ಸರ್ಕಾರಿ ಶಾಲೆಗಳ ಏಳ್ಗೆಗೆ ಸಮುದಾಯದ ಸಹಭಾಗಿತ್ವ ಅವಶ್ಯಕ: ಧಾರವಾಡದಲ್ಲಿ ರಾಮಕೃಷ್ಣ ಸದಲಗಿ ಅಭಿಪ್ರಾಯ

Spread the love

ಧಾರವಾಡ: ಸರ್ಕಾರಿ ಶಾಲೆಗಳಲ್ಲಿ ಕಲಿಯುವ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಇಲಾಖೆಯು ಹತ್ತು ಹಲವು ಸೌಲಭ್ಯಗಳನ್ನು ಜಾರಿಗೊಳಿಸುತ್ತಿದೆ. ಆದರೆ ಇಂತಹ ಸೌಲಭ್ಯಗಳು ಮತ್ತು ಶಾಲಾ ಕಾರ್ಯಕ್ರಮಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳಲು ಸಮುದಾಯದ ಸಹಭಾಗಿತ್ವ ಅತ್ಯಂತ ಅವಶ್ಯಕ ಎಂದು ಧಾರವಾಡ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣ ಸದಲಗಿ ಅಭಿಪ್ರಾಯಪಟ್ಟರು. ತಾಲೂಕಿನ ಮುರಕಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಮುದಾಯ ಮತ್ತು ಶಿಕ್ಷಣ ಇಲಾಖೆ ಕೈಜೋಡಿಸಿದಾಗ ಮಾತ್ರ ಸರ್ಕಾರಿ ಶಾಲೆಗಳ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ಅವರು ತಿಳಿಸಿದರು.

​ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ನಾಗಭೂಷಣ ಶಿವಯೋಗಿಗಳು ಮತ್ತು ಯೋಗ ಗುರು ವೈದ್ಯ ಚನ್ನಬಸವ ಗುರುಗಳು ಆಶೀರ್ವಚನ ನೀಡಿದರು. ವಿದ್ಯಾರ್ಥಿ ಜೀವನದಲ್ಲಿ ಆರೋಗ್ಯದ ಮಹತ್ವದ ಕುರಿತು ಬೆಳಕು ಚೆಲ್ಲಿದ ಅವರು, ಮಕ್ಕಳಿಗೆ ಯೋಗದ ವಿವಿಧ ಆಯಾಮಗಳನ್ನು ಪರಿಚಯಿಸುವುದರ ಜೊತೆಗೆ ಆರೋಗ್ಯ ರಕ್ಷಣೆಯ ಸೂತ್ರಗಳನ್ನು ಮಾರ್ಮಿಕವಾಗಿ ತಿಳಿಸಿಕೊಟ್ಟರು. ಯೋಗಾಭ್ಯಾಸದಿಂದ ಏಕಾಗ್ರತೆ ಹೆಚ್ಚಲಿದ್ದು, ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜೀವನದಲ್ಲಿ ಉತ್ತಮ ಸಾಧನೆ ಮಾಡಲು ಇದು ಪೂರಕವಾಗಲಿದೆ ಎಂದು ಅವರು ಹಾರೈಸಿದರು.

​ಸಮಾರಂಭದಲ್ಲಿ ಕಾರ್ಮಿಕ ಸಚಿವರ ಆಪ್ತ ಸಹಾಯಕ ಶ್ರೀಕಾಂತ ಗಾಯಕವಾಡ, ನಾಗರಾಜ ಘಾಟಿನ, ಮಲ್ಲವ್ವ ಹರಿಜನ, ರಾಘವೇಂದ್ರ ಪರಸಪ್ಪನವರ ಸೇರಿದಂತೆ ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು, ಶಿಕ್ಷಕ ವೃಂದ ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ವರದಿ: ವಿನಾಯಕ ಗುಡ್ಡದಕೇರಿ

Leave a Reply

Your email address will not be published. Required fields are marked *