ಸಹಸ್ರ ದಿನಗಳ ಸಂಭ್ರಮ: ಹಾವೇರಿಯಲ್ಲಿ ಹಕ್ಕುಪತ್ರ ವಿತರಣೆಯೊಂದಿಗೆ ಸರ್ಕಾರದ ‘ಸಾಧನಾ ಸಮಾವೇಶ’ಕ್ಕೆ ಸಿಎಂ ಚಾಲನೆ

Spread the love

ಹಾವೇರಿ: ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಯಶಸ್ವಿಯಾಗಿ ಒಂದು ಸಾವಿರ ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ, ಜಿಲ್ಲಾಡಳಿತ ಹಾಗೂ ಕಂದಾಯ ಇಲಾಖೆಯ ಸಹಯೋಗದಲ್ಲಿ ಹಾವೇರಿಯಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ಭವ್ಯ ‘ಸಾಧನಾ ಸಮಾವೇಶ’ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಜಿಲ್ಲೆಯ ಸುಮಾರು ಒಂದು ಲಕ್ಷ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿದ ಅವರು, ಸರ್ಕಾರದ ಸಾಧನೆಗಳೇ ನಮ್ಮ ಬದ್ಧತೆಗೆ ಸಾಕ್ಷಿ ಎಂದು ಸಾರಿದರು.

ಕಂದಾಯ ಇಲಾಖೆಯಲ್ಲಿ ಕ್ರಾಂತಿಕಾರಿ ದಾಖಲೆ:

ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿಗಳು, “ಕಂದಾಯ ಇಲಾಖೆಯ ಇತಿಹಾಸದಲ್ಲೇ ಎರಡನೇ ಬಾರಿಗೆ ಲಕ್ಷಾಂತರ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸುವ ಮೂಲಕ ದಾಖಲೆ ಬರೆದಿದ್ದೇವೆ. ಇಲ್ಲಿಯವರೆಗೆ ಒಟ್ಟು 2.20 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ನೀಡಿ ಸೂರು ಒದಗಿಸಲಾಗಿದೆ. ಸಚಿವ ಕೃಷ್ಣಬೈರೇಗೌಡರ ನೇತೃತ್ವದಲ್ಲಿ ಕಂದಾಯ ಇಲಾಖೆಯಲ್ಲಿ ಕ್ರಾಂತಿಕಾರಿ ಪ್ರಗತಿ ಉಂಟಾಗಿದೆ. ರಾಜ್ಯದ ಜಿಡಿಪಿಯನ್ನು ದೇಶದಲ್ಲೇ ನಂಬರ್ ಒನ್ ಸ್ಥಾನಕ್ಕೆ ಏರಿಸುವಲ್ಲಿ ನಮ್ಮ ಜನಪರ ಸರ್ಕಾರ ಯಶಸ್ವಿಯಾಗಿದೆ. ಜಿಎಸ್‌ಟಿ ತೆರಿಗೆ ಸಂಗ್ರಹದಲ್ಲೂ ಕರ್ನಾಟಕವು ದಾಖಲೆ ವೇಗದಲ್ಲಿ ಸಾಗುತ್ತಿದೆ,” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೇಂದ್ರದ ಅನ್ಯಾಯದ ವಿರುದ್ಧ ಆಕ್ರೋಶ:

ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಆಗುತ್ತಿರುವ ಅನುದಾನದ ಅನ್ಯಾಯವನ್ನು ಪ್ರಸ್ತಾಪಿಸಿದ ಸಿಎಂ, “ಕೇಂದ್ರದ ಅಸಹಕಾರದ ನಡುವೆಯೂ ನಾವು ಇಷ್ಟೆಲ್ಲಾ ಸಾಧನೆಗಳನ್ನು ಮಾಡಿ ತೋರಿಸಿದ್ದೇವೆ. ಆದರೆ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಪ್ರಹ್ಲಾದ್ ಜೋಶಿ ಹಾಗೂ ಜಗದೀಶ್ ಶೆಟ್ಟರ್ ಅವರು ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಕೇಂದ್ರದಲ್ಲಿ ಬಾಯಿ ಬಿಡುತ್ತಿಲ್ಲ,” ಎಂದು ಟೀಕಿಸಿದರು. ನಮ್ಮ ಸರ್ಕಾರ ನೀಡಿದ್ದ 243 ಭರವಸೆಗಳನ್ನು ಈಗಾಗಲೇ ಈಡೇರಿಸಲಾಗಿದೆ. ಕಳೆದ ಅವಧಿಯಲ್ಲೂ ಪ್ರಣಾಳಿಕೆಯಲ್ಲಿ ಇಲ್ಲದ 30ಕ್ಕೂ ಹೆಚ್ಚು ಯೋಜನೆಗಳನ್ನು ಜಾರಿಗೆ ತಂದು ‘ನುಡಿದಂತೆ ನಡೆದಿದ್ದೇವೆ’ ಎಂದು ಅವರು ತಿಳಿಸಿದರು.

ಗ್ಯಾರಂಟಿ ಯೋಜನೆಗಳು ಮತ್ತು ಆರ್ಥಿಕ ಸುಭದ್ರತೆ:

ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಜೆಪಿಯವರು ನಡೆಸುತ್ತಿರುವ ಸುಳ್ಳು ಅಪಪ್ರಚಾರಕ್ಕೆ ತಿರುಗೇಟು ನೀಡಿದ ಸಿಎಂ, “ನಮ್ಮ ಖಜಾನೆ ಖಾಲಿಯಾಗಿಲ್ಲ. ಈವರೆಗೂ ಗ್ಯಾರಂಟಿಗಳ ಮೂಲಕ 1,18,000 ಕೋಟಿ ರೂಪಾಯಿಗಳನ್ನು ನೇರವಾಗಿ ಜನರ ಖಾತೆಗೆ ತಲುಪಿಸಿದ್ದೇವೆ. ಅಮರ್ತ್ಯ ಸೇನ್, ಅಭಿಜಿತ್ ಬ್ಯಾನರ್ಜಿ ಅಂತಹ ಆರ್ಥಿಕ ತಜ್ಞರು ಮತ್ತು ಪ್ರಮುಖ ವಿಶ್ವವಿದ್ಯಾಲಯಗಳ ಅಧ್ಯಯನ ವರದಿಗಳು ನಮ್ಮ ಯೋಜನೆಗಳ ಬಗ್ಗೆ ಸದಾಭಿಪ್ರಾಯ ವ್ಯಕ್ತಪಡಿಸಿವೆ. ಹೀಗಿದ್ದರೂ ಬಿಜೆಪಿಯವರು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ,” ಎಂದು ಖಂಡಿಸಿದರು.

ರೈತ ಮತ್ತು ನೀರಾವರಿ ಯೋಜನೆಗಳ ಅಭಿವೃದ್ಧಿ:

ಸರ್ಕಾರವು ಕೃಷಿ ಕ್ಷೇತ್ರಕ್ಕೆ ನೀಡಿದ ಒತ್ತುವಿಕೆಯನ್ನು ವಿವರಿಸುತ್ತಾ, ಹೊಸದಾಗಿ 59,181 ಎಕರೆ ಪ್ರದೇಶಕ್ಕೆ ನೀರಾವರಿ ಸಾಮರ್ಥ್ಯ ಕಲ್ಪಿಸಲಾಗಿದೆ ಎಂದು ಮುಖ್ಯಮಂತ್ರಿಗಳು ಮಾಹಿತಿ ನೀಡಿದರು. ಏತ ನೀರಾವರಿ, ಕೆರೆ-ಕಾಲುವೆ ಆಧುನೀಕರಣ ಸೇರಿದಂತೆ 9,331 ಕೋಟಿ ರೂ. ವೆಚ್ಚದ 77 ಹೊಸ ಕಾಮಗಾರಿಗಳು ಜಾರಿಯಲ್ಲಿವೆ. ಸಂಕಷ್ಟದಲ್ಲಿದ್ದ ಕಬ್ಬು ಬೆಳೆಗಾರರಿಗೆ ಪ್ರತಿ ಟನ್‌ಗೆ 50 ರೂಪಾಯಿಯಂತೆ ಒಟ್ಟು 300 ಕೋಟಿ ರೂ. ಸಬ್ಸಿಡಿ ನೀಡುವ ಮೂಲಕ ನೆರವಿಗೆ ನಿಂತಿದ್ದೇವೆ. ರೇಷ್ಮೆ ಮಾರುಕಟ್ಟೆಯಲ್ಲಿ ನಗದು ರಹಿತ ಡಿಜಿಟಲ್ ವಹಿವಾಟು ಜಾರಿಗೊಳಿಸಿದ ದೇಶದ ಏಕೈಕ ರಾಜ್ಯ ಕರ್ನಾಟಕ ಎಂದು ಅವರು ಹೆಮ್ಮೆಯಿಂದ ನುಡಿದರು. ಅಲ್ಲದೆ, ಜಾನುವಾರುಗಳ ಮರಣಕ್ಕೆ ಪರಿಹಾರ ನೀಡುವ ‘ಅನುಗ್ರಹ’ ಯೋಜನೆಗೆ ಮರುಚಾಲನೆ ನೀಡಿ 100 ಕೋಟಿ ರೂ. ವಿತರಿಸಲಾಗಿದೆ ಎಂದರು.

​ಈ ಸಾವಿರ ದಿನಗಳ ಯಶಸ್ಸನ್ನು ನಾಡಿನ ಜನತೆಗೆ ಅರ್ಪಿಸಿದ ಸಿಎಂ, ಅಸಮಾನತೆ ನೀಗಿಸುವ ನಮ್ಮ ಕಾಯಕ ಮುಂದುವರಿಯಲಿದೆ ಎಂದರು. ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಕೃಷ್ಣ ಬೈರೇಗೌಡ, ಶಿವಾನಂದ ಪಾಟೀಲ್, ಹೆಚ್.ಕೆ. ಪಾಟೀಲ್, ಸತೀಶ್ ಜಾರಕಿಹೊಳಿ, ಡಾ. ಜಿ. ಪರಮೇಶ್ವರ್, ಕೆ.ಹೆಚ್. ಮುನಿಯಪ್ಪ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್.ಎಂ. ರೇವಣ್ಣ ಸೇರಿದಂತೆ 20ಕ್ಕೂ ಹೆಚ್ಚು ಶಾಸಕರು ಹಾಗೂ ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *