ಮಗಳು ಲವ್ವರ್ ಜತೆ ಪರಾರಿ:ಮಗಳ ಸಂಬಂದ ವೇ ಬೆಡವೆಂದು ಇಡೀ ಊರಿಗೆ ‘ತಿಥಿ ಊಟ’ ಹಾಕಿಸಿದ ತಂದೆ.

Spread the love

ಬೆಳಗಾವಿ: ತಮ್ಮ ಇಚ್ಛೆಗೆ ವಿರುದ್ಧವಾಗಿ ಪ್ರೀತಿಸಿದ ಯುವಕನೊಂದಿಗೆ ಮಗಳು ಮನೆ ಬಿಟ್ಟು ಪರಾರಿಯಾದ ಕಾರಣ ಮನನೊಂದ ತಂದೆಯೊಬ್ಬರು, ಆಕೆ ತಮ್ಮ ಪಾಲಿಗೆ ಸತ್ತುಹೋದಳೆಂದು ಭಾವಿಸಿ, ಆಕೆಯ ತಿಥಿ ಮಾಡಿ ಇಡೀ ಗ್ರಾಮಕ್ಕೆ ಊಟ ಹಾಕಿಸಿದ ವಿಲಕ್ಷಣ ವಿದ್ಯಮಾನ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಾಗರಾಳ ಗ್ರಾಮದಲ್ಲಿ ನಡೆದಿದೆ.

ಪ್ರೀತಿ ವಿವಾಹಕ್ಕೆ ಪೋಷಕರ ವಿರೋಧ:
ನಾಗರಾಳ ಗ್ರಾಮದ ನಿವಾಸಿ ಶಿವಗೌಡ ಎಂಬವರ ಮಗಳು ಅದೇ ಗ್ರಾಮದ ವಿಠ್ಠಲ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ಆದರೆ, ಈ ಪ್ರೀತಿ ಮತ್ತು ವಿವಾಹಕ್ಕೆ ಪೋಷಕರು ಯಾವುದೇ ಕಾರಣಕ್ಕೂ ಸಮ್ಮತಿ ನೀಡಿರಲಿಲ್ಲ. ಈ ವಿರೋಧದ ನಡುವೆಯೇ ಶಿವಗೌಡ ಅವರ ಮಗಳು ವಿಠ್ಠಲ್ ಜತೆ ಪರಾರಿಯಾಗಿದ್ದಾಳೆ. ಮೊದಲಿಗೆ ಮಗಳು ಕಾಣೆಯಾಗಿದ್ದಾಳೆ ಎಂದು ರಾಯಬಾಗ ಪೊಲೀಸ್ ಠಾಣೆಯಲ್ಲಿ ಶಿವಗೌಡ ದೂರು ದಾಖಲಿಸಿದ್ದರು. ಆದರೆ, ಮಗಳು ಪ್ರೀತಿಸಿದ ಯುವಕನ ಜತೆ ಓಡಿಹೋಗಿರುವುದು ನಂತರ ತಿಳಿದುಬಂದಿದೆ.

ಮಗಳಿಗೆ ‘ತಿಥಿ’ ಮಾಡಿ ಆಕ್ರೋಶ:
ಮಗಳು ಪೋಷಕರ ಒಪ್ಪಿಗೆಯಿಲ್ಲದೆ ಮನೆಯನ್ನು ತೊರೆದು ಹೋದ ಕಾರಣ, ಆಕೆ ತಮ್ಮ ಪಾಲಿಗೆ ಸತ್ತುಹೋದಳೆಂದು ತೀರ್ಮಾನಿಸಿದ ಶಿವಗೌಡ ಅವರು ಮಗಳ ತಿಥಿ ಮಾಡುವ ನಿರ್ಧಾರ ತೆಗೆದುಕೊಂಡರು. ಅದರಂತೆ, ಧಾರ್ಮಿಕ ವಿಧಿ ವಿಧಾನಗಳ ಪ್ರಕಾರ ಶ್ರದ್ಧಾಂಜಲಿ ಕಾರ್ಯಕ್ರಮ ನೆರವೇರಿಸಿ, ಬಂಧು-ಬಳಗದವರು ಹಾಗೂ ಇಡೀ ಗ್ರಾಮದ ಜನರನ್ನು ಕರೆಸಿ ತಿಥಿ ಊಟ ಹಾಕಿಸಿದ್ದಾರೆ. ಅಷ್ಟೇ ಅಲ್ಲದೆ, ತಮ್ಮ ಮನದ ನೋವು ಮತ್ತು ಆಕ್ರೋಶವನ್ನು ಹೊರಹಾಕಲು ಮಗಳ ಶ್ರದ್ಧಾಂಜಲಿ ಬ್ಯಾನರ್‌ಗಳನ್ನೂ ಊರಿನ ಅಲ್ಲಲ್ಲಿ ಹಾಕಿಸಿ, ಆಕೆಯೊಂದಿಗಿನ ಸಂಬಂಧವನ್ನು ಶಾಶ್ವತವಾಗಿ ಕಡಿದುಕೊಂಡಿರುವುದನ್ನು ಸಾರ್ವಜನಿಕವಾಗಿ ಘೋಷಿಸಿದ್ದಾರೆ.

ಪೋಷಕರ ಇಚ್ಛೆಗೆ ವಿರುದ್ಧವಾಗಿ ನಡೆಯುವ ಇಂತಹ ಘಟನೆಗಳು ಕುಟುಂಬಗಳಲ್ಲಿ ತೀವ್ರ ನೋವು ಮತ್ತು ಆಕ್ರೋಶವನ್ನು ಸೃಷ್ಟಿಸುತ್ತವೆ ಎಂಬುದಕ್ಕೆ ಬೆಳಗಾವಿ ಜಿಲ್ಲೆಯಲ್ಲಿ ನಡೆದ ಈ ವಿಲಕ್ಷಣ ವಿದ್ಯಮಾನವು ಸಾಕ್ಷಿಯಾಗಿದೆ. ಈ ಘಟನೆ ಇದೀಗ ಗ್ರಾಮದಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚರ್ಚೆಯ ವಿಷಯವಾಗಿದೆ.

Leave a Reply

Your email address will not be published. Required fields are marked *