
ಕುಂದಗೋಳ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟನೆ
ಕುಂದಗೋಳ: ಶಿಕ್ಷಣವು ಕೇವಲ ಜ್ಞಾನವನ್ನು ಸಂಗ್ರಹಿಸುವ ಪ್ರಕ್ರಿಯೆಯಲ್ಲ, ಬದಲಿಗೆ ನಮ್ಮ ಜೀವನದ ಶ್ರೇಷ್ಠತೆಯನ್ನು ತಲುಪುವ ಮಾರ್ಗವಾಗಿದೆ. ಆದ್ದರಿಂದ ಮಕ್ಕಳು ಕಲೆ, ಸಂಸ್ಕೃತಿ ಮತ್ತು ಜಾಣ್ಮೆಯನ್ನು ಉಳಿಸಿ ಬೆಳೆಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಮಹಾದೇವಿ ಮಾಡಲಗೇರಿ ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಅವರು ಪಟ್ಟಣದ ಶ್ರೀ ಎಫ್. ಕೆ. ಬಾಳಿಹಳ್ಳಿಮಠ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಕ್ಷೇತ್ರ ಸಂಪನ್ಮೂಲ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಕುಂದಗೋಳ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಮನ್ವಯ ಅಧಿಕಾರಿ ಶ್ರೀ ಸಂಜೀವ ಕುಮಾರ ಬೆಳವಟಗಿ ಮಾತನಾಡಿ, ರಾಜ್ಯ ಸರ್ಕಾರವು ಮಕ್ಕಳ ಪ್ರತಿಭೆಯನ್ನು ಪ್ರದರ್ಶಿಸಲು ಪ್ರತಿಭಾ ಕಾರಂಜಿ ವೇದಿಕೆಯನ್ನು ಏರ್ಪಡಿಸಿದೆ. ವಾಕ್ ಚಾತುರ್ಯ, ಅಭಿನಯ ಗೀತೆ, ಕ್ಲೇ ಮಾಡಲಿಂಗ್, ಎಲ್ಲ ಭಾಷೆಗಳ ಕಂಠಪಾಠ, ಧಾರ್ಮಿಕ ಪಠಣ (ಸಂಸ್ಕೃತ ಮತ್ತು ಅರೆಬಿಕ್), ದೇಶಭಕ್ತಿ ಗೀತೆ, ಪ್ರಬಂಧ, ಆಶುಭಾಷಣ, ಛದ್ಮವೇಷ ಮತ್ತು ಮಿಮಿಕ್ರಿ ಮುಂತಾದ ಸ್ಪರ್ಧೆಗಳಲ್ಲಿ ಮಕ್ಕಳು ತಮ್ಮ ಸಾಮರ್ಥ್ಯವನ್ನು ತೋರಿಸಲು ಇದೊಂದು ಉತ್ತಮ ಅವಕಾಶವಾಗಿದೆ. ಪ್ರತಿಯೊಂದು ಮಗುವೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.
ಗಾಂಧಿ ಹಿಂದೀ ವಿದ್ಯಾಪೀಠದ ಸಂಸ್ಥಾಪಕ ಕಾರ್ಯದರ್ಶಿ ಶ್ರೀ ಎಫ್. ಕೆ. ಬಾಳಿಹಳ್ಳಿಮಠ ಅವರು ಸನ್ನಿಧಾನ ವಹಿಸಿದ್ದರು. ಸಂಸ್ಥೆಯ ಚೇರಮನ್ ಮಾರುತಿ ದೊಡ್ಡಮನಿ, ಎನ್. ಜಿ. ಒ ಕಾರ್ಯದರ್ಶಿ ಮಡ್ಲಿ, ಎಸ್. ವಿ ಹುಣಸಿಮರದ, ಪ್ರಶಾಂತ ಬನ್ನಿಮಟ್ಟಿ, ಶಿವಾನಂದ ಯಲಿಗಾರ, ಶ್ರೀಮತಿ ಕಸ್ತೂರಿ ಕುಂಬಾರ ಮತ್ತು ಶ್ರೀ ಚನ್ನಯ್ಯ ಪಾಟೀಲ ಮುಂತಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕಾರ್ಯಕ್ರಮವು ದೀಪಾ, ಮಧು, ಫಾತಿಮಾ, ಜಮಾಲಬಿ ಮತ್ತು ಹೈದರಬಿ ಮುಂತಾದವರು ನಡೆಸಿದ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಎಸ್. ಸಿ. ಶಾನವಾಡ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರೆ, ಗುರುಸ್ವಾಮಿ ಬಾಳಿಹಳ್ಳಿಮಠ ಅವರು ಎಲ್ಲರನ್ನು ಸ್ವಾಗತಿಸಿದರು. ಶ್ರೀಮತಿ ಅಂಬಿಕಾ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು ಮತ್ತು ಶ್ರೀ ಎಮ್. ಸಿ ಪಾಟೀಲ ವಂದನಾರ್ಪಣೆ ಮಾಡಿದರು. ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಬಹುಮಾನ ನೀಡಿ ಗೌರವಿಸಲಾಯಿತು.

