
ಧಾರವಾಡ: ಬೆವರು ಸುರಿಸಿ ಭೂಮಿ ತಾಯಿಯನ್ನು ನಂಬಿ ಬದುಕುವ ರೈತನ ನಂಬಿಕೆಗೆ ದ್ರೋಹ ಬಗೆದು, ಕಳಪೆ ಬೀಜ ಮಾರಾಟ ಮಾಡಿದ ತೆಲಂಗಾಣ ಮೂಲದ ಸತ್ಯಕಾಮ್ ದುಡಿಗಳ್ಳ ಸಂಸ್ಥೆ ಹಾಗೂ ಸ್ಥಳೀಯ ವಿತರಕರಿಗೆ ಧಾರವಾಡ ಜಿಲ್ಲಾ ಗ್ರಾಹಕ ಆಯೋಗವು ಸರಿಯಾದ ಪಾಠ ಕಲಿಸಿದೆ. ಈ ಕಂಪನಿಗಳ ಸೇವಾ ನ್ಯೂನ್ಯತೆಯನ್ನು ತೀವ್ರವಾಗಿ ಖಂಡಿಸಿರುವ ಆಯೋಗವು, ಸಂಕಷ್ಟಕ್ಕೀಡಾದ ರೈತನಿಗೆ ಒಟ್ಟು 5 ಲಕ್ಷ ರೂಪಾಯಿ ಬೆಳೆ ನಷ್ಟ ಪರಿಹಾರ, 50 ಸಾವಿರ ರೂಪಾಯಿ ಮಾನಸಿಕ ದಂಡ ಹಾಗೂ 10 ಸಾವಿರ ರೂಪಾಯಿ ಪ್ರಕರಣದ ವೆಚ್ಚ ಸೇರಿದಂತೆ ಭಾರಿ ಮೊತ್ತದ ದಂಡ ಪಾವತಿಸುವಂತೆ ಖಡಕ್ ಆದೇಶ ನೀಡಿದೆ.
ಲಾಭದ ಆಸೆಗೆ ಬಲಿಯಾದ ರೈತನ ಶ್ರಮ:
ಧಾರವಾಡ ತಾಲೂಕಿನ ಪುಡಕಲಕಟ್ಟಿಯ ಪ್ರಗತಿಪರ ರೈತ ಬಸವರಾಜ ಚಂದರಗಿ ಎಂಬುವವರು 2022ರಲ್ಲಿ ತಮ್ಮ 35 ಎಕರೆ ಜಮೀನಿನಲ್ಲಿ ಗೋವಿನ ಜೋಳ ಬಿತ್ತಲು ಮುಂದಾಗಿದ್ದರು. ತೆಲಂಗಾಣದ ಸತ್ಯಕಾಮ್ ದುಡಿಗಳ್ಳ ಸಂಸ್ಥೆಯ 42 ಬೀಜದ ಪ್ಯಾಕೆಟ್‌ಗಳನ್ನು ಸುಮಾರು 56 ಸಾವಿರ ರೂಪಾಯಿ ನೀಡಿ ಹುಬ್ಬಳ್ಳಿಯ ಸಿದ್ದೇಶ್ವರ ಆಗ್ರೋ ಟ್ರೇಡರ್ಸ್ ಹಾಗೂ ಧಾರವಾಡದ ಕಾಯಕಯೋಗಿ ತೋಟಗಾರಿಕಾ ಸಂಸ್ಥೆಯಿಂದ ಖರೀದಿಸಿದ್ದರು. ತನ್ನ ಜಮೀನನ್ನು ಹದಗೊಳಿಸಿ, ಸಾವಿರಾರು ರೂಪಾಯಿ ಸಾಲ-ಸೋಲ ಮಾಡಿ ಗೊಬ್ಬರ ಹಾಕಿ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ರೈತನಿಗೆ ಕೊನೆಗೆ ಸಿಕ್ಕಿದ್ದು ಮಾತ್ರ ಬರಿಗೈ. ಗಿಡಗಳೇನೋ ಆಕಾಶದೆತ್ತರಕ್ಕೆ ಬೆಳೆದವು, ಆದರೆ ತೆನೆಯಲ್ಲಿ ಕಾಳುಗಳೇ ಇಲ್ಲದ ಅತಂತ್ರ ಸ್ಥಿತಿ ನಿರ್ಮಾಣವಾಯಿತು. ಕಣ್ಣೆದುರೇ ಬೆಳೆ ನಾಶವಾಗುತ್ತಿರುವುದನ್ನು ಕಂಡು ಕಂಗಾಲಾದ ರೈತ ಕೃಷಿ ಇಲಾಖೆಯ ಮೊರೆ ಹೋಗಿದ್ದರು.
ಕಂಪನಿಯ ಅಮಾನವೀಯ ನಡವಳಿಕೆ:
ಗರಗದ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ, ಕಂಪನಿಯ ಕಳಪೆ ಬೀಜದ ಅಸಲಿಯತ್ತು ಬಯಲಾಗಿತ್ತು. ಉತ್ತಮ ಬೀಜವೆಂದು ರೈತನಿಗೆ ಸುಳ್ಳು ಭರವಸೆ ನೀಡಿ, ಹಣ ದೋಚಿದ ಈ ಕಂಪನಿಯ ನಡೆ ಕೇವಲ ವ್ಯಾಪಾರವಲ್ಲ, ಅದು ಒಬ್ಬ ರೈತನ ಬದುಕಿನ ಮೇಲಿನ ಪ್ರಹಾರವಾಗಿತ್ತು. ತನಗೆ ಆದ ಆರ್ಥಿಕ ನಷ್ಟ ಹಾಗೂ ಮಾನಸಿಕ ಸಂಕಟಕ್ಕೆ ನ್ಯಾಯ ಕೋರಿ ಬಸವರಾಜ ಅವರು 2023ರಲ್ಲಿ ಜಿಲ್ಲಾ ಗ್ರಾಹಕ ಆಯೋಗದ ಮೆಟ್ಟಿಲೇರಿದ್ದರು.
ನ್ಯಾಯದ ದೀಪ ಹಚ್ಚಿದ ಆಯೋಗ:
ಈ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಅವರು, ಕಂಪನಿಯ ದ್ರೋಹದ ನಡವಳಿಕೆಯನ್ನು ಖಂಡಿಸಿದ್ದಾರೆ. ರೈತರಿಗೆ ಗುಣಮಟ್ಟದ ಬೀಜ ನೀಡುವುದು ಕಂಪನಿಯ ಮೂಲಭೂತ ಕರ್ತವ್ಯ. ಆದರೆ, ಇಳುವರಿಯೇ ಬಾರದ ಬೀಜಗಳನ್ನು ಮಾರಿ ರೈತನನ್ನು ಸಂಕಷ್ಟಕ್ಕೆ ದೂಡಿರುವುದು ಅಕ್ಷಮ್ಯ ಅಪರಾಧ ಎಂದು ಅಭಿಪ್ರಾಯಪಟ್ಟ ಆಯೋಗವು, ರೈತನ ಪರವಾಗಿ ಈ ಮಹತ್ವದ ತೀರ್ಪು ನೀಡಿದೆ. ಈ ತೀರ್ಪು ಕೇವಲ ಲಾಭಕ್ಕಾಗಿ ರೈತರನ್ನು ಬಲಿಪಶು ಮಾಡುವ ಇತರೆ ಬೀಜ ಕಂಪನಿಗಳಿಗೂ ಒಂದು ಎಚ್ಚರಿಕೆಯ ಗಂಟೆಯಾಗಿದೆ.

