
ಹುಬ್ಬಳ್ಳಿ: ಭೀಮಾ ಕೋರೆಗಾಂವ್ ಯುದ್ಧವು ಭಾರತದ ಜಾತಿ ವ್ಯವಸ್ಥೆಯಲ್ಲಿ ನಲುಗಿಹೋದ ಶೋಷಿತ ಸಮುದಾಯವು ಶೌರ್ಯದಿಂದ ಜಯಿಸಿದ ಮಹಾನ್ ಹೋರಾಟವಾಗಿದೆ ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಶ್ರೀಮತಿ ಜ್ಯೋತಿ ಪಾಟೀಲ ಅವರು ಬಣ್ಣಿಸಿದರು.
ನಗರದ ಸಿದ್ಧಾರ್ಥ ಸರ್ಕಲ್ನಲ್ಲಿ ಸಮತಾ ಸೈನಿಕ ದಳ ಹಾಗೂ ಹುಬ್ಬಳ್ಳಿ-ಧಾರವಾಡ ವಿವಿಧ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಆಯೋಜಿಸಲಾಗಿದ್ದ ‘ಭೀಮಾ ಕೋರೆಗಾಂವ್ ವಿಜಯೋತ್ಸವ’ ಹಾಗೂ ಹಿರಿಯ ಮುಖಂಡ ಆಯುಷ್ಮಾನ್ ಪಿತಾಂಬರಪ್ಪ ಬಿಳಾರ ಅವರ 73ನೇ ಜನ್ಮದಿನೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
1818ರ ಜನವರಿ 1ರಂದು ನಡೆದ ಆ ಐತಿಹಾಸಿಕ ಯುದ್ಧವು ಇಂದಿಗೂ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಶೋಷಿತರ ಮತ್ತು ಸಂಪ್ರದಾಯವಾದಿಗಳ ನಡುವಿನ ಸಂಘರ್ಷವಾಗಿ ಮುಂದುವರಿಯುತ್ತಿದೆ. ಅಂದು ಕೇವಲ 500 ಮಂದಿ ಮಹರ್ ಸೈನಿಕರು ತಮ್ಮ ಸ್ವಾಭಿಮಾನಕ್ಕಾಗಿ ಎರಡನೇ ಬಾಜೀರಾವ್ ಪೇಶ್ವೆಯ 28,000 ಸುಸಜ್ಜಿತ ಸೇನೆಯನ್ನು ಸೋಲಿಸಿ ಇತಿಹಾಸ ನಿರ್ಮಿಸಿದರು. ಈ ಶೌರ್ಯವು ನಮಗೆಲ್ಲರಿಗೂ ಸಮಾನ ಹಕ್ಕುಗಳ ಬದುಕಿಗೆ ಪ್ರೇರಣೆಯಾಗಿದೆ ಎಂದು ಅವರು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ದಲಿತ ಹಿರಿಯ ಮುಖಂಡರಾದ ಮಾರುತಿ ದೊಡ್ಡಮನಿ, ಪರಮೇಶ ಕಾಳೆ ಹಾಗೂ ಚಂದ್ರಶೇಖರ ಯಾತಗೇರಿ ಅವರು ಮಾತನಾಡಿ, ಪೂನಾ ನಗರದ ಪಕ್ಕದ ಭೀಮಾ ನದಿಯ ದಂಡೆಯ ಮೇಲಿರುವ 72 ಅಡಿಗಳ ವಿಜಯ ಸ್ತಂಭವು ಶೋಷಿತರ ಅಸ್ಮಿತೆಯ ಕುರುಹಾಗಿದೆ ಎಂದು ತಿಳಿಸಿದರು.
ಬಾಬಾಸಾಹೇಬ್ ಅಂಬೇಡ್ಕರ್ ಅವರು ಇಂಗ್ಲೆಂಡ್ನಲ್ಲಿ ವಿದ್ಯಾಭ್ಯಾಸ ಮಾಡುವಾಗ ಈ ಯುದ್ಧದ ಕುರಿತು ಸಂಶೋಧಿಸಿ, ಅದರ ಇತಿಹಾಸವನ್ನು ಜಗತ್ತಿಗೆ ಪರಿಚಯಿಸಿದರು. ಈ ಯುದ್ಧದ ಫಲವಾಗಿಯೇ ದೇಶದಲ್ಲಿ ಸಾರ್ವತ್ರಿಕ ಶಿಕ್ಷಣ ನೀತಿ ಜಾರಿಗೆ ಬರಲು ಸಾಧ್ಯವಾಯಿತು. ಮಹಾತ್ಮ ಜ್ಯೋತಿಬಾ ಫುಲೆ ಹಾಗೂ ಸಾವಿತ್ರಿಬಾ ಫುಲೆ ಅವರು ಶಿಕ್ಷಣ ಕ್ರಾಂತಿ ಮಾಡಲು ಈ ಶೌರ್ಯದ ಇತಿಹಾಸವೇ ಪ್ರೇರಣೆಯಾಗಿತ್ತು ಎಂದು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ಹಿರಿಯ ಹೋರಾಟಗಾರ ಪಿತಾಂಬರಪ್ಪ ಬಿಳಾರ ಅವರ ಸಮಾಜಮುಖಿ ಹೋರಾಟಗಳನ್ನು ನೆನೆಯುತ್ತಾ ಅವರಿಗೆ ಜನ್ಮದಿನದ ಶುಭಾಶಯ ಕೋರಲಾಯಿತು.
ಕಾರ್ಯಕ್ರಮದಲ್ಲಿ ಸಮತಾ ಸೈನಿಕ ದಳದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿಳಾರ, ಪೊಲೀಸ್ ನಿರೀಕ್ಷಕ ಸುರೇಶ ನಾಯ್ಕ, ಸಿದ್ದಾರ್ಥ ಬಿಳಾರ, ಮಲ್ಲಿಕಾರ್ಜುನ ಯಾತಗೇರಿ, ಮಲ್ಲೇಶ ಬೆಳವಡಿ, ಹಜರತಅಲಿ ಜೋಡಮನಿ, ವಿರೂಪಾಕ್ಷ ಚಲವಾದಿ, ಶ್ರೀಮತಿ ಚೇತನಾ ಲಿಂಗದಾಳ ಸೇರಿದಂತೆ ಸಾವಿರಾರು ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

