ವಿಮಾನ ನಿಲ್ದಾಣಗಳಿಗೆ ನಾಮಕರಣ ಒತ್ತಾಯ: ನಾಳೆ ಹುಬ್ಬಳ್ಳಿಯಲ್ಲಿ ಬೃಹತ್ ಮನವಿ ಮೆರವಣಿಗೆಗೆ ಕರೆ

Spread the love

ಹುಬ್ಬಳ್ಳಿ: ಕನ್ನಡ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ, ಕರ್ನಾಟಕದ ನಾಲ್ಕು ಪ್ರಮುಖ ಮಹನೀಯರ ಹೆಸರನ್ನು ರಾಜ್ಯದ ನಾಲ್ಕು ವಿಮಾನ ನಿಲ್ದಾಣಗಳಿಗೆ ನಾಮಕರಣ ಮಾಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲು, ಕನ್ನಡಾಭಿಮಾನಿಗಳು ಮತ್ತು ವಿವಿಧ ಕನ್ನಡಪರ ಸಂಘಟನೆಗಳು ಒಗ್ಗೂಡಿ ನಾಳೆ (ಅ. 31, ಶುಕ್ರವಾರ) ಬೃಹತ್ ಮೆರವಣಿಗೆ ಹಾಗೂ ಮನವಿ ಅರ್ಪಣೆಗೆ ಕರೆ ನೀಡಿವೆ.

ಸಾಮಾಜಿಕ ಹೋರಾಟಗಾರ ಶಿವಾನಂದ ಮುತ್ತಣ್ಣವರ ಅವರು ಈ ಕುರಿತು ಪ್ರಕಟಣೆ ಹೊರಡಿಸಿದ್ದು, ಕಳೆದ ವರ್ಷವೇ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರವು ವಿಧಾನಮಂಡಲದಲ್ಲಿ ನಿರ್ಣಯಿಸಿ, ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕಿತ್ತೂರು ರಾಣಿ ಚೆನ್ನಮ್ಮ, ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ವಿಜಯಪುರ ವಿಮಾನ ನಿಲ್ದಾಣಕ್ಕೆ ಜಗಜ್ಯೋತಿ ಬಸವೇಶ್ವರ ಹಾಗೂ ಇನ್ನೊಂದು ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಅವರ ಹೆಸರನ್ನು ನಾಮಕರಣ ಮಾಡುವಂತೆ ಕೇಂದ್ರಕ್ಕೆ ಸಿಫಾರಸ್ಸು ಮಾಡಿತ್ತು. ಆದರೆ, ಎರಡು ವರ್ಷ ಸಮೀಪಿಸುತ್ತಿದ್ದರೂ ಕೇಂದ್ರ ಸರ್ಕಾರ ಈ ಕುರಿತು ಯಾವುದೇ ನಿರ್ಧಾರ ಕೈಗೊಳ್ಳದಿರುವುದನ್ನು ಖಂಡಿಸಿ ಈ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದ ವಿವರಗಳು: ಕೇಂದ್ರ ವಿಮಾನಯಾನ ಸಚಿವರು ಹಾಗೂ ಧಾರವಾಡ ಲೋಕಸಭಾ ಸದಸ್ಯರೂ ಆದ ಪ್ರಲ್ಹಾದ ಜೋಶಿ ಅವರ ಕಚೇರಿಗೆ ಮನವಿ ಸಲ್ಲಿಸಲು ಈ ಅಭಿಯಾನವನ್ನು ಆಯೋಜಿಸಲಾಗಿದೆ. ದಿನಾಂಕ: ಅಕ್ಟೋಬರ್ 31, 2025 (ಶುಕ್ರವಾರ), ಸಮಯ: ಬೆಳಗ್ಗೆ 10:00 ರಿಂದ ಮಧ್ಯಾಹ್ನ 12:00 ಗಂಟೆಯೊಳಗೆ. ಸಾನಿಧ್ಯ: ಜಗದ್ಗುರು ರೇವಣಸಿದ್ಧೇಶ್ವರ ಮಹಾಸಂಸ್ಥಾನ ಪೀಠ, ಧಾರವಾಡ ಮನ್ಸೂರ್.

ಮೊದಲಿಗೆ ಹುಬ್ಬಳ್ಳಿಯ ಹೃದಯಭಾಗದಲ್ಲಿರುವ ಚೆನ್ನಮ್ಮಳ ಪುತ್ಥಳಿ ಮತ್ತು ರಾಯಣ್ಣನ ಪುತ್ಥಳಿಗೆ ಗೌರವ ಹೂಮಾಲೆ ಅರ್ಪಿಸಲಾಗುತ್ತದೆ. ಅಲ್ಲಿಂದ ಮೆರವಣಿಗೆ ಮೂಲಕ ಸಾಗಿ, ಹುಬ್ಬಳ್ಳಿ ಮಹಾನಗರ ಪಾಲಿಕೆಯ ಪಕ್ಕದಲ್ಲಿರುವ ಸಾರ್ವಜನಿಕ ಚಿಟಗುಪ್ಪಿ ಆಸ್ಪತ್ರೆಯ ಎದುರುಗಡೆ ಇರುವ ಸಚಿವರ ಕಚೇರಿಗೆ ಮನವಿ ಪತ್ರವನ್ನು ಅರ್ಪಿಸಲಾಗುವುದು.

ಪಾಲ್ಗೊಳ್ಳುವಿಕೆ ಮನವಿ: ಧಾರವಾಡ ಜಿಲ್ಲೆಯ ಕುಂದಗೋಳ, ಕಲಘಟಗಿ, ನವಲಗುಂದ, ಧಾರವಾಡ ಗ್ರಾಮಾಂತರ, ಹುಬ್ಬಳ್ಳಿ ಗ್ರಾಮಾಂತರ ಮತ್ತು ಹುಬ್ಬಳ್ಳಿ ಧಾರವಾಡ ಮಹಾನಗರದ ಎಲ್ಲಾ ಕನ್ನಡಾಭಿಮಾನಿಗಳು ಹಾಗೂ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು, ಜಾತಿ-ಮತ ಭೇದವಿಲ್ಲದೆ ಎಲ್ಲಾ ಸಮುದಾಯದ ಬಂಧುಗಳು ಈ ದೇಶಾಭಿಮಾನದ ಕಾರ್ಯದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಂಡು ಸ್ವತಂತ್ರ ಹೋರಾಟಗಾರರು, ವಚನ ಸಾಹಿತ್ಯದ ಜಗತ್ಪ್ರಸಿದ್ಧರು ಮತ್ತು ಕವಿಗಳ ಕೃಪೆಗೆ ಪಾತ್ರರಾಗಬೇಕೆಂದು ಮುಂಖಡ ಶಿವಾನಂದ ಮುತ್ತಣ್ಣವರ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *