಅಂತರಾಷ್ಟ್ರೀಯ ಮಟ್ಟದ ಹಲವು ದಾಖಲೆಗಳು ಲಭಿಸಿವೆ. ಇದೇ ವೇಳೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು, ಪಂಚ ಗ್ಯಾರಂಟಿಗಳಿಗಾಗಿ ವರ್ಷಕ್ಕೆ 60 ಸಾವಿರ ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಇದು ಜನರ ಹಣವನ್ನು ಜನರಿಗೇ ನೀಡುವ ಪಾರದರ್ಶಕ ವ್ಯವಸ್ಥೆಯಾಗಿದೆ. ಮಹಿಳೆಯರ ಕೆಲಸಕ್ಕೆ ಗೌರವ ನೀಡುವ ನಿಟ್ಟಿನಲ್ಲಿ ಗೃಹಲಕ್ಷ್ಮಿ ಯೋಜನೆಯ ಮೂಲಕ ಆರ್ಥಿಕ ಬಲ ತುಂಬಲಾಗುತ್ತಿದೆ ಎಂದರು.
ಶಾಸಕ ಎನ್.ಹೆಚ್. ಕೋನರೆಡ್ಡಿ ಮಾತನಾಡಿ, ರಾಜ್ಯ ಸರ್ಕಾರವು ಜನಸಾಮಾನ್ಯರ ಪರವಾಗಿದ್ದು, ಶಕ್ತಿ ಯೋಜನೆಯಿಂದಾಗಿ ನವಲಗುಂದದ ಸಾವಿರಾರು ಮಹಿಳೆಯರು ಉಚಿತವಾಗಿ ಪ್ರಯಾಣಿಸಿ ಕೆಲಸಕ್ಕೆ ಹೋಗುತ್ತಿರುವುದು ಯೋಜನೆಯ ಯಶಸ್ಸನ್ನು ಸಾರುತ್ತಿದೆ ಎಂದರು. ಪ್ರಾಧಿಕಾರದ ಬೆಳಗಾವಿ ವಿಭಾಗದ ಉಪಾಧ್ಯಕ್ಷ ಎಸ್.ಆರ್. ಪಾಟೀಲ ಅವರು ಮಾತನಾಡಿ, ಗ್ಯಾರಂಟಿ ಯೋಜನೆಗಳು ಮಧ್ಯವರ್ತಿಗಳ ಹಾವಳಿಯಿಲ್ಲದೆ ನೇರವಾಗಿ ಜನರಿಗೆ ತಲುಪುತ್ತಿದ್ದು, ಬಡವರ ಬದುಕಿನಲ್ಲಿ ಸ್ವಾಭಿಮಾನ ಮೂಡಿಸಿವೆ ಎಂದು ತಿಳಿಸಿದರು. ಜಿಲ್ಲಾ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್. ಪಾಟೀಲ ಅವರು ಜಿಲ್ಲೆಯಲ್ಲಿ ಗೃಹಜ್ಯೋತಿಗಾಗಿ 638 ಕೋಟಿ ರೂ., ಅನ್ನಭಾಗ್ಯಕ್ಕಾಗಿ 358 ಕೋಟಿ ರೂ. ಹಾಗೂ ಗೃಹಲಕ್ಷ್ಮಿ ಯೋಜನೆಯಡಿ 3.81 ಲಕ್ಷ ಫಲಾನುಭವಿಗಳಿಗೆ ಹಣ ಸಂದಾಯವಾಗಿರುವುದನ್ನು ಅಂಕಿಅಂಶಗಳ ಸಮೇತ ವಿವರಿಸಿದರು.

ವಿಶೇಷ ಉಪನ್ಯಾಸ ನೀಡಿದ ಡಾ. ವಾಸು ಹೆಚ್. ಅವರು, ಗ್ಯಾರಂಟಿ ಯೋಜನೆಗಳಿಂದಾಗಿ ಮಾರುಕಟ್ಟೆಯಲ್ಲಿ ವಹಿವಾಟು ದ್ವಿಗುಣಗೊಂಡಿದೆ ಮತ್ತು ರಾಜ್ಯವು ಜಿಎಸ್ಟಿ ಸಂಗ್ರಹದಲ್ಲಿ ಪ್ರಥಮ ಸ್ಥಾನದಲ್ಲಿದೆ ಎಂದು ವಿಶ್ಲೇಷಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು, ಜಿ.ಪಂ ಸಿಇಒ ಭುವನೇಶ ಪಾಟೀಲ ಹಾಗೂ ವಿವಿಧ ಗಣ್ಯರು ಭಾಗವಹಿಸಿದ್ದರು. ಇದೇ ವೇಳೆ ಮಹಾನಗರ ಪಾಲಿಕೆ ವ್ಯಾಪ್ತಿಯ ಅನುಷ್ಠಾನ ಸಮಿತಿಯ ನೂತನ ಸದಸ್ಯರನ್ನು ಸನ್ಮಾನಿಸಲಾಯಿತು.
ಫಲಾನುಭವಿಗಳ ಮನದಾಳದ ಮಾತುಗಳು:
ಈ ಸಮಾರಂಭದಲ್ಲಿ ಹಲವು ಫಲಾನುಭವಿಗಳು ತಮ್ಮ ಅನುಭವ ಹಂಚಿಕೊಂಡರು. ಕಲಘಟಗಿಯ ಗುಣವಂತಿ ಮೇದಾರ್ ಅವರು ಗೃಹಲಕ್ಷ್ಮಿ ಹಣದಿಂದ ಮಕ್ಕಳ ಶಾಲಾ ಶುಲ್ಕ ಭರಿಸುತ್ತಿರುವುದಾಗಿ ತಿಳಿಸಿದರೆ, ನವಲಗುಂದದ ಸಂಗೀತ ಸುಣಗಾರ ಅವರು ಶಕ್ತಿ ಯೋಜನೆಯಿಂದ ಉಳಿತಾಯವಾದ ಹಣವನ್ನು ಮಕ್ಕಳ ಶಿಕ್ಷಣಕ್ಕೆ ಬಳಸುತ್ತಿರುವುದಾಗಿ ಹೇಳಿದರು. ಹುಬ್ಬಳ್ಳಿಯ ರಮೀನಾ ಕಟಾರಿಯಾ ಅವರಿಗೆ ಯುವನಿಧಿ ಹಣವು ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗೆ ನೆರವಾಗಿದೆ. ಅಮ್ಮಿನಬಾವಿಯ ಶಹಜಾನ್ ಬೇಗಂ ಅನ್ನಭಾಗ್ಯ ಯೋಜನೆಯನ್ನು ಬಡವರ ಹಸಿವು ನೀಗಿಸಿದ ಯೋಜನೆ ಎಂದು ಶ್ಲಾಘಿಸಿದರು. ಕುಂದಗೋಳದ ಫಕೀರಪ್ಪ ಕೂಡ್ಲಿ ಅವರು ಗೃಹಜ್ಯೋತಿಯಿಂದ ಆರ್ಥಿಕ ಹೊರೆ ಇಳಿದಿದೆ ಎಂದು ಸಂತಸ ವ್ಯಕ್ತಪಡಿಸಿದರು.

