
ಧಾರವಾಡ: ಇಂದಿನ ಮಕ್ಕಳೇ ನಾಳೆಯ ಪ್ರಜೆಗಳಾಗಿದ್ದು, ಪ್ರತಿಯೊಂದು ಮಗುವು ತನ್ನ ಹಕ್ಕುಗಳು ಮತ್ತು ಸಂರಕ್ಷಣಾ ಕಾಯ್ದೆಗಳ ಬಗ್ಗೆ ಅರಿವು ಹೊಂದಿರಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ಹೇಳಿದರು. ನಗರದ ಪ್ರೆಸೆಂಟೇಶನ್ ಬಾಲಕಿಯರ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ ‘ಮಕ್ಕಳ ಹಕ್ಕುಗಳ ರಕ್ಷಣೆ, ಸುರಕ್ಷತೆ ಮತ್ತು ಪೋಕ್ಸೋ ಕಾಯ್ದೆಯ ಅನುಷ್ಠಾನ’ ಕುರಿತ ಸಾಮರ್ಥ್ಯಾಭಿವೃದ್ಧಿ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬಾಲನ್ಯಾಯ ಕಾಯ್ದೆಯನ್ವಯ 18 ವರ್ಷದೊಳಗಿನ ಪ್ರತಿಯೊಬ್ಬರೂ ಮಕ್ಕಳಾಗಿದ್ದು, ಜಿಲ್ಲೆಯಲ್ಲಿ ಯಾವುದೇ ಮಗು ಶಾಲೆಯಿಂದ ಹೊರಗುಳಿಯಬಾರದು. ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ ಹಾಗೂ ಲೈಂಗಿಕ ಶೋಷಣೆಯಂತಹ ಸಮಸ್ಯೆಗಳಿಂದ ಮಕ್ಕಳನ್ನು ಮುಕ್ತಗೊಳಿಸಲು ಸಮಾಜವು ಜಾಗೃತವಾಗಿರಬೇಕು. ಮಕ್ಕಳಿಗೆ ‘ಸುರಕ್ಷಿತ ಸ್ಪರ್ಶ’ ಮತ್ತು ‘ಅಸುರಕ್ಷಿತ ಸ್ಪರ್ಶ’ದ ಬಗ್ಗೆ ನಿಖರ ಮಾಹಿತಿ ನೀಡುವ ಮೂಲಕ ಅವರು ತಮ್ಮ ರಕ್ಷಣೆ ಮಾಡಿಕೊಳ್ಳುವಂತೆ ಸಬಲೀಕರಿಸಬೇಕು ಎಂದು ತಿಳಿಸಿದರು. ಯಾವುದಾದರೂ ಮಗು ಸಂಕಷ್ಟದಲ್ಲಿದ್ದರೆ ತಕ್ಷಣವೇ ಸಹಾಯವಾಣಿ 1098 ಕ್ಕೆ ಕರೆ ಮಾಡಲು ಅವರು ಕಿವಿಮಾತು ಹೇಳಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದೀಪಾ ಜಾವೂರ ಅವರು ಮಾತನಾಡಿ, ಶಾಲಾ ಆವರಣದಲ್ಲಿ ಮಕ್ಕಳ ರಕ್ಷಣಾ ನೀತಿ-2016 ಅನ್ನು ಕಡ್ಡಾಯವಾಗಿ ಪಾಲಿಸಬೇಕು. ಪ್ರತಿ 15 ದಿನಗಳಿಗೊಮ್ಮೆ ಶಾಲೆಯ ಸಲಹಾ ಪೆಟ್ಟಿಗೆಯನ್ನು ತೆರೆದು ಮಕ್ಕಳ ಕುಂದುಕೊರತೆಗಳನ್ನು ಆಲಿಸಿ ಬಗೆಹರಿಸಬೇಕು. ಶಾಲಾ ಆವರಣದಲ್ಲಿ ಸಹಾಯವಾಣಿ 1098ರ ನೂತನ ಲೋಗೋ ಇರುವ ಶಾಶ್ವತ ಫಲಕಗಳನ್ನು ಅಳವಡಿಸಬೇಕು ಎಂದು ಸೂಚಿಸಿದರು. ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಎಸ್. ಕೆಳದಿಮಠ ಮಾತನಾಡಿ, ಜಿಲ್ಲೆಯ ಪ್ರತಿಯೊಂದು ಶಾಲೆಯಲ್ಲೂ ಮಕ್ಕಳ ಸುರಕ್ಷತೆಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು. ಮಕ್ಕಳ ಕಲ್ಯಾಣ ಸಮಿತಿ ಸದಸ್ಯೆ ನೂರಜಹಾನ ಕಿಲ್ಲೇದಾರ ಅವರು ಬಾಲ ನ್ಯಾಯ ಕಾಯ್ದೆ-2015 ಮತ್ತು ಲೈಂಗಿಕ ದೌರ್ಜನ್ಯ ನಿಷೇಧ ಕಾಯ್ದೆ (ಪೋಕ್ಸೋ) ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಬಿ.ವಾಯ್. ಪಾಟೀಲ್, ತಹಶೀಲ್ದಾರ ಹನಮಂತ ಕೋಚರಗಿ, ತಾಪಂ ಇಒ ಗಂಗಾಧರ ಕಂದಕೂರ, ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣ ಸದಲಗಿ, ಮಹಿಳಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಬಸವರಾಜ ಕಾಮನಬೈಲು ಹಾಗೂ ವಕೀಲ ಎಂ.ಬಿ. ಬೆಂತೂರು ಉಪಸ್ಥಿತರಿದ್ದರು. ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ರೇನಿಟಾ ಪಿಂಟೋ, ಎಸ್ಡಿಎಂಸಿ ಸದಸ್ಯರು, ವಿವಿಧ ಶಾಲೆಗಳ ಮುಖ್ಯಸ್ಥರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮಹಮ್ಮದಲಿ ತಹಶೀಲ್ದಾರ ಕಾರ್ಯಕ್ರಮ ನಿರೂಪಿಸಿದರು ಮತ್ತು ಕರೆಪ್ಪ ಕೌಜಲಗಿ ವಂದಿಸಿದರು.

