
ಧಾರವಾಡ, ನ. 24: ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯಲ್ಲಿ (ಕೆಜಿಐಡಿ) ವಿಮೆ ಹೊಂದಿರುವ ರಾಜ್ಯ ಸರ್ಕಾರಿ ನೌಕರರಿಗೆ ಬಾಕಿ ಇರುವ ಲಾಭಾಂಶ (ಬೋನಸ್) ಮೊತ್ತವನ್ನು ಡಿಸೆಂಬರ್ 15ರೊಳಗೆ ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ ಎಂದು ಧಾರವಾಡ ಜಿಲ್ಲಾ ವಿಮಾ ಅಧಿಕಾರಿ ಜಗನ್ನಾಥ. ಸಿ. ಕಠಾರೆ ಅವರು ತಿಳಿಸಿದ್ದಾರೆ.
ದಿನಾಂಕ: 1-4-2022 ರಿಂದ 31-3-2024ರ ಅವಧಿಯಲ್ಲಿ ಚಾಲ್ತಿಯಲ್ಲಿರುವ ಅಥವಾ ಮ್ಯಾಚುರಿಟಿ (ಫಲಪ್ರದ) ಆಗಿರುವ ಸುಮಾರು 2,243 ವಿಮೆಗಳಿಗೆ ಪ್ರತಿ ₹1,000ಕ್ಕೆ ₹80ರಂತೆ ಬೋನಸ್ ನೀಡಲಾಗುತ್ತಿದೆ.
⚙️ ಕಾರ್ಯ ಪ್ರಗತಿಯಲ್ಲಿದೆ: ಜಿಲ್ಲಾ ವಿಮಾ ಅಧಿಕಾರಿ
ಈ ಕುರಿತು ಮಾಹಿತಿ ನೀಡಿದ ಜಿಲ್ಲಾ ವಿಮಾ ಅಧಿಕಾರಿ ಜೆ.ಸಿ. ಕಠಾರೆ ಅವರು, ನಿಯಮಾನುಸಾರ ವಿಮೆದಾರರಿಗೆ ಬೋನಸ್ ಜಮೆ ಮಾಡುವ ಕಾರ್ಯ ಪ್ರಗತಿಯಲ್ಲಿದೆ. ಹಿಂದೆ ಜಿಲ್ಲೆಯಲ್ಲಿ ಜರುಗಿದ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಕೆಜಿಐಡಿ ಸಿಬ್ಬಂದಿಗಳನ್ನು ನಿಯೋಜಿಸಿದ ಕಾರಣದಿಂದ ಈ ಕಾರ್ಯದಲ್ಲಿ ವಿಳಂಬವಾಗಿದೆ. ಈಗ ಪ್ರತಿದಿನ ಹಂತ ಹಂತವಾಗಿ ಖಜಾನೆ ಮೂಲಕ ವಿಮೆದಾರರಿಗೆ ಬೋನಸ್ ಜಮೆಯಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ ಒಟ್ಟು 2,243 ಸರ್ಕಾರಿ ನೌಕರರು ಈ ವಿಮಾ ಲಾಭಾಂಶಕ್ಕೆ ಅರ್ಹರಾಗಿದ್ದು, ಈಗಾಗಲೇ ಸುಮಾರು 600 ಜನರ ಖಾತೆಗೆ ಬೋನಸ್ ಪಾವತಿಯಾಗಿದೆ. ಉಳಿದ 1,643 ನೌಕರದಾರರಿಗೆ ಜಮೆ ಮಾಡುವ ಕಾರ್ಯ ಪ್ರಗತಿಯಲ್ಲಿದೆ. ಕೌಶಲ್ಯಭರಿತ ಸಿಬ್ಬಂದಿ ಕೊರತೆ, ಆನ್‌ಲೈನ್ ದಾಖಲಾತಿ ಮತ್ತು ವಿಮೆ ಪರಿಶೀಲನೆ ಕಾರ್ಯಗಳು ಹೆಚ್ಚಿರುವುದರಿಂದ ತಾಂತ್ರಿಕ ಕಾರಣಗಳಿಂದ ಬೋನಸ್ ಜಮೆ ಕಾರ್ಯಕ್ಕೆ ಹೆಚ್ಚು ಕಾಲಾವಕಾಶ ಹಿಡಿಯುತ್ತಿದೆ. ಆದರೂ ಸಹ, ಡಿಸೆಂಬರ್ ಎರಡನೇ ವಾರದೊಳಗೆ ಎಲ್ಲ ವಿಮಾದಾರರ ಖಾತೆಗಳಿಗೆ ನೇರವಾಗಿ ಬೋನಸ್ ಜಮೆ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು. ಈ ಕಾರ್ಯಕ್ಕೆ ಜಿಲ್ಲೆಯ ಎಲ್ಲ ಸರ್ಕಾರಿ ನೌಕರರು ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿಕೊಂಡರು

