
ನವಲಗುಂದ: ವಿವಿಧ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ತಾಲೂಕು ಘಟಕದ ವತಿಯಿಂದ ಸೋಮವಾರ ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ರಾಧಾ ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಲಾಯಿತು.
ಬಿಸಿಯೂಟ ನೌಕರರ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಈ ಮನವಿ ಸಲ್ಲಿಸಲಾಗಿದ್ದು, ಹಲವು ವರ್ಷಗಳಿಂದ ಬಾಕಿ ಇರುವ ಬೇಡಿಕೆಗಳನ್ನು ಈಡೇರಿಸುವಂತೆ ನೌಕರರು ಆಗ್ರಹಿಸಿದರು. ಒಂದು ವೇಳೆ ತಮ್ಮ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸದಿದ್ದಲ್ಲಿ, ಕೇಂದ್ರ ಕಾರ್ಮಿಕ ಸಂಘಟನೆಗಳ ಕರೆಗೆ ಓಗೊಟ್ಟು ಫೆಬ್ರವರಿ 12 ರಂದು ರಾಜ್ಯವ್ಯಾಪಿ ನಡೆಯಲಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದಾಗಿ ನೌಕರರು ಎಚ್ಚರಿಕೆ ನೀಡಿದ್ದಾರೆ.
ಫೆಬ್ರವರಿ 12 ರಂದು ಬಿಸಿಯೂಟ ತಯಾರಿಕೆ ಕೆಲಸವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ, ಮುಷ್ಕರದಲ್ಲಿ ಸಕ್ರಿಯವಾಗಿ ಭಾಗವಹಿಸುವುದಾಗಿ ಸಂಘದ ಪದಾಧಿಕಾರಿಗಳು ಮನವಿ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಅಡುಗೆ ಸಹಾಯಕಿಯರ ಸಂಘದ ತಾಲೂಕು ಅಧ್ಯಕ್ಷೆ ಸುನಂದಾ ಚಿಗರಿ ಸೇರಿದಂತೆ ಸಂಘದ ವಿವಿಧ ಪದಾಧಿಕಾರಿಗಳು ಹಾಗೂ ನೂರಾರು ಅಕ್ಷರ ದಾಸೋಹ ನೌಕರರು ಉಪಸ್ಥಿತರಿದ್ದರು.

