ಯಶಸ್ಸಿಗೆ ನಿರಂತರ ಪ್ರಯತ್ನ ಮತ್ತು ಆತ್ಮವಿಶ್ವಾಸ ಅತೀ ಅಗತ್ಯ: ಮಡಿವಾಳಗೌಡ್ರು ಪಾಟೀಲ ಅಭಿಮತ

Spread the love

ಧಾರವಾಡ: ಗರಗ :ವಿದ್ಯಾರ್ಥಿಗಳ ಜೀವನದಲ್ಲಿ ಯಶಸ್ಸು ಎಂಬುದು ಆಕಸ್ಮಿಕವಾಗಿ ಸಿಗುವಂಥದ್ದಲ್ಲ; ಅದಕ್ಕೆ ನಿರಂತರ ಪ್ರಯತ್ನ, ಅಚಲ ಆತ್ಮವಿಶ್ವಾಸ ಹಾಗೂ ಶ್ರದ್ಧೆ ಅತ್ಯಂತ ಮುಖ್ಯ ಎಂದು ಗರಗದ ಎಸ್.ಜಿ.ಎಂ. ಟ್ರಸ್ಟ್ ಅಧ್ಯಕ್ಷ ಮಡಿವಾಳಗೌಡ್ರು ಪಾಟೀಲ ತಿಳಿಸಿದರು. ಕರ್ನಾಟಕ ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಟಪವು ತಾಲೂಕಿನ ಗರಗದ ಎಸ್.ಜಿ.ಎಂ. ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ‘ಪರೀಕ್ಷೆಗಳು ಅಂದು-ಇಂದು’ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪರೀಕ್ಷೆಯ ಬಗ್ಗೆ ವಿದ್ಯಾರ್ಥಿಗಳು ವಿನಾಕಾರಣ ಭಯಪಡುವ ಅಗತ್ಯವಿಲ್ಲ. ಅತಿಯಾದ ಭಯವು ಏಕಾಗ್ರತೆಯನ್ನು ಕುಗ್ಗಿಸಿ ಮನಸ್ಸಿನ ಶಕ್ತಿಯನ್ನು ನಷ್ಟ ಮಾಡುತ್ತದೆ. ಹೀಗಾಗಿ ಅಧ್ಯಯನ ಮಾಡುವಾಗ ಉತ್ಸಾಹದಿಂದ ಇರಬೇಕು ಹಾಗೂ ಪುನಃ ಪುನಃ ಓದುವುದು ಮತ್ತು ಬರೆಯುವುದನ್ನು ರೂಢಿಸಿಕೊಳ್ಳುವುದರಿಂದ ಜ್ಞಾಪಕ ಶಕ್ತಿ ವೃದ್ಧಿಯಾಗುತ್ತದೆ ಎಂದು ಅವರು ಕಿವಿಮಾತು ಹೇಳಿದರು.

​ಧಾರವಾಡ ಡಿಮ್ಹಾನ್ಸ್ ಆಸ್ಪತ್ರೆಯ ಸಾಮಾಜಿಕ ಆರೋಗ್ಯ ಕಾರ್ಯಕರ್ತರಾದ ಪ್ರಶಾಂತ ಪಾಟೀಲ ಅವರು ಮುಖ್ಯ ಉಪನ್ಯಾಸ ನೀಡಿ, ಪಿಯುಸಿ ಹಂತವು ವಿದ್ಯಾರ್ಥಿ ಜೀವನದ ಮಹತ್ವದ ತಿರುವು ಆಗಿರುವುದರಿಂದ ವಿದ್ಯಾರ್ಥಿಗಳು ಕೇವಲ ಕಠಿಣ ಪರಿಶ್ರಮದ ಬದಲಾಗಿ ಸ್ಮಾರ್ಟ್ ವರ್ಕ್ ಮಾಡುವುದನ್ನು ಕಲಿಯಬೇಕು ಎಂದು ಸಲಹೆ ನೀಡಿದರು. ಓದುವಾಗ ಮನಸ್ಸಿನಲ್ಲಿ ಅನ್ಯ ವಿಷಯಗಳಿಗೆ ಅವಕಾಶ ನೀಡಬಾರದು ಮತ್ತು ಒತ್ತಡದ ಸಂದರ್ಭದಲ್ಲಿ ಅಧ್ಯಯನ ಮಾಡುವುದನ್ನು ತಪ್ಪಿಸಬೇಕು. ಸಮಯದ ಸದ್ಬಳಕೆ ಮಾಡಿಕೊಳ್ಳುವುದರ ಜೊತೆಗೆ ಹರಟೆಗಳಿಂದ ದೂರವಿದ್ದು ಮನಸ್ಸಿನ ಏಕಾಗ್ರತೆಯನ್ನು ಕಾಪಾಡಿಕೊಳ್ಳಬೇಕು. ಪಠ್ಯಪುಸ್ತಕಗಳನ್ನೇ ಆಧಾರವಾಗಿಟ್ಟುಕೊಂಡು ಅಧ್ಯಯನ ಮಾಡಬೇಕು ಮತ್ತು ಆರೋಗ್ಯದ ಕಡೆಗೂ ಗಮನಹರಿಸುವುದು ಮುಖ್ಯ ಎಂದು ಅವರು ವಿದ್ಯಾರ್ಥಿಗಳಿಗೆ ತಿಳಿಹೇಳಿದರು.

​ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಆನಂದ ತೋಟಗಿ ಅವರು ಮಾತನಾಡಿ, ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘವು ಶಿಕ್ಷಣ ಮಂಟಪದ ಮೂಲಕ ಹಮ್ಮಿಕೊಳ್ಳುತ್ತಿರುವ ಇಂತಹ ವಿನೂತನ ಕಾರ್ಯಕ್ರಮಗಳು ಗ್ರಾಮೀಣ ಭಾಗದ ಮಕ್ಕಳ ಶೈಕ್ಷಣಿಕ ಗುಣಮಟ್ಟ ಸುಧಾರಿಸಲು ಪೂರಕವಾಗಿವೆ ಎಂದು ಶ್ಲಾಘಿಸಿದರು. ಸಂಘದ ಶಿಕ್ಷಣ ಮಂಟಪದ ಸಂಚಾಲಕ ವೀರಣ್ಣ ಒಡ್ಡೀನ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯ ಮೇಲೆ ಟ್ರಸ್ಟ್ ಸದಸ್ಯರಾದ ಸೋಮನಗೌಡ್ರು ಪಾಟೀಲ, ಸವಿತಾ ಕರೀಕಟ್ಟಿ ಹಾಗೂ ಎಂ.ಜಿ. ಸುಬೇದಾರ ಉಪಸ್ಥಿತರಿದ್ದರು. ಪ್ರೊ. ಬಿ.ಎಚ್. ಕೋಟಿಗೌಡ್ರ ಸ್ವಾಗತಿಸಿದರೆ, ಉಪನ್ಯಾಸಕ ಭರತೇಶ ಕುರಕುರಿ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಸೀತಾ ಸಾತಿಹಾಳ ವಂದಿಸಿದರು. ಸಮಾರಂಭದಲ್ಲಿ ನಾಗರಾಜ ಪೆಂಡಾರಿ, ಶರಣು ಬಳಿಗಾರ ಸೇರಿದಂತೆ ಕಾಲೇಜಿನ ಸಿಬ್ಬಂದಿ ಹಾಗೂ ಸುಮಾರು 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *