ನವಲಗುಂದದಲ್ಲಿ ಗಡಗಡ ನಡುಗಿಸುವ ಚಳಿ: ಹೈರಾಣಾದ ಜನತೆ, ಜಾನುವಾರು ಮತ್ತು ಬೆಳೆಗಳಿಗೂ ಶೀತ ಸಂಕಷ್ಟ!

Spread the love

ವರದಿ: ಸಂಜಯ ಸಿ. ಗುರಿಕಾರ

ನವಲಗುಂದ: ತಾಲ್ಲೂಕಿನಲ್ಲಿ ಕಳೆದ ಒಂದು ವಾರದಿಂದ ಮೈಕೊರೆಯುವ ಚಳಿ ಹಾಗೂ ಶೀತಗಾಳಿಯ ಆರ್ಭಟ ಜೋರಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ರಾತ್ರಿ ಹಾಗೂ ಬೆಳಗಿನ ಜಾವ ಆವರಿಸಿಕೊಳ್ಳುತ್ತಿರುವ ವಿಪರೀತ ಚಳಿಯಿಂದಾಗಿ ಜನ, ಜಾನುವಾರು ಮಾತ್ರವಲ್ಲದೆ ಕೃಷಿ ಬೆಳೆಗಳೂ ಸಂಕಷ್ಟಕ್ಕೆ ಸಿಲುಕಿವೆ.

ಪಟ್ಟಣದಲ್ಲಿ ಶುಕ್ರವಾರ ರಾತ್ರಿ ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದ್ದು, ಮಾಗಿ ಚಳಿಗೆ ಶೀತಗಾಳಿ ಸೇರಿರುವುದರಿಂದ ಜನರು ಹೈರಾಣಾಗಿದ್ದಾರೆ. ಮುಂಜಾನೆ ವೇಳೆ ಐಸ್ ಟ್ಯೂಬ್‌ನಲ್ಲಿ ಕುಳಿತಂತಹ ಅನುಭವವಾಗುತ್ತಿದೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ. ಮಧ್ಯಾಹ್ನ 1 ರಿಂದ 3 ಗಂಟೆಯವರೆಗೆ ಪ್ರಖರ ಬಿಸಿಲು ನೆತ್ತಿ ಸುಡುತ್ತಿದ್ದರೆ, ಸಂಜೆಯಾಗುತ್ತಿದ್ದಂತೆ ಶೀತಗಾಳಿ ಮೈ ನಡುಗಿಸುತ್ತಿದೆ. ಈ ವರ್ಷ ಉತ್ತಮ ಮಳೆಯಾದ ಕಾರಣ ವಾತಾವರಣದಲ್ಲಿ ತೇವಾಂಶ ಹೆಚ್ಚಿದ್ದು, ಚಳಿಯ ತೀವ್ರತೆ ದ್ವಿಗುಣಗೊಂಡಿದೆ.

ವೈದ್ಯರ ಎಚ್ಚರಿಕೆ: ಹೃದಯದ ಆರೋಗ್ಯದ ಬಗ್ಗೆ ಇರಲಿ ಗಮನ

ಚಳಿಯ ಅಬ್ಬರ ಹೆಚ್ಚಾಗಿರುವುದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರತೊಡಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಖಾಸಗಿ ವೈದ್ಯ ಡಾ. ಮಹೇಶ ಹಿರೇಮಠ, “ಚಳಿಗಾಲದಲ್ಲಿ ರಕ್ತನಾಳಗಳು ಸಂಕುಚಿತಗೊಳ್ಳುವುದರಿಂದ ಹೃದಯಾಘಾತದ ಸಂಭವ ಹೆಚ್ಚು. ಹೃದಯ ಸಂಬಂಧಿ ಸಮಸ್ಯೆ ಇರುವವರು ಕಡ್ಡಾಯವಾಗಿ ಬೆಚ್ಚಗಿನ ದಿರಿಸು ಧರಿಸಬೇಕು ಹಾಗೂ ಹೆಚ್ಚು ನೀರು ಕುಡಿಯಬೇಕು. ಮುಂಜಾನೆ 3 ರಿಂದ 6 ಗಂಟೆಯವರೆಗೆ ವಾಯುವಿಹಾರಕ್ಕೆ ಹೋಗಬಾರದು,” ಎಂದು ಎಚ್ಚರಿಸಿದ್ದಾರೆ.

ಜಾನುವಾರು ಹಾಗೂ ಕೋಳಿ ಸಾಕಾಣಿಕೆದಾರರಿಗೆ ಸಲಹೆ

ಶೀತಗಾಳಿಯಿಂದ ಜಾನುವಾರುಗಳನ್ನು ರಕ್ಷಿಸಲು ಪಶು ಸಂಗೋಪನೆ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. “ದನಕರುಗಳನ್ನು ಬೆಚ್ಚಗಿನ ಕೊಟ್ಟಿಗೆಯಲ್ಲಿ ಕಟ್ಟಬೇಕು. ಕಾಲುಬಾಯಿ ರೋಗ ಹರಡುವ ಸಾಧ್ಯತೆ ಇರುವುದರಿಂದ ಚುಚ್ಚುಮದ್ದು ಹಾಕಿಸುವುದು ಕಡ್ಡಾಯ. ಕೋಳಿ ಸಾಕಾಣಿಕೆದಾರರು ವಿದ್ಯುತ್ ಬಲ್ಬ್‌ಗಳನ್ನು ಬಳಸಿ ಉಷ್ಣಾಂಶ ಸ್ಥಿರವಾಗಿರುವಂತೆ ನೋಡಿಕೊಳ್ಳಬೇಕು,” ಎಂದು ಮುಖ್ಯ ಪಶುವೈದ್ಯಾಧಿಕಾರಿ ಮನೋಹರ ದ್ಯಾಬೇರಿ ಸಲಹೆ ನೀಡಿದ್ದಾರೆ.

ಬೆಳೆಗಳ ರಕ್ಷಣೆಗೆ ಕೃಷಿ ತಜ್ಞರ ಕಿವಿಮಾತು

ಶೀತದ ವಾತಾವರಣದಲ್ಲಿ ಗಿಡಗಳು ಪೋಷಕಾಂಶಗಳನ್ನು ಹೀರಿಕೊಳ್ಳುವುದು ಕಷ್ಟವಾಗುತ್ತದೆ. ಈ ವೇಳೆ ಬೆಳೆಗಳನ್ನು ರಕ್ಷಿಸಲು ಸಂಜೆ ಲಘುವಾಗಿ ನೀರು ಹಾಯಿಸಬೇಕು ಹಾಗೂ ಅಗತ್ಯ ಪೋಷಕಾಂಶಗಳನ್ನು ಸಿಂಪರಣೆ ಮೂಲಕ ನೀಡಬೇಕು ಎಂದು ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ರಫೀ ತಿಳಿಸಿದ್ದಾರೆ. ಹೂವು ಮತ್ತು ಕಾಯಿ ಉದುರುವುದನ್ನು ತಡೆಯಲು ‘ಪ್ಲಾನೊಫಿಕ್ಸ್’ ನಂತಹ ಔಷಧಿಗಳನ್ನು ಸಿಂಪಡಿಸಲು ಬೆಳವಟಗಿ ಸಂಶೋಧನಾ ಕೇಂದ್ರದ ಅಧಿಕಾರಿಗಳು ರೈತರಿಗೆ ಸೂಚಿಸಿದ್ದಾರೆ.

ಒಟ್ಟಾರೆಯಾಗಿ, ದಿನದಿಂದ ದಿನಕ್ಕೆ ಏರುತ್ತಿರುವ ಚಳಿಯ ತೀವ್ರತೆಯು ನವಲಗುಂದ ತಾಲ್ಲೂಕಿನ ಜನರ ದೈನಂದಿನ ಚಟುವಟಿಕೆಗಳ ಮೇಲೆ ಭಾರಿ ಹೊಡೆತ ನೀಡಿದ್ದು, ರೈತರು ಹಾಗೂ ಶ್ರಮಿಕ ವರ್ಗದವರು ಬೆಚ್ಚಗಿನ ಆಶ್ರಯಕ್ಕೆ ಮೊರೆ ಹೋಗುತ್ತಿದ್ದಾರೆ.

Leave a Reply

Your email address will not be published. Required fields are marked *