ಜಿಲ್ಲಾ ಪೊಲೀಸ್ ಹಿರಿಯ ಅಧಿಕಾರಿಗಳೊಂದಿಗೆ ಡಿಜಿ ಮತ್ತು ಐಜಿಪಿ ಅವರಿಂದ ಪ್ರಗತಿ ಪರಿಶೀಲನಾ ಸಭೆ: ಜನಸ್ನೇಹಿ ಸೇವೆಗೆ ಒತ್ತು

Spread the love

ಧಾರವಾಡ:ರಾಜ್ಯದ ಡಿಜಿ ಮತ್ತು ಐಜಿಪಿ ಎಂ.ಎ. ಸಲೀಂ ಅವರು ಭಾನುವಾರ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ, ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

​ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪೊಲೀಸ್ ಸೇವೆಯು ಜನಸ್ನೇಹಿಯಾಗಿರಬೇಕು. ಸಾರ್ವಜನಿಕರ ರಕ್ಷಣೆ ನಮ್ಮ ಪ್ರಥಮ ಆದ್ಯತೆಯಾಗಿರಬೇಕು. ಅಲ್ಲದೆ, ಇಲಾಖೆ ಜಾರಿಗೆ ತಂದಿರುವ ‘ಮನೆ ಮನೆಗೆ ಪೊಲೀಸ್’ ಉಪಕ್ರಮವು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದ್ದು, ಅಭಾದಿತ ಮತ್ತು ನೊಂದ ವ್ಯಕ್ತಿಗಳ ಪರವಾಗಿ ಪೊಲೀಸರು ಇನ್ನೂ ಉತ್ತಮ ಕರ್ತವ್ಯ ನಿರ್ವಹಿಸುವ ಕುರಿತು ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.

​ಇದೇ ವೇಳೆ, ಇಲಾಖೆಯ ಅಧೀನ ಪೊಲೀಸ್ ಸಿಬ್ಬಂದಿಗಳ ಆರೋಗ್ಯ ಮತ್ತು ಕ್ಷೇಮದ ಬಗ್ಗೆ ವಿಶೇಷ ಗಮನ ಹರಿಸಬೇಕೆಂದು ಡಿಜಿ ಮತ್ತು ಐಜಿಪಿ ಅವರು ಸಲಹೆ ನೀಡಿದರು. ಇದಲ್ಲದೆ, ಅವರು ಸಿ.ಐ.ಡಿ ಘಟಕ ಧಾರವಾಡ ಹಾಗೂ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಗೂ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಗಳೊಂದಿಗೆ ಸಂವಹನ ನಡೆಸಿ ಸೂಕ್ತ ಮಾರ್ಗದರ್ಶನ ನೀಡಿದರು.

​ಸಭೆಯಲ್ಲಿ ಬೆಳಗಾವಿ ಉತ್ತರ ವಲಯದ ಐಜಿಪಿ ಚೇತನಸಿಂಗ್ ರಾಥೋಡ್, ಜಿಲ್ಲಾ ಪೊಲೀಸ್ ಅಧೀಕ್ಷಕ ಗುಂಜನ್ ಆರ್ಯ ಮತ್ತು ಸಿ.ಐ.ಡಿ ಎಸ್.ಪಿ ರಶ್ಮಿ ಪರಡಿ ಅವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *