ಜ. 15ರ ನಂತರ ಸಂಪುಟ ಪುನರ್ ರಚನೆ ಚರ್ಚೆ; ಸಚಿವ ಸ್ಥಾನದ ಆಕಾಂಕ್ಷೆ ವ್ಯಕ್ತಪಡಿಸಿದ ಸಲೀಂ ಅಹ್ಮದ್

Spread the love

ಹುಬ್ಬಳ್ಳಿ: ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಸಚಿವ ಸಂಪುಟ ಪುನರ್ ರಚನೆಯ ಕುರಿತು ಜನವರಿ 15ರ ನಂತರ ಗಂಭೀರ ಚರ್ಚೆಗಳು ನಡೆಯುವ ಸಾಧ್ಯತೆಯಿದೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ತಿಳಿಸಿದರು.

​ನಗರದಲ್ಲಿ ಆಯೋಜಿಸಲಾಗಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಪುಟ ಪುನರ್ ರಚನೆಯ ವಿಷಯವಾಗಿ ಪಕ್ಷದ ವರಿಷ್ಠರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಸಂಪುಟದಲ್ಲಿರುವ ಸುಮಾರು ಶೇಕಡಾ 50ರಷ್ಟು ಸಚಿವರಿಗೆ ಪಕ್ಷದ ಸಂಘಟನೆಯ ಜವಾಬ್ದಾರಿ ನೀಡಿ, ಹೊಸ ಮುಖಗಳಿಗೆ ಸಂಪುಟದಲ್ಲಿ ಅವಕಾಶ ಮಾಡಿಕೊಡಬೇಕು ಎಂಬ ಮನವಿಯನ್ನು ವರಿಷ್ಠರ ಮುಂದಿಡಲಾಗಿದೆ ಎಂದು ಮಾಹಿತಿ ನೀಡಿದರು.

​ಇದೇ ಸಂದರ್ಭದಲ್ಲಿ ತಮ್ಮ ಸಚಿವ ಸ್ಥಾನದ ಆಕಾಂಕ್ಷೆಯನ್ನು ಹೊರಹಾಕಿದ ಅವರು, ಕಳೆದ 20 ವರ್ಷಗಳಿಂದ ಕಿತ್ತೂರು ಕರ್ನಾಟಕ ಭಾಗದ ಅಲ್ಪಸಂಖ್ಯಾತ ಸಮುದಾಯಕ್ಕೆ ಸಚಿವ ಸ್ಥಾನ ಲಭಿಸಿಲ್ಲ. ಹೀಗಾಗಿ ಈ ಬಾರಿ ತಮಗೂ ಸಚಿವ ಸ್ಥಾನ ಸಿಗುವ ಪೂರ್ಣ ವಿಶ್ವಾಸವಿದೆ ಎಂದು ಆಶಯ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಬದಲಾವಣೆ ವಿಷಯದ ಬಗ್ಗೆ ಹೈಕಮಾಂಡ್ ಹಾಕಿರುವ ‘ಲಕ್ಷ್ಮಣ ರೇಖೆ’ಯನ್ನು ಯಾರೂ ದಾಟಬಾರದು. ಮಲ್ಲಿಕಾರ್ಜುನ ಖರ್ಗೆ ಹಾಗೂ ಗಾಂಧಿ ಕುಟುಂಬದ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿರಬೇಕು ಎಂದು ಅವರು ಸ್ಪಷ್ಟಪಡಿಸಿದರು.

​ಸರ್ಕಾರದ ಸಾಧನೆಗಳ ಕುರಿತು ಮಾತನಾಡಿದ ಸಲೀಂ ಅಹ್ಮದ್, ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಅತ್ಯಂತ ಯಶಸ್ವಿಯಾಗಿ ಜನಸಾಮಾನ್ಯರನ್ನು ತಲುಪುತ್ತಿವೆ. ವಿಶೇಷವಾಗಿ ಶಕ್ತಿ ಯೋಜನೆಯಡಿ ಮಹಿಳೆಯರು 600 ಕೋಟಿಗೂ ಅಧಿಕ ಬಾರಿ ಉಚಿತವಾಗಿ ಪ್ರಯಾಣಿಸಿರುವುದು ಸರ್ಕಾರದ ಯಶಸ್ಸಿಗೆ ದೊಡ್ಡ ಸಾಕ್ಷಿಯಾಗಿದೆ ಎಂದರು. ಇನ್ನು ಕೋಗಿಲು ಲೇಔಟ್ ವಿಷಯದಲ್ಲಿ ಸರ್ಕಾರ ಯಾವುದೇ ಸಮುದಾಯದ ತುಷ್ಟೀಕರಣ ಮಾಡುತ್ತಿಲ್ಲ, ಬದಲಾಗಿ ಕೇವಲ ಸಾರ್ವಜನಿಕ ಹಿತಾಸಕ್ತಿಯಿಂದ ಕೆಲಸ ಮಾಡುತ್ತಿದೆ ಎಂದು ಅವರು ಇದೇ ವೇಳೆ ಸ್ಪಷ್ಟನೆ ನೀಡಿದರು

ಈ ಸಂದರ್ಭದಲ್ಲಿ ಮಾಜಿ ಶಾಸಕ ಎಂ ಎಸ್ ಅಕ್ಕಿ, ಡಿಸಿಸಿ ಅಧ್ಯಕ್ಷರಾದ ಅನಿಲ್ ಕುಮಾರ್ ಪಾಟೀಲ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಡಿ. ಬಸವರಾಜ್, ಎಸ್. ಡಿ. ಮಕಂದರ್, ಚಂದ್ರಶೇಖರ್ ಜುಟ್ಟಲ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *