ಮಕ್ಕಳ ಭವಿಷ್ಯವೇ ಭಾರತದ ಭವಿಷ್ಯ: ಧಾರವಾಡ ಜಿಲ್ಲೆಯಲ್ಲಿ 1.24 ಲಕ್ಷ ಫಲಾನುಭವಿಗಳಿಗೆ ಐಸಿಡಿಎಸ್‌ ಸೌಲಭ್ಯ

Spread the love

ಧಾರವಾಡ: ಮಕ್ಕಳಿಗೆ ಉತ್ತಮ ಭವಿಷ್ಯವೇ ಭಾರತದ ಭವಿಷ್ಯ ಎಂಬ ದೂರದೃಷ್ಟಿಯೊಂದಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಮಕ್ಕಳ ಕಲ್ಯಾಣ ಮತ್ತು ಅಭಿವೃದ್ಧಿಗಾಗಿ ಜಾರಿಯಲ್ಲಿರುವ ನೀತಿ ಹಾಗೂ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಶ್ರಮಿಸುತ್ತಿದೆ. ಈ ಶ್ರಮವು ದೇಶದ ಮುಂದಿನ ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಗೆ ಮಾಡುತ್ತಿರುವ ಹೂಡಿಕೆಯಾಗಿದೆ ಎಂದು ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ಐಸಿಡಿಎಸ್‌) ವಿಭಾಗವು ತಿಳಿಸಿದೆ.

​ಕರ್ನಾಟಕ ರಾಜ್ಯದಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯನ್ನು ಪ್ರಾಯೋಗಿಕವಾಗಿ ಅಕ್ಟೋಬರ್ 2, 1975 ರಂದು ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲ್ಲೂಕಿನಲ್ಲಿ 100 ಅಂಗನವಾಡಿ ಕೇಂದ್ರಗಳೊಂದಿಗೆ ಪ್ರಾರಂಭಿಸಲಾಯಿತು. ಈಗ ಈ ಯೋಜನೆಯು ರಾಜ್ಯದ ಎಲ್ಲಾ ತಾಲ್ಲೂಕುಗಳಿಗೆ ವಿಸ್ತರಿಸಲ್ಪಟ್ಟಿದ್ದು, ಗರ್ಭಿಣಿಯರು, ಬಾಣಂತಿಯರು, ಕಿಶೋರಿಯರು ಮತ್ತು 6 ವರ್ಷದೊಳಗಿನ ಮಕ್ಕಳ ಅಭಿವೃದ್ಧಿಯು ಇದರ ಮುಖ್ಯ ಗುರಿಯಾಗಿದೆ.

​ಯೋಜನೆಯ ಪ್ರಮುಖ ಉದ್ದೇಶಗಳು: 0-6 ವರ್ಷದ ಮಕ್ಕಳ ಆರೋಗ್ಯ ಮತ್ತು ಪೌಷ್ಟಿಕ ಮಟ್ಟವನ್ನು ಹೆಚ್ಚಿಸುವುದು; ಮಗುವಿನ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಭದ್ರ ಅಡಿಪಾಯ ಹಾಕುವುದು; ಮಕ್ಕಳಲ್ಲಿ ಸಾವು, ಅನಾರೋಗ್ಯ, ಅಪೌಷ್ಟಿಕತೆ ಮತ್ತು ಶಾಲಾ ಬಿಡುವಿಕೆಯನ್ನು ಕಡಿಮೆಗೊಳಿಸುವುದು; ಹಾಗೂ ಆರೋಗ್ಯ ಮತ್ತು ಪೌಷ್ಟಿಕತೆಯ ಶಿಕ್ಷಣವನ್ನು ನೀಡುವುದರ ಮೂಲಕ ತಾಯಂದಿರಲ್ಲಿ ತಮ್ಮ ಮಕ್ಕಳ ಅಗತ್ಯಗಳನ್ನು ನೋಡಿಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುವುದಾಗಿ ತಿಳಿಸಿದೆ.

ಸೇವಾ ಸೌಲಭ್ಯಗಳು ಮತ್ತು ಪೌಷ್ಠಿಕ ಆಹಾರ:

​ಐಸಿಡಿಎಸ್‌ ಯೋಜನೆಯಡಿ 6 ವರ್ಷದ ಒಳಗಿನ ಮಕ್ಕಳಿಗೆ, ಗರ್ಭಿಣಿಯರಿಗೆ, ಬಾಣಂತಿಯರಿಗೆ ಮತ್ತು ಪ್ರಾಯ ಪೂರ್ವ ಬಾಲಕಿಯರಿಗೆ ಅಂಗನವಾಡಿ ಕಾರ್ಯಕರ್ತೆಯರು ಪೂರಕ ಪೌಷ್ಟಿಕ ಆಹಾರವನ್ನು ನೀಡುತ್ತಾರೆ. ಆರೋಗ್ಯ ತಪಾಸಣೆ ಮತ್ತು ಚುಚ್ಚುಮದ್ದುಗಳನ್ನು ವೈದ್ಯಾಧಿಕಾರಿಗಳು ಅಥವಾ ಕಿರಿಯ ಆರೋಗ್ಯ ಸಹಾಯಕಿಯರು ನೀಡುತ್ತಾರೆ. 3 ರಿಂದ 6 ವರ್ಷದ ಮಕ್ಕಳಿಗೆ ಶಾಲಾ ಪೂರ್ವ ಶಿಕ್ಷಣ ಮತ್ತು 15 ರಿಂದ 45 ವಯಸ್ಸಿನ ಮಹಿಳೆಯರಿಗೆ ಪೌಷ್ಟಿಕತೆ ಮತ್ತು ಆರೋಗ್ಯ ಶಿಕ್ಷಣವನ್ನು ಒದಗಿಸಲಾಗುತ್ತಿದೆ.

​ಪೂರಕ ಪೌಷ್ಠಿಕ ಆಹಾರ ಕಾರ್ಯಕ್ರಮದಡಿ 0-6 ವರ್ಷದ ಮಕ್ಕಳಿಗೆ 500 ಕ್ಯಾಲೋರಿ ಮತ್ತು 12-15 ಗ್ರಾಂ ಪ್ರೊಟೀನ್, ಗರ್ಭಿಣಿ/ಬಾಣಂತಿಯರಿಗೆ 600 ಕ್ಯಾಲೋರಿ ಮತ್ತು 18-20 ಗ್ರಾಂ ಪ್ರೊಟೀನ್ ಒದಗಿಸಲಾಗುತ್ತಿದೆ. ತೀವ್ರ ಅಪೌಷ್ಟಿಕತೆಯುಳ್ಳ ಮಕ್ಕಳಿಗೆ 800 ಕ್ಯಾಲೋರಿ ಹಾಗೂ 20-25 ಗ್ರಾಂ ಪ್ರೊಟೀನ್ ಒದಗಿಸುವ ಉದ್ದೇಶವಿದೆ. ಈ ಆಹಾರವನ್ನು ವರ್ಷದಲ್ಲಿ 300 ದಿನಗಳಿಗೆ ನೀಡಲಾಗುತ್ತಿದ್ದು, ಪ್ರತಿ ಫಲಾನುಭವಿಗೆ ಪರಿಷ್ಕೃತ ಘಟಕ ವೆಚ್ಚದಂತೆ ಹಣ ನಿಗದಿಪಡಿಸಲಾಗಿದೆ.

ಕ್ಷೀರಭಾಗ್ಯ ಮತ್ತು ಸೃಷ್ಟಿ ಯೋಜನೆಗಳು:

​ಅಂಗನವಾಡಿ ಮಕ್ಕಳಿಗೆ ಕ್ಷೀರಭಾಗ್ಯ ಯೋಜನೆಯಡಿ ವಾರದಲ್ಲಿ 5 ದಿನ 15 ಗ್ರಾಂ ಹಾಲಿನ ಪುಡಿ ಮತ್ತು 5 ಗ್ರಾಂ ಸಕ್ಕರೆಯನ್ನು ನೀಡಲಾಗುತ್ತಿದೆ. ತೀವ್ರ ಅಪೌಷ್ಟಿಕತೆಯ ಮಕ್ಕಳಿಗೆ ವಾರದಲ್ಲಿ 3 ದಿನ ಹೆಚ್ಚುವರಿಯಾಗಿ ಹಾಲಿನ ಪುಡಿಯನ್ನು ಮನೆಗೆ ವಿತರಿಸಲಾಗುತ್ತದೆ. ಸೃಷ್ಟಿ ಯೋಜನೆಯಡಿ 3 ರಿಂದ 6 ವರ್ಷದ ಸಾಮಾನ್ಯ ಮಕ್ಕಳಿಗೆ ವಾರದಲ್ಲಿ ಎರಡು ದಿನ ಮೊಟ್ಟೆ, ತೀವ್ರ ಅಪೌಷ್ಟಿಕತೆಯ ಮಕ್ಕಳಿಗೆ ವಾರಕ್ಕೆ 3 ರಿಂದ 5 ದಿನ ಮೊಟ್ಟೆ ನೀಡಲಾಗುತ್ತಿದ್ದು, ಮೊಟ್ಟೆ ಸೇವಿಸದ ಮಕ್ಕಳಿಗೆ 6 ದಿನ ಹಾಲು ನೀಡುವ ಸೌಲಭ್ಯವಿದೆ. ಕ್ಷೀರಭಾಗ್ಯ ಹಾಗೂ ಸೃಷ್ಟಿ ಯೋಜನೆಗಳು ರಾಜ್ಯ ಪುರಸ್ಕೃತ ಯೋಜನೆಗಳಾಗಿವೆ.

ಅಂಗನವಾಡಿ ಸಿಬ್ಬಂದಿಗೆ ಸೌಲಭ್ಯಗಳು:

​ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ಗೌರವಧನ, ನಿವೃತ್ತಿ ಹೊಂದಿದವರಿಗೆ ಗ್ರಾಚ್ಯುಟಿ ಸೌಲಭ್ಯ, ಮರಣ ಹೊಂದಿದಲ್ಲಿ ಅವಲಂಬಿತರಿಗೆ ₹50,000 ಪರಿಹಾರ ಧನ, ಅನಾರೋಗ್ಯದ ಸಮಯದಲ್ಲಿ ₹50,000 ವೈದ್ಯಕೀಯ ವೆಚ್ಚ ಮರುಪಾವತಿ ಸೌಲಭ್ಯ ಒದಗಿಸಲಾಗುತ್ತಿದೆ. ಎನ್.ಪಿ.ಎಸ್. ಲೈಟ್ ಯೋಜನೆಯಡಿ ಸರ್ಕಾರದಿಂದ ಸಮ ಪ್ರಮಾಣದ ವಂತಿಗೆ ಜಮೆ ಮಾಡಲಾಗುತ್ತಿದೆ. ಇದರ ಜೊತೆಗೆ, ವರ್ಷಕ್ಕೆ 2 ಜೊತೆ ಸಮವಸ್ತ್ರ, 180 ದಿನಗಳ ಗೌರವಧನ ಸಹಿತ ಹೆರಿಗೆ ರಜೆ, ವಾರ್ಷಿಕ ರಜೆ, ಬೇಸಿಗೆ ರಜೆ ಮತ್ತು ಅನುಕಂಪದ ಆಧಾರದ ಮೇಲೆ ನೇಮಕಾತಿ ಸೌಲಭ್ಯಗಳನ್ನು ನೀಡಲಾಗುತ್ತಿದೆ.

​ರಾಜ್ಯದ 204 ಶಿಶು ಅಭಿವೃದ್ಧಿ ಯೋಜನೆಗಳ ಮುಖಾಂತರ ಒಟ್ಟು 69,922 ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಧಾರವಾಡ ಜಿಲ್ಲೆಯಲ್ಲಿ ಒಟ್ಟು 06 ತಾಲ್ಲೂಕುಗಳಲ್ಲಿ 1,622 ಅಂಗನವಾಡಿ ಕೇಂದ್ರಗಳು ಕರ್ತವ್ಯ ನಿರ್ವಹಿಸುತ್ತಿವೆ. ಈ ಪೈಕಿ 835 ಅಂಗನವಾಡಿ ಕೇಂದ್ರಗಳು ಸ್ವಂತ ಕಟ್ಟಡ ಹೊಂದಿದ್ದರೆ, ಉಳಿದ ಕೇಂದ್ರಗಳು ಬಾಡಿಗೆ ಅಥವಾ ಇತರ ಸರ್ಕಾರಿ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಧಾರವಾಡ ಜಿಲ್ಲೆಯಲ್ಲಿ ಒಟ್ಟು 1,24,206 ಫಲಾನುಭವಿಗಳು (ಮಕ್ಕಳು, ಗರ್ಭಿಣಿ, ಬಾಣಂತಿಯರು, ಕಾರ್ಯಕರ್ತೆಯರು ಮತ್ತು ಸಹಾಯಕರು) ದಾಖಲಾಗಿದ್ದು ಯೋಜನೆಯ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಈ ಎಲ್ಲ ಮಾಹಿತಿಯನ್ನು ‘ಪೋಷಣ ಟ್ರಾಕರ್’ ಎಂಬ ಆ್ಯಪ್ ಮುಖಾಂತರ ನಿರ್ವಹಿಸಲಾಗುತ್ತಿದೆ.

Leave a Reply

Your email address will not be published. Required fields are marked *