
ಭದ್ರಾವತಿ: ತಾಲೂಕಿನ ತಹಶೀಲ್ದಾರ್ ಅವರು ಇಲ್ಲಸಲ್ಲದ ಆರೋಪಗಳನ್ನು ಮಾಡಿ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿರುವ ನೌಕರರೊಬ್ಬರು, ತಮಗೆ ಏನಾದರೂ ತೊಂದರೆಯಾದರೆ ತಹಶೀಲ್ದಾರ್ ಅವರೇ ನೇರ ಹೊಣೆ ಎಂದು ಬರೆದಿರುವ ಪತ್ರವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ. ಚನ್ನಗಿರಿ ತಾಲೂಕಿನ ಅಟ್ಟಿಹಳ್ಳಿ ನಿವಾಸಿ ಆರ್.ಜಿ. ಅಭಿಷೇಕ್ ಎಂಬುವವರು ಭದ್ರಾವತಿ ತಹಶೀಲ್ದಾರ್ ಪರಸಪ್ಪ ಕುರುಬರ ಅವರ ವಿರುದ್ಧ ಈ ಗಂಭೀರ ಆರೋಪ ಮಾಡಿದ್ದು, ತಹಶೀಲ್ದಾರ್ ಅವರ ಅತಿಯಾದ ಒತ್ತಡದಿಂದಾಗಿ ತಾವು ಸಿದ್ದಾಪುರ ಚಾನಲ್‌ಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪತ್ರದಲ್ಲಿ ಉಲ್ಲೇಖಿಸಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.
ಕಳೆದ ಮೂರು ದಿನಗಳಿಂದ ಇ-ಪೌತಿ ಖಾತೆ ಮಾಡಲು ಹಾಗೂ ಆಗರದಹಳ್ಳಿ ಮತ್ತು ತಡಸ ಗ್ರಾಮದ ವಿವಿಧ ಸರ್ವೆ ನಂಬರ್‌ಗಳ ಕಡತಗಳಿಗೆ ಸಂಬಂಧಿಸಿದಂತೆ ತಹಶೀಲ್ದಾರ್ ಅವರು ಅತಿಯಾದ ಒತ್ತಡ ಹೇರುತ್ತಿದ್ದಾರೆ ಎಂದು ಅಭಿಷೇಕ್ ದೂರಿದ್ದಾರೆ. 2005 ರಿಂದ ಯಾವುದೇ ಲೋಪದೋಷವಿಲ್ಲದೆ ಕರ್ತವ್ಯ ನಿರ್ವಹಿಸುತ್ತಿದ್ದರೂ, ಈಗಿನ ತಹಶೀಲ್ದಾರ್ ಅವರು ವಿನಾಕಾರಣ ಕಿರುಕುಳ ನೀಡುತ್ತಿದ್ದಾರೆ. ಇಡೀ ಕುಟುಂಬಕ್ಕೆ ತಾನೊಬ್ಬನೇ ದುಡಿಯುವ ವ್ಯಕ್ತಿಯಾಗಿದ್ದು, ಅನಾರೋಗ್ಯ ಪೀಡಿತ ತಾಯಿಯನ್ನು ನೋಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಈ ಬಗ್ಗೆ ತಹಶೀಲ್ದಾರ್ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದರೂ ಸಹ ಪದೇ ಪದೇ ತೊಂದರೆ ನೀಡುತ್ತಿದ್ದಾರೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.
ಈ ಪತ್ರವು ಈಗ ಕಂದಾಯ ಇಲಾಖೆಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಭದ್ರಾವತಿ ತಹಶೀಲ್ದಾರ್ ಅವರ ಕಾರ್ಯವೈಖರಿಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಪರ-ವಿರೋಧದ ಚರ್ಚೆಗಳು ಆರಂಭವಾಗಿವೆ. ಆತ್ಮಹತ್ಯೆಯಂತಹ ತೀವ್ರ ನಿರ್ಧಾರದ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ. ಸದ್ಯ ವೈರಲ್ ಆಗಿರುವ ಈ ಪತ್ರವು ಜಿಲ್ಲಾ ಮಟ್ಟದ ಅಧಿಕಾರಿಗಳ ಗಮನಕ್ಕೂ ಹೋಗಿದ್ದು, ಮುಂದಿನ ಬೆಳವಣಿಗೆಗಳು ಕುತೂಹಲ ಕೆರಳಿಸಿವೆ.

