ಮಕ್ಕಳ ಸಂತೆ: ವ್ಯವಹಾರ ಜ್ಞಾನ ವೃದ್ಧಿಗೆ ಸಹಕಾರಿ – ಬಿಇಒ ಉಮೇಶ ಬೊಮ್ಮಕ್ಕನವರ

Spread the love

ನವಲಗುಂದ: ಶಾಲಾ ಹಂತದಲ್ಲಿ ಆಯೋಜಿಸುವ ‘ಮಕ್ಕಳ ಸಂತೆ’ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ವ್ಯವಹಾರ ಜ್ಞಾನ, ಹಣದ ಮಹತ್ವ ಹಾಗೂ ಗ್ರಾಹಕರನ್ನು ಸೆಳೆಯುವ ಸಂವಹನ ಕೌಶಲಗಳನ್ನು ಕಲಿಸಲು ಅತ್ಯುತ್ತಮ ವೇದಿಕೆಯಾಗಿವೆ ಎಂದು ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬೊಮ್ಮಕ್ಕನವರ ಅಭಿಪ್ರಾಯಪಟ್ಟರು.

​ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ-3 ರಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಸಂತೆ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ಮಕ್ಕಳು ಸ್ವತಃ ತಯಾರಿಸಿದ ತಿಂಡಿ-ತಿನಿಸುಗಳು, ತರಕಾರಿಗಳು ಹಾಗೂ ಆಟಿಕೆಗಳನ್ನು ಮಾರಾಟ ಮಾಡುವ ಮೂಲಕ ಪ್ರಾಯೋಗಿಕ ಕಲಿಕೆಯನ್ನು ಪಡೆಯುತ್ತಾರೆ. ಇಂತಹ ಚಟುವಟಿಕೆಗಳು ಶಾಲಾ ಆವರಣದಲ್ಲಿ ಸಣ್ಣ ಮಾರುಕಟ್ಟೆಯ ವಾತಾವರಣವನ್ನು ಸೃಷ್ಟಿಸಿ, ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುತ್ತವೆ ಎಂದು ಹೇಳಿದರು.

​ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾಮಾಜಿಕ ಕಾರ್ಯಕರ್ತ ಮಾಬುಸಾಬ ಯರಗುಪ್ಪಿ ಮಾತನಾಡಿ, ಇಂತಹ ಸಂತೆಗಳಿಂದ ಮಕ್ಕಳು ವಸ್ತುಗಳಿಗೆ ಬೆಲೆ ನಿಗದಿ ಮಾಡುವುದು, ಲಾಭ-ನಷ್ಟದ ಲೆಕ್ಕಾಚಾರ, ಹಣ ಎಣಿಕೆ ಮತ್ತು ಚಿಲ್ಲರೆ ಕೊಡುವುದನ್ನು ಕಲಿಯುತ್ತಾರೆ. ಇದು ಗಣಿತದ ಪ್ರಾಯೋಗಿಕ ಪಾಠವಾಗಿದ್ದು, ಗ್ರಾಹಕರನ್ನು ಆಕರ್ಷಿಸಲು ಮಾತನಾಡುವ ಮೂಲಕ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ ಎಂದು ತಿಳಿಸಿದರು.

​ಶಾಲಾ ಆವರಣದಲ್ಲಿ ನಡೆದ ಈ ಸಂತೆಯಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು. ತರಕಾರಿ, ತಿಂಡಿ ಸೇರಿದಂತೆ ವಿವಿಧ ವಸ್ತುಗಳ ಮಾರಾಟ ಜೋರಾಗಿ ನಡೆಯಿತು. ವಿಶೇಷವೆಂದರೆ, ಕೆಲವೇ ಗಂಟೆಗಳಲ್ಲಿ ಮಕ್ಕಳು ಬರೋಬ್ಬರಿ ಹತ್ತು ಸಾವಿರ ರೂಪಾಯಿಗೂ ಅಧಿಕ ವಹಿವಾಟು ನಡೆಸುವ ಮೂಲಕ ಗಮನ ಸೆಳೆದರು.

​ಈ ಸಂದರ್ಭದಲ್ಲಿ ಶಾಲೆಯ ಪ್ರಧಾನ ಗುರುಗಳಾದ ಎಸ್.ಎಸ್. ಜೋಶಿ, ಎಸ್‌ಡಿಎಂಸಿ ಅಧ್ಯಕ್ಷ ಮುತ್ತಪ್ಪ ಬಿಸನಾಳ, ಮಾಜಿ ಅಧ್ಯಕ್ಷ ಅಡಿವೆಪ್ಪ ಶಿರಸಂಗಿ, ಸದಸ್ಯರಾದ ಕಾಶೀಮಸಾಬ ಮಚಲಿಬಂದರ, ಮಹದೇವಪ್ಪ ಹಂಡಿ, ಮಹಮ್ಮದ ತಾಜುದ್ದಿನ ಹುನಗುಂದ, ಬಾಬುಷಾ ಮಕಾಂದಾರ, ಮಹಮ್ಮದಲಿ ಮಿರ್ಜಿ, ಹಜರೆಸಾಬ ಗೋವನಕೊಪ್ಪ, ಬಶೀರಅಹ್ಮದ ಹುನಗುಂದ ಉಪಸ್ಥಿತರಿದ್ದರು. ಅಲ್ಲದೆ ಶಿಕ್ಷಕರಾದ ಎಸ್.ಎಫ್. ನಿರಲಗಿ, ಎಸ್.ಎಂ. ಬೆಂಚಿಕೇರಿ, ಆರ್.ಬಿ. ಹಳ್ಳಿಕೇರಿ, ಎಮ್.ಎಚ್. ಚಿಕನಾಳ, ಎಂ.ಸಿ. ಚನ್ನಪ್ಪಗೌಡ್ರ, ಕೆ.ಕೆ. ಮಂಕಣಿ, ಕೆ.ಎಫ್. ಬಂತಿ, ಎಂ.ಎನ್. ವಗ್ಗರ, ಸುರೇಶ ಭಜಂತ್ರಿ ಸೇರಿದಂತೆ ಪಾಲಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

Leave a Reply

Your email address will not be published. Required fields are marked *