ನೆಚ್ಚಿನ ಶಿಕ್ಷಕಿ ಜರಿನಾ ಎಮ್. ಸೌದಾಗರ ಅಗಲಿಕೆ: ಅಣ್ಣಿಗೇರಿಯಲ್ಲಿ ವಿದ್ಯಾರ್ಥಿಗಳ ಕಣ್ಣೀರು, ಶಾಲೆಯಲ್ಲಿ ಶೋಕಸಾಗರ

Spread the love

ಅಣ್ಣಿಗೇರಿ: ಗುರು-ಶಿಷ್ಯರ ಪವಿತ್ರ ಸಂಬಂಧಕ್ಕೆ ಸಾಕ್ಷಿಯಂತಿದ್ದ ಶಿಕ್ಷಕಿಯೊಬ್ಬರ ಅಕಾಲಿಕ ನಿಧನವು ಇಡೀ ಶಾಲೆಯನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಇಲ್ಲಿನ ಅಮೃತ ಕಲಾ ಕುಂಜ ಶಿಕ್ಷಣ ಸಂಸ್ಥೆಯಲ್ಲಿ ಕಳೆದ 24 ವರ್ಷಗಳಿಂದ ಸುದೀರ್ಘ ಸೇವೆ ಸಲ್ಲಿಸುತ್ತಿದ್ದ ಬನಶಂಕರಿ ನಗರದ ನಿವಾಸಿ ಜರಿನಾ ಎಮ್. ಸೌದಾಗರ (46) ಅವರು ಶುಕ್ರವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು. ದಶಕಗಳ ಕಾಲ ವಿದ್ಯಾರ್ಥಿಗಳಿಗೆ ಅಕ್ಷರ ದಾಸೋಹದ ಜೊತೆಗೆ ಪ್ರೀತಿ-ಮಮತೆಯನ್ನು ಹಂಚಿದ್ದ ಶಿಕ್ಷಕಿಯ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಶಾಲಾ ಆವರಣದಲ್ಲಿ ಮೌನ ಆವರಿಸಿತು.

​ತಮ್ಮ ನೆಚ್ಚಿನ ಶಿಕ್ಷಕಿ ಇನ್ನಿಲ್ಲ ಎಂಬ ಕಹಿ ಸುದ್ದಿ ತಿಳಿಯುತ್ತಿದ್ದಂತೆ ಶಾಲೆಯತ್ತ ಧಾವಿಸಿ ಬಂದ ನೂರಾರು ವಿದ್ಯಾರ್ಥಿಗಳು ಶಿಕ್ಷಕಿಯ ಪಾರ್ಥಿವ ಶರೀರವನ್ನು ಕಂಡು ಘಳಿ ಘಳಿ ಅತ್ತ ಪ್ರಸಂಗ ಎಲ್ಲರ ಕಣ್ಣಾಲಿಗಳನ್ನು ಒದ್ದೆ ಮಾಡಿತು. ಪಠ್ಯದ ಜೊತೆಗೆ ಬದುಕಿನ ಪಾಠವನ್ನೂ ಕಲಿಸುತ್ತಿದ್ದ ತಮ್ಮ ಪ್ರೀತಿಯ ‘ಮಿಸ್’ ಅವರನ್ನು ಕಳೆದುಕೊಂಡ ಮಕ್ಕಳು ಅತೀವ ದುಃಖಿತರಾಗಿದ್ದರು. ಮೃತ ಶಿಕ್ಷಕಿಯ ಮೇಲಿದ್ದ ಭಕ್ತಿ ಮತ್ತು ಗೌರವದ ಸಂಕೇತವಾಗಿ ಆದಿಕವಿ ಪಂಪ ಪ್ರಾಥಮಿಕ ಪಾರ್ವತಮ್ಮ ಮಲ್ಲಪ್ಪ ಹಾಳದೋಟರ ಶಾಲೆಯ ಮುಖ್ಯೋಪಾಧ್ಯಾಯ ಉಮೇಶ ಬಿಲ್ಲದ್ದನವರ ಅವರು ಶಾಲೆಯಲ್ಲಿ ಮೌನಾಚರಣೆ ನಡೆಸಿ, ಬಳಿಕ ಗೌರವಾರ್ಥವಾಗಿ ಶಾಲೆಗೆ ರಜೆ ಘೋಷಿಸಿದರು.

​ಜರಿನಾ ಸೌದಾಗರ ಅವರ ನಿಧನಕ್ಕೆ ಅಣ್ಣಿಗೇರಿ ಅಮೃತ ಕಲಾ ಕುಂಜ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು ಹಾಗೂ ಶಿಕ್ಷಕ ವೃಂದದವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಶಾಲೆಯ ಶಿಸ್ತಿನ ಸಿಪಾಯಿಯಂತಿದ್ದ ಹಾಗೂ ವಿದ್ಯಾರ್ಥಿಗಳ ಪಾಲಿನ ಆಪ್ತ ಮಿತ್ರರಂತಿದ್ದ ಅವರ ಅಗಲಿಕೆಯು ಶಿಕ್ಷಣ ಸಂಸ್ಥೆಗೆ ತುಂಬಲಾರದ ನಷ್ಟವನ್ನುಂಟು ಮಾಡಿದೆ ಎಂದು ಶೋಕಿಸಲಾಯಿತು.

Leave a Reply

Your email address will not be published. Required fields are marked *