
ಕುಂದಗೋಳ: ಶಾಂತಿ ಮತ್ತು ಸೌಹಾರ್ದತೆಗೆ ಹೆಸಾಗಿದ್ದ ಕುಂದಗೋಳ ಪಟ್ಟಣದಲ್ಲಿ ಜನವರಿ 13ರಂದು ನಡೆದ ಅಪ್ರಾಪ್ತ ಬಾಲಕನ ಭೀಕರ ಕೊಲೆ ಪ್ರಕರಣ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ಈ ರಕ್ತಸಿಕ್ತ ಅಧ್ಯಾಯದ ಹಿಂದೆ ಮಕ್ಕಳನ್ನು ತಿದ್ದಬೇಕಾದ ಹಿರಿಯರ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಪೊಲೀಸ್ ಇಲಾಖೆಯ ‘ಅಕ್ಷಮ್ಯ ನಿರ್ಲಕ್ಷ್ಯ’ ಎದ್ದು ಕಾಣುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಸೊಸೈಟಿ ಆವರಣದಲ್ಲಿ ನಿಂಗರಾಜ್ ಮಲ್ಲಿಕಾರ್ಜುನ ಅವಾರಿ ಎಂಬ ಬಾಲಕನನ್ನು ಆತನ ಸ್ನೇಹಿತರೇ ಆದ ಮೂವರು ಅಪ್ರಾಪ್ತರು ಚಾಕುವಿನಿಂದ ಕುತ್ತಿಗೆ, ಕಿವಿ, ಕಾಲಿಗೆ ಇರಿದು ಬರ್ಬರವಾಗಿ ಕೊಲೆಗೈದ ಘಟನೆ ಇಡೀ ತಾಲೂಕನ್ನೇ ಬೆಚ್ಚಿಬೀಳಿಸಿದೆ.
ಪೊಲೀಸರಿಗೆ ಮೊದಲೇ ಗೊತ್ತಿತ್ತಾ ಕಳ್ಳತನದ ರಹಸ್ಯ?
ಈ ಕೊಲೆಯ ಮೂಲ ಹುಡುಕುತ್ತಾ ಹೋದರೆ ಸಿಗುವುದು ಕಳೆದ ಜನವರಿ 2ರಂದು ಪಟ್ಟಣದ ಪ್ರತಿಷ್ಠಿತ ಶ್ರೀ ಅಭಿನವ ಬಸಣ್ಣಜ್ಜನವರ ಮಠದಲ್ಲಿ ನಡೆದ ಕಳ್ಳತನ ಪ್ರಕರಣ. ಮಠದಲ್ಲಿ ವಾಸವಿದ್ದ ವ್ಯಕ್ತಿಯೊಬ್ಬರ 70 ಸಾವಿರ ರೂ. ಹಣಕ್ಕೆ ಕೊಲೆಯಾದ ಬಾಲಕ ಹಾಗೂ ಈಗ ಕೃತ್ಯ ಎಸಗಿರುವ ಬಾಲಕರು ಕನ್ನ ಹಾಕಿದ್ದರು ಎನ್ನಲಾಗಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಅತ್ಯಂತ ಗಂಭೀರವಾದ ಆರೋಪವೆಂದರೆ, ಈ ವಿಷಯ ಕುಂದಗೋಳ ಠಾಣೆಯ ಕ್ರೈಂ ವಿಭಾಗದ ಗಮನಕ್ಕೆ ಬಂದಿತ್ತು. ಪೊಲೀಸರು ಮಠಕ್ಕೆ ತೆರಳಿ ಸಿಸಿಟಿವಿ ದೃಶ್ಯಾವಳಿಗಳನ್ನೂ ಪರಿಶೀಲಿಸಿದ್ದರು. ಆದರೆ, ‘ಹುಡುಗರು ಅಪ್ರಾಪ್ತರು, ಅವರ ಭವಿಷ್ಯ ಹಾಳಾಗಬಾರದು’ ಎಂಬ ಸೋಗಿನಲ್ಲಿ ಬುದ್ಧಿಮಾತು ಹೇಳಿ ಪ್ರಕರಣವನ್ನು ಅಲ್ಲಿಗೇ ಮುಚ್ಚಿಹಾಕಲಾಗಿತ್ತು ಎಂಬ ಮಾತುಗಳು ಕೇಳಿಬರುತ್ತಿವೆ. ಅಂದೇ ಪೊಲೀಸರು ಕಠಿಣ ಕ್ರಮ ಕೈಗೊಂಡು, ಪೋಷಕರನ್ನು ಎಚ್ಚರಿಸಿದ್ದರೆ ಇಂದು ನಿಂಗರಾಜ್ ನ ಪ್ರಾಣ ಉಳಿಯುತ್ತಿತ್ತು ಎಂಬುದು ಪೋಷಕರ ಮತ್ತು ಸಾರ್ವಜನಿಕರ ಪ್ರಬಲ ವಾದ.
ಶವ ಸಾಗಿಸುವಾಗಲೂ ಲಂಚದ ದಾಹ!
ವ್ಯವಸ್ಥೆಯ ಅಮಾನವೀಯತೆಗೆ ಸಾಕ್ಷಿ ಎಂಬಂತೆ, ಮಗನನ್ನು ಕಳೆದುಕೊಂಡು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದ ಪೋಷಕರ ಬಳಿ, ಶವ ಸಾಗಿಸುವ ಸಂದರ್ಭದಲ್ಲಿಯೂ ಕರ್ತವ್ಯನಿರತ ಪೊಲೀಸ್ ಸಿಬ್ಬಂದಿಯೊಬ್ಬರು ಹಣದ ಬೇಡಿಕೆ ಇಟ್ಟಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಸಾಂತ್ವನ ಹೇಳಲು ಬಂದ ಶಾಸಕ ಎಂ.ಆರ್. ಪಾಟೀಲ್ ಅವರ ಎದುರು ಮೃತ ಬಾಲಕನ ಕುಟುಂಬಸ್ಥರು ಈ ಕಟು ಸತ್ಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.
ಗಾಂಜಾ ಮತ್ತು ರಸ್ತೆ ಬದಿಯ ಪುಂಡಾಟಿಕೆ:
ಕುಂದಗೋಳದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆಯೇ ಎಂಬ ಅನುಮಾನ ಮೂಡಿದೆ. ಪಟ್ಟಣದ ಕೆಲವು ಬೆಲ್ಲದ ಚಹಾ ಅಂಗಡಿಗಳಲ್ಲಿ ಸಿಗರೇಟ್ ನೆಪದಲ್ಲಿ ಗಾಂಜಾ ಮತ್ತು ಡ್ರಗ್ಸ್ ಮಿಶ್ರಣ ಮಾಡಿ ಕೊಡಲಾಗುತ್ತಿದೆ. ಕೃಶ್ ಚನ್ನಪ್ಪ ತಿರಕ್ಕಮ್ಮನವರ, ಪ್ರಜ್ವಲ್ ಅಲಿಯಾಸ್ ಶಂಕ್ರಪ್ಪ ಪ್ರಕಾಶ ವಿಶ್ಲೇಶ್, ಲಿಂಗರಾಜ ಅರುಣ್ ಬ್ಯಾಳಿ ಸೇರಿದಂತೆ ಹಲವು ಯುವಕರು ನಡು ರಸ್ತೆಯಲ್ಲಿ ಬರ್ತ್‌ಡೇ ಆಚರಿಸುವುದು, ರೀಲ್ಸ್ ಮಾಡುವ ಹಾವಳಿ ಹೆಚ್ಚಾಗಿದ್ದರೂ ಬೀಟ್ ಪೊಲೀಸರು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.
ಎಫ್‌ಐಆರ್ ತಿರುಚಿದ ಆರೋಪ – ಶಾಸಕರ ಗರಂ:
ಮಠದ ಕಳ್ಳತನದ ವಿಷಯವನ್ನೇ ಎಫ್‌ಐಆರ್ ನಿಂದ ಕೈಬಿಡಲಾಗಿದೆ ಮತ್ತು ಪೋಷಕರು ಹೇಳಿದಂತೆ ದೂರು ದಾಖಲಿಸಿಲ್ಲ ಎಂಬ ಆರೋಪ ಕೇಳಿಬಂದ ತಕ್ಷಣ, ಶಾಸಕ ಎಂ.ಆರ್. ಪಾಟೀಲ್ ಸ್ಥಳದಿಂದಲೇ ಎಸ್ಪಿ ಅವರಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡರು. “ನಿಷ್ಕಾಳಜಿ ತೋರಿದವರ ವಿರುದ್ಧ ಕ್ರಮ ಆಗಲೇಬೇಕು. ಮರು ಎಫ್‌ಐಆರ್ ದಾಖಲಿಸಿ ನ್ಯಾಯ ಒದಗಿಸದಿದ್ದರೆ, ಸದನದಲ್ಲಿ ಈ ವಿಷಯ ಪ್ರಸ್ತಾಪಿಸಿ, ಇದರ ಹಿಂದಿರುವವರ ಹೆಸರನ್ನು ಬಹಿರಂಗಪಡಿಸುತ್ತೇನೆ,” ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಒಟ್ಟಾರೆಯಾಗಿ, ಪೊಲೀಸ್ ಇಲಾಖೆಯ ನಿರ್ಲಕ್ಷ್ಯಕ್ಕೆ ಅಮಾಯಕ ಬಾಲಕನೊಬ್ಬ ಬಲಿಯಾಗಿದ್ದಾನೆ. ಇನ್ನಾದರೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಇತ್ತ ಗಮನಹರಿಸಿ, ನೊಂದ ಕುಟುಂಬಕ್ಕೆ ನ್ಯಾಯ ಒದಗಿಸುವರೇ? ಅಥವಾ ಗಾಂಜಾ ದಂಧೆಕೋರರ ಮತ್ತು ಪುಂಡರ ಅಟ್ಟಹಾಸ ಮುಂದುವರಿಯಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಉಗ್ರ ಪ್ರತಿಭಟನೆ ನಡೆಸಲು ವಿವಿಧ ಸಂಘಟನೆಗಳು ಮುಂದಾಗಿವೆ.

