
ಹಾವೇರಿ: “ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಸಾಧನೆಗಳು ಜನಮನ ಗೆದ್ದಿವೆ. ಮುಂಬರುವ 2028ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು 141 ಸೀಟುಗಳನ್ನು ಗೆಲ್ಲುವುದು ಖಚಿತ. ನನ್ನ ಈ ಮಾತನ್ನು ಎಲ್ಲರೂ ಬರೆದಿಟ್ಟುಕೊಳ್ಳಿ,” ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭವಿಷ್ಯ ನುಡಿದರು. ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ರಾಜ್ಯ ಸರ್ಕಾರದ ಸಾವಿರ ದಿನಗಳ ಸಾಧನಾ ಸಮಾವೇಶ’ ಹಾಗೂ ‘ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶ’ದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಸಂಖ್ಯಾಬಲದ ಮೇಲೆ ಅಚಲ ವಿಶ್ವಾಸ:
ಹಾವೇರಿ ಜಿಲ್ಲೆಯ ಜನರು ಆರು ಮಂದಿ ಕಾಂಗ್ರೆಸ್ ಶಾಸಕರನ್ನು ಆರಿಸುವ ಮೂಲಕ ಪಕ್ಷಕ್ಕೆ ಭದ್ರ ಬುನಾದಿ ನೀಡಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸಲು ಈ ಐತಿಹಾಸಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದ ಡಿಸಿಎಂ, “ಕಳೆದ ಚುನಾವಣೆಯಲ್ಲಿ ನಾವು 136 ಸೀಟುಗಳನ್ನು ಗೆದ್ದಿದ್ದೆವು. ಇತ್ತೀಚಿನ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಇಬ್ಬರು ಮಾಜಿ ಮುಖ್ಯಮಂತ್ರಿಗಳ ಪುತ್ರರ ವಿರುದ್ಧ ಜಯಗಳಿಸಿ ನಮ್ಮ ಸಂಖ್ಯಾಬಲವನ್ನು 139ಕ್ಕೆ ಏರಿಸಿದ್ದೇವೆ. ಜನಪ್ರತಿನಿಧಿಗಳ ಹಾಗೂ ಜನರ ಈ ವಿಶ್ವಾಸವೇ ಮುಂದಿನ ಚುನಾವಣೆಯಲ್ಲಿ ನಮ್ಮನ್ನು 141ರ ಗಡಿ ತಲುಪಿಸಲಿದೆ,” ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ಆರನೇ ಗ್ಯಾರಂಟಿಯಾಗಿ ‘ಭೂ ಗ್ಯಾರಂಟಿ’:
ಸರ್ಕಾರದ 1000 ದಿನಗಳ ಆಡಳಿತವು ರಾಜ್ಯದಲ್ಲಿ ಮಹತ್ವದ ಬದಲಾವಣೆ ತಂದಿದೆ ಎಂದು ಪ್ರತಿಪಾದಿಸಿದ ಶಿವಕುಮಾರ್ ಅವರು, “ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಮಾತ್ರ ಚಂದ. ಐದು ಗ್ಯಾರಂಟಿಗಳ ಯಶಸ್ಸಿನ ನಂತರ ಈಗ ‘ಭೂ ಗ್ಯಾರಂಟಿ’ಯನ್ನು ಆರನೇ ಗ್ಯಾರಂಟಿಯಾಗಿ ನೀಡುತ್ತಿದ್ದೇವೆ. ಕಂದಾಯ ಸಚಿವ ಕೃಷ್ಣಬೈರೇಗೌಡರು ಜನರ ಋಣ ತೀರಿಸಲು ಪೋಡಿ, ಪಟ್ಟಾ ಹಾಗೂ ಆಸ್ತಿ ದಾಖಲೆಗಳನ್ನು ಮನೆ ಬಾಗಿಲಿಗೆ ತಲುಪಿಸುತ್ತಿದ್ದಾರೆ. ದೇವರಿತ್ತ ಅವಕಾಶದಲ್ಲಿ ನಾವು ಬಡವರ ಭೂಮಿಗೆ ಕಾನೂನುಬದ್ಧ ರಕ್ಷಣೆ ನೀಡುತ್ತಿದ್ದೇವೆ,” ಎಂದು ವಿವರಿಸಿದರು.
ಟೀಕೆಗಳಿಗೆ ಕಾಲವೇ ಉತ್ತರ ನೀಡಲಿದೆ:
ವಿರೋಧ ಪಕ್ಷಗಳ ಅಪಪ್ರಚಾರದ ವಿರುದ್ಧ ಕಿಡಿಕಾರಿದ ಅವರು, “ಬಿಜೆಪಿಯವರು ಭಾವನೆಗಳ ಮೇಲೆ ರಾಜಕೀಯ ಮಾಡಿದರೆ, ನಾವು ಬಡವರ ಬದುಕಿನ ಮೇಲೆ ರಾಜಕೀಯ ಮಾಡುತ್ತಿದ್ದೇವೆ. ನಮ್ಮ ಗ್ಯಾರಂಟಿಗಳನ್ನು ಬೇರೆ ಪಕ್ಷದವರು ಕಾಪಿ ಮಾಡುತ್ತಿರುವುದೇ ನಮ್ಮ ಯಶಸ್ಸಿಗೆ ಸಾಕ್ಷಿ. ಗ್ಯಾರಂಟಿ ಹಾಗೂ ಅಭಿವೃದ್ಧಿ ಯೋಜನೆಗಳಿಗೆ ಸಾವಿಲ್ಲ, ಆದರೆ ಟೀಕೆ ಮತ್ತು ಅಪಪ್ರಚಾರಗಳಿಗೆ ಖಂಡಿತ ಸಾವಿದೆ. ನಮ್ಮ ಸರ್ಕಾರ ನುಡಿದಂತೆ ನಡೆದು ಜನರ ಆಶೀರ್ವಾದ ಪಡೆಯಲು ಸದಾ ಸಿದ್ಧವಿದೆ,” ಎಂದು ಸ್ಪಷ್ಟಪಡಿಸಿದರು.

