ಅಣ್ಣಿಗೇರಿ ತುಪ್ಪದ ಕುರಹಟ್ಟಿ ಗ್ರಾಮದಲ್ಲಿ ಕಡಲೆ ಬಿ.ಜಿ.ಡಿ. 111-1 ಕ್ಷೇತ್ರೋತ್ಸವ ಯಶಸ್ವಿ

Spread the love


ಅಣ್ಣಿಗೇರಿ: ಅಣ್ಣಿಗೇರಿ ತಾಲೂಕಿನ ತುಪ್ಪದ ಕುರಹಟ್ಟಿ ಗ್ರಾಮದ ಪ್ರಗತಿಪರ ರೈತ ಕೃಷ್ಣ ರೆಡ್ಡಿ ಸಾಸ್ಟಿಹಳ್ಳಿ ಅವರ ಜಮೀನಿನಲ್ಲಿ ಹಮ್ಮಿಕೊಳ್ಳಲಾದ ಬಿ.ಜಿ.ಡಿ. 111-1 (BJD 111-1) ಸುಧಾರಿತ ದೇಶಿ ಕಡಲೆ ತಳಿಯ ಕ್ಷೇತ್ರೋತ್ಸವವು ಸುತ್ತಮುತ್ತಲಿನ ಗ್ರಾಮಗಳ ರೈತರ ಗಮನ ಸೆಳೆಯಿತು. ಈ ಕ್ಷೇತ್ರೋತ್ಸವದಲ್ಲಿ ಸುಧಾರಿತ ಕಡಲೆ ತಳಿಯ ಬೆಳವಣಿಗೆ, ಇಳುವರಿ ಸಾಮರ್ಥ್ಯ ಹಾಗೂ ಕೃಷಿ ತಾಂತ್ರಿಕ ಅಂಶಗಳ ಕುರಿತು ರೈತರಿಗೆ ಮಾಹಿತಿ ನೀಡಲಾಯಿತು.

ಕ್ಷೇತ್ರ ವೀಕ್ಷಣೆ ಸಂದರ್ಭದಲ್ಲಿ ಮಾತನಾಡಿದ ಅಣ್ಣಿಗೇರಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ವೀರಣ್ಣಗಡ ಅವರು, ಯೋಜನೆಯ ಉದ್ದೇಶಗಳ ಕುರಿತು ಹಾಗೂ ಸುಧಾರಿತ ಬೀಜೋಪಚಾರ ವಿಧಾನಗಳು ಮತ್ತು ಸಮಗ್ರ ಪೀಡೆ ನಿರ್ವಹಣೆಯ ಬಗ್ಗೆ ರೈತರಿಗೆ ತಾಂತ್ರಿಕ ಮಾಹಿತಿ ನೀಡಿದರು. ಬೆಳೆಯ ಉತ್ತಮ ನಿರ್ವಹಣೆಯಿಂದ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯವಿರುವ ಕುರಿತು ಅವರು ವಿವರಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ರೈತರು ಸ್ವತಃ ಬೆಳೆಯ ಕ್ಷೇತ್ರ ವೀಕ್ಷಣೆ ಮಾಡಿ ಅಗತ್ಯ ಮಾಹಿತಿಯನ್ನು ಪಡೆದುಕೊಂಡರು.

ಈ ವೇಳೆ ಕ್ಷೇತ್ರೋತ್ಸವದಲ್ಲಿ ಪಾಲ್ಗೊಂಡಿದ್ದ ಕೃಷಿ ವಿಜ್ಞಾನಿಗಳು ಮಾತನಾಡಿ, ಬಿ.ಜಿ.ಡಿ. 111-1 ಕಡಲೆ ತಳಿಯು ವಣ ಬೇಸಾಯಕ್ಕೆ ಅತ್ಯಂತ ಸೂಕ್ತವಾಗಿದ್ದು, ರೈತರು ಬೀಜೋಪಚಾರಕ್ಕೆ ವಿಶೇಷ ಗಮನ ನೀಡಬೇಕು ಎಂದು ಸಲಹೆ ನೀಡಿದರು. ವಿಶೇಷವಾಗಿ ಜೈವಿಕ ಬೀಜೋಪಚಾರಕ್ಕೆ ಸುಡೋಮೋನಾಸ್ ಫ್ಲುರೊಸೆನ್ಸ್ ಬಳಸುವುದರಿಂದ ಬೆಳೆಯ ಆರೋಗ್ಯ ಸುಧಾರಿಸುತ್ತದೆ ಎಂದು ತಿಳಿಸಿದರು. ಜೊತೆಗೆ ಸಾಲಿನಿಂದ ಸಾಲಿಗೆ ಸೂಕ್ತ ಅಂತರವನ್ನು ಕಾಯ್ದುಕೊಂಡು ಬೆಳೆಯನ್ನು ಬೆಳೆಯುವ ಮೂಲಕ ಇನ್ನೂ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯವೆಂದು ಹೇಳಿದರು.

ಕಾರ್ಯಕ್ರಮದಲ್ಲಿ ತಾಲೂಕು ಕೃಷಿ ಸಹಾಯಕ ನಿರ್ದೇಶಕ ರವೀಂದ್ರ ಗೌಡ ಪಾಟೀಲ, ಅಣ್ಣಿಗೇರಿ ಮಂಜುನಾಥ ದ್ಯಾವನೂರು, ಆತ್ಮ ಸಿಬ್ಬಂದಿ ಶಶಿಧರ್ ಮೆಟ್ಟಿ, ಕೃಷಿ ಸಂಜೀವಿನಿ ಸಿಬ್ಬಂದಿ ತಂಗ್ಯವ್ವ ಗಾಣಿಗೇರ್ ಸೇರಿದಂತೆ ಗ್ರಾಮದ ಮುಖಂಡರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಅನೇಕ ರೈತರು ಭಾಗವಹಿಸಿದ್ದರು. ಈ ಕ್ಷೇತ್ರೋತ್ಸವವು ರೈತರಿಗೆ ಉಪಯುಕ್ತ ಕೃಷಿ ಜ್ಞಾನ ನೀಡುವಲ್ಲಿ ಯಶಸ್ವಿಯಾಯಿತು.


Leave a Reply

Your email address will not be published. Required fields are marked *