
ಧಾರವಾಡ: ಜಿಲ್ಲೆಯ ಗ್ರಾಮೀಣ ಮತ್ತು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿರುವ ಎಲ್ ಆ್ಯಂಡ್ ಟಿ (L&T) ಕಂಪನಿಯು ಕಾಲಮಿತಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸುತ್ತಿಲ್ಲ. ಇದರಿಂದ ಸಾರ್ವಜನಿಕರಿಗೆ ಅನಾನುಕೂಲವಾಗಿದ್ದು, ಸರ್ಕಾರಕ್ಕೂ ತೃಪ್ತಿ ಇಲ್ಲ. ಸಾಕಷ್ಟು ಬಾರಿ ಸಲಹೆ, ಸೂಚನೆ ನೀಡಿದ್ದರೂ ಸುಧಾರಿಸದ ಈ ಕಂಪನಿ ವಿರುದ್ಧ ಮೊಕದ್ದಮೆ ಹೂಡಿ ಕಾನೂನು ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಕಾರ್ಮಿಕ ಇಲಾಖೆಯ ಸಚಿವರು ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಎಸ್. ಲಾಡ್ ಅವರು ಎಚ್ಚರಿಕೆ ನೀಡಿದರು.
ಅವರು ಸೋಮವಾರದಂದು ಮಧ್ಯಾಹ್ನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ 2025-26ನೇ ಸಾಲಿನ ಸೆಪ್ಟೆಂಬರ್ 2025ರ ಅಂತ್ಯಕ್ಕೆ ಸಂಬಂಧಿಸಿದಂತೆ 2ನೇ ತ್ರೈಮಾಸಿಕ ಕೆಡಿಪಿ (KDP) ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕುಡಿಯುವ ನೀರಿನ ಕಾಮಗಾರಿಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಅನೇಕ ಸಭೆಗಳನ್ನು ನಡೆಸಿ ನಿರ್ದೇಶನ ನೀಡಲಾಗಿದೆ. ಸೂಚನೆ ಪಾಲಿಸದೇ ಕಾಮಗಾರಿಯನ್ನು ನಿಧಾನಗತಿಯಲ್ಲಿ ಮಾಡುತ್ತಿರುವುದಕ್ಕೆ ದಂಡ ಸಹ ವಿಧಿಸಲಾಗಿದೆ. ಆದರೂ ಎಲ್ ಆ್ಯಂಡ್ ಟಿ ಕಂಪನಿಯ ಕಾರ್ಯವೈಖರಿಯಲ್ಲಿ ಬದಲಾವಣೆ ಕಾಣುತ್ತಿಲ್ಲ. ಈ ಕುರಿತು ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ, ಕಾನೂನು ಕ್ರಮ ಕೈಗೊಳ್ಳಲಾಗುವುದು. ಮುಂದಿನ 15 ದಿನಗಳಲ್ಲಿ ಎಲ್ ಆ್ಯಂಡ್ ಟಿ ಕಂಪನಿಯ ಅಧಿಕಾರಿಗಳು ಮತ್ತು ಸರ್ಕಾರದ ಕಾರ್ಯದರ್ಶಿಗಳ ಮಟ್ಟದಲ್ಲಿ ಸಭೆ ನಡೆಸಿ, ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ಕೃಷಿ ಇಲಾಖೆಗೆ ನಿರ್ದೇಶನಗಳು:
ಕೃಷಿ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು, ಸರ್ಕಾರದ ಯೋಜನೆಗಳನ್ನು ರೈತರಿಗೆ ಅನುಕೂಲವಾಗುವಂತೆ ಅನುಷ್ಠಾನಗೊಳಿಸಬೇಕು. ಬೆಳೆ ಹಾನಿಯಲ್ಲಿ ರೈತರಿಗೆ ಎಷ್ಟು ಹಣ ಬಂದಿದೆ ಎಂಬುದನ್ನು ರೈತ ಸಂಪರ್ಕ ಕೇಂದ್ರ, ಗ್ರಾಮ ಪಂಚಾಯತಿಗಳ ಸೂಚನಾ ಫಲಕದಲ್ಲಿ ಪ್ರಕಟಿಸಬೇಕು. ಯಾವ ರೈತರಿಗೆ ಪರಿಹಾರ ಜಮೆ ಆಗಿರುವುದಿಲ್ಲ ಅವರಿಗೆ ಸೂಕ್ತ ವಿವರಣೆ ನೀಡಬೇಕು ಎಂದು ಹೇಳಿದರು. ಕೃಷಿ ಇಲಾಖೆಯಿಂದ ರೈತರಿಗೆ ಆಧುನಿಕ ತಂತ್ರಜ್ಞಾನಗಳು ಮತ್ತು ಕೃಷಿ ಉಪಕರಣಗಳನ್ನು ಬಳಸಲು ಪ್ರೋತ್ಸಾಹಿಸಬೇಕು. ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜ ಮತ್ತು ಗೊಬ್ಬರಗಳ ದಾಸ್ತಾನು, ಮಾರಾಟದ ವಿವರಗಳನ್ನು ಪ್ರಕಟಿಸಬೇಕು ಹಾಗೂ ಅವುಗಳನ್ನು ಸಮರ್ಪಕವಾಗಿ ರೈತರಿಗೆ ಹಂಚಿಕೆ ಮಾಡಬೇಕು. ಕೃಷಿ ಹೊಂಡಗಳನ್ನು ನಿರ್ಮಿಸಲು ರೈತರಿಗೆ ಪ್ರೋತ್ಸಾಹಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ಕಲಘಟಗಿ, ಧಾರವಾಡ, ಹುಬ್ಬಳ್ಳಿ ಭಾಗದ ರೈತರು ಪರ್ಯಾಯ ಬೆಳೆಯಾಗಿ ಅಡಿಕೆ ಬೆಳೆಯನ್ನು ಹೆಚ್ಚು ಬೆಳೆಯುತ್ತಿದ್ದಾರೆ. ಈ ಬೆಳೆಯನ್ನು ಬೆಳೆ ವಿಮೆ ವ್ಯಾಪ್ತಿಗೆ ಒಳಪಡಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಇಲಾಖಾ ಅಧಿಕಾರಿಗಳು ಕ್ಷೇತ್ರ ಭೇಟಿ ನೀಡಿ ಕ್ರಮವಹಿಸಬೇಕೆಂದು ಅವರು ನಿರ್ದೇಶಿಸಿದರು. ಈರುಳ್ಳಿ ಬೆಲೆಯಲ್ಲಿ ಕುಸಿತಕ್ಕೆ ಕಾರಣ ತಿಳಿದುಕೊಳ್ಳಿ ಹಾಗೂ ಕಳೆದ ವರ್ಷಕ್ಕೂ ಮತ್ತು ಈ ವರ್ಷಕ್ಕೂ ಇರುವ ವ್ಯತ್ಯಾಸವನ್ನು ಅಧ್ಯಯನ ಮಾಡಿ, ವರದಿ ನೀಡುವಂತೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಇಲಾಖೆಯ ಉಪನಿರ್ದೇಶಕರಿಗೆ ಅವರು ಸೂಚಿಸಿದರು.
ಶಾಲಾ ಶಿಕ್ಷಣ ಮತ್ತು ನರೇಗಾ ಕುರಿತು ಸೂಚನೆ:
ಶಾಲಾ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನೆ ಮಾಡಿ, ಶೂನ್ಯ ಫಲಿತಾಂಶ ಮತ್ತು ವಿದ್ಯಾರ್ಥಿ ದಾಖಲಾತಿ ಶೂನ್ಯವಿರುವ ಶಾಲೆಗಳಿಗೆ ನೋಟಿಸ್ ನೀಡಿ, ನಿಯಮಾನುಸಾರ ಅವುಗಳನ್ನು ಬಂದ್ ಮಾಡಬೇಕು. ಅಲ್ಲಿನ ಸಿಬ್ಬಂದಿಗಳನ್ನು ಅಗತ್ಯವಿರುವ ಸರ್ಕಾರಿ ಶಾಲೆಗಳಿಗೆ ತಕ್ಷಣ ವರ್ಗಾಯಿಸಬೇಕು. ಇದರಿಂದ ಸರ್ಕಾರದ ಅನುದಾನದ ಅಪವ್ಯಯ ತಪ್ಪುತ್ತದೆ ಎಂದು ಹೇಳಿದರು. ಪ್ರತಿಯೊಂದು ಶಾಲೆಗಳಲ್ಲಿ ಅಗತ್ಯ ಮತ್ತು ಸುಸ್ಥಿತಿಯಲ್ಲಿ ಶೌಚಾಲಯಗಳು, ಕೊಠಡಿಗಳು ಇರುವಂತೆ ನೋಡಿಕೊಳ್ಳಬೇಕು. ಸರ್ಕಾರಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಏಕೆ ಕಡಿಮೆಯಾಗುತ್ತಿದ್ದಾರೆ ಎಂಬುದನ್ನು ಪರಿಶೀಲಿಸಿ, ವರದಿ ನೀಡುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ನರೇಗಾ ಯೋಜನೆ ಉತ್ತಮವಾಗಿ ಅನುಷ್ಠಾನಗೊಳಿಸಬೇಕು. ಕೃಷಿ, ಪಂಚಾಯತ್ ರಾಜ್, ತೋಟಗಾರಿಕೆ, ಅರಣ್ಯ ಮತ್ತು ರೇಷ್ಮೆ ಇಲಾಖೆ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಸಮನ್ವಯದಿಂದ ಕ್ರಿಯಾ ಯೋಜನೆ ರೂಪಿಸಿ, ಜನರಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸಬೇಕು. ನರೇಗಾದಲ್ಲಿ ನೋಂದಣಿ ಆಗಿರುವ ಜನರು ಕೆಲಸಕ್ಕೆ ಬಾರದೇ ಇದ್ದರೆ, ಅಂತಹವರು ನರೇಗಾ ಕೆಲಸದಲ್ಲಿ ಭಾಗವಹಿಸಲು ಉತ್ತೇಜನ ನೀಡಬೇಕು. ನರೇಗಾ ಯೋಜನೆಯ ಕಾಮಗಾರಿಗಳ ನಿಗದಿತ ಭೌತಿಕ ಗುರಿಯನ್ನು ಕಾಲಮಿತಿಯಲ್ಲಿ ಸಾಧಿಸಬೇಕೆಂದು ಹೇಳಿದರು.
ಸಭೆಯ ಇತರೆ ವಿಷಯಗಳು ಮತ್ತು ಶಾಸಕರ ಅಭಿಪ್ರಾಯ:
ವಿಧಾನ ಪರಿಷತ್ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್ ಅವರು, ಪ್ರಗತಿ ಪರಿಶೀಲನಾ ಸಭೆಗೆ ಬರುವ ಮೊದಲು ಅಧಿಕಾರಿಗಳು ಸರಿಯಾದ ಮಾಹಿತಿಯನ್ನು ತರಬೇಕು. ಕೆಡಿಪಿ ಸಭೆಯು ಮಹತ್ವದಾಗಿದ್ದು, ಇಲಾಖಾವಾರು ಪ್ರಗತಿ ಪರಿಶೀಲನೆ, ಅನುದಾನ ಬಳಕೆ ಮತ್ತು ಅನುಷ್ಠಾನದಲ್ಲಿ ಎದುರಿಸುವ ಅಡಚಣೆಗಳ ಕುರಿತು ಚರ್ಚಿಸಲಾಗುತ್ತದೆ. ಇವುಗಳಿಗೆ ಸರ್ಕಾರದ ಮಟ್ಟದಲ್ಲಿ ಪರಿಹಾರ ಕಾಣಲು ಪ್ರಯತ್ನಿಸಲಾಗುತ್ತದೆ ಎಂದರು.
ಶಾಸಕ ಎನ್.ಎಚ್. ಕೋನರಡ್ಡಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಅತಿಯಾದ ಮಳೆಯಿಂದಾಗಿ ಬೆಳೆಗಳು ಹಾನಿಯಾಗಿವೆ. ಅವೈಜ್ಞಾನಿಕವಾಗಿ ರಾಸಾಯನಿಕ ಗೊಬ್ಬರ ಬಳಸುವ ಕುರಿತು ರೈತರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ ಕ್ರಮವಹಿಸಬೇಕು. ಎಲ್ಲ ತಾಲೂಕುಗಳಿಗೆ ಕೃಷಿ ಅಧಿಕಾರಿಗಳು ಭೇಟಿ ನೀಡಿ, ರೈತರಿಗೆ ಆಧುನಿಕ ಕೃಷಿ ತಂತ್ರಜ್ಞಾನಗಳ ಕುರಿತು ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಹೇಳಿದರು. ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಸ್ಥಳೀಯವಾಗಿ ಶೇ. 25 ರಷ್ಟು ಮೀಸಲಾತಿ ಇದ್ದರೂ, ಸರ್ಕಾರದ ನಿಯಮ ಸರಿಯಾಗಿ ಪಾಲನೆಯಾಗುತ್ತಿಲ್ಲ. ವಸತಿ ನಿಲಯ ಕಲ್ಪಿಸಲು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳು ಕ್ರಮ ವಹಿಸಬೇಕು ಎಂದು ಅವರು ಹೇಳಿದರು.
ಕುಂದಗೋಳ ಶಾಸಕ ಎಂ.ಆರ್. ಪಾಟೀಲ ಮಾತನಾಡಿ ಅವರು, ಅತಿವೃಷ್ಟಿ ಮತ್ತು ಗಾಳಿಯಿಂದ ಹಾನಿಯಾಗಿರುವ ಗೋವಿನಜೋಳ, ಸೋಯಾಬೀನ್ ಸೇರಿದಂತೆ ಇತರ ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಹಾನಿ ವರದಿಯನ್ನು ಅಧಿಕಾರಿಗಳು ಕ್ಷೇತ್ರ ಭೇಟಿ ನೀಡಿ ಪರಿಶೀಲಿಸಿ ಸರ್ಕಾರಕ್ಕೆ ಸಲ್ಲಿಸಬೇಕು ಎಂದರು.
ಶಾಸಕ ಮಹೇಶ್ ಟೆಂಗಿನಕಾಯಿ ಮಾತನಾಡಿ ಅವರು, ತಂಡಾ ಅಭಿವೃದ್ಧಿ ನಿಗಮದಿಂದ ಫಲಾನುಭವಿಗಳಿಗೆ ಕಾಲಮಿತಿಯಲ್ಲಿ ಸೌಲಭ್ಯಗಳನ್ನು ಪೂರೈಸುತ್ತಿಲ್ಲ. ಶಾಲೆಗಳು ಪ್ರಾರಂಭವಾಗಿ ತಿಂಗಳು ಕಳೆದರೂ ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್ ವಿತರಿಸಲು ಕ್ರಮವಹಿಸಿಲ್ಲ. ತಕ್ಷಣ ವಿತರಿಸಲು ಕ್ರಮವಹಿಸಬೇಕೆಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಎಫ್.ಹೆಚ್. ಜಕ್ಕಪ್ಪನವರ ಅವರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭಿವೃದ್ಧಿಗಾಗಿ ಮೀಸಲಿರುವ ಯೋಜನೆಗಳನ್ನು ಪಾರದರ್ಶಕವಾಗಿ ಮತ್ತು ನಿಯಮಾನುಸಾರ ಅನುಷ್ಠಾನಗೊಳಿಸಬೇಕು. ಅರ್ಜಿ ಸಲ್ಲಿಸುವ ಎಲ್ಲ ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ ಕಲ್ಪಿಸಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮಾತನಾಡಿ, ವಿವಿಧ ಅಭಿವೃದ್ಧಿ ಕಾಮಗಾರಿ ಹಾಗೂ ಸರ್ಕಾರದ ಜನಪರ ಯೋಜನೆಗಳ ಕುರಿತು ಪ್ರತಿ ತಿಂಗಳು ಇಲಾಖಾವಾರು ಅಧಿಕಾರಿಗಳ ಸಭೆ ನಡೆಸಿ, ಪ್ರಗತಿ ಪರಿಶೀಲನೆ ಮಾಡಲಾಗುತ್ತಿದೆ. ಪ್ರಗತಿಯಲ್ಲಿ ಬಾಕಿ ಇರುವ ಇಲಾಖೆಗಳಿಗೆ ಕಾಲಮಿತಿಯಲ್ಲಿ ಅಭಿವೃದ್ಧಿ ಸಾಧಿಸಲು ಸೂಚಿಸಲಾಗಿದೆ ಎಂದರು.
ಸಭೆಯಲ್ಲಿ ಕೃಷಿ, ತೋಟಗಾರಿಕೆ, ಕಂದಾಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಆರೋಗ್ಯ, ಗ್ರಾಮೀಣ ಕುಡಿಯುವ ನೀರು, ನರೇಗಾ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತ ಕಲ್ಯಾಣ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡಲಾಯಿತು. ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ, ಹು-ಧಾ ಮಹಾನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಅವರು ಇದ್ದರು. ಸಭೆಯಲ್ಲಿ ಜಿಲ್ಲಾ ಕೆಡಿಪಿ ಸಭೆಯ ನಾಮನಿರ್ದೇಶಿತ ಸದಸ್ಯರು, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

