ಮೂರು ಪ್ರಮುಖ ತಂತ್ರಜ್ಞಾನ ನೀತಿಗಳೊಂದಿಗೆ ‘ಬೆಂಗಳೂರು ಟೆಕ್ ಶೃಂಗಸಭೆ-2025’ ಆರಂಭ: ಸಿಎಂ ಸಿದ್ದರಾಮಯ್ಯ

Spread the love

ಬೆಂಗಳೂರು:

​ನವೆಂಬರ್ 18 ರಿಂದ 20, 2025 ರವರೆಗೆ ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ (BIEC) ನಡೆಯುತ್ತಿರುವ ‘ಬೆಂಗಳೂರು ಟೆಕ್ ಶೃಂಗಸಭೆ-2025’ (BTS) ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿದ್ದು, ಈ ಸಂದರ್ಭದಲ್ಲಿ ಮೂರು ಪ್ರಮುಖ ತಂತ್ರಜ್ಞಾನ ನೀತಿಗಳನ್ನು ಬಿಡುಗಡೆ ಮಾಡುವ ಮೂಲಕ ರಾಜ್ಯ ಸರ್ಕಾರ ಐತಿಹಾಸಿಕ ಹೆಜ್ಜೆಯನ್ನಿಟ್ಟಿದೆ ಎಂದು ಹೇಳಿದರು. ಸರ್ಕಾರದ ಸ್ಪಷ್ಟ ನೀತಿಗಳು, ಸುಗಮ ಅನುಮೋದನೆಗಳು ಮತ್ತು ಪೂರಕ ವಾತಾವರಣವು ಕರ್ನಾಟಕವನ್ನು ಭಾರತದ ಅತ್ಯಂತ ವಿಶ್ವಾಸಾರ್ಹ ಹೂಡಿಕೆ ತಾಣವನ್ನಾಗಿ ಮುಂದುವರೆಸಿದೆ ಎಂದು ಅವರು ಅಭಿಪ್ರಾಯಪಟ್ಟರು.

​ಐತಿಹಾಸಿಕ ಹೆಜ್ಜೆ: ಮೂರು ಮಹತ್ವದ ನೀತಿಗಳು

​ಮುಖ್ಯಮಂತ್ರಿಗಳು BTS-2025ರಲ್ಲಿ ಕರ್ನಾಟಕ ಮಾಹಿತಿ ತಂತ್ರಜ್ಞಾನ ನೀತಿ 2025-2030, ಬಾಹ್ಯಾಕಾಶ ತಂತ್ರಜ್ಞಾನ ನೀತಿ 2025-2030, ಮತ್ತು ಸ್ಟಾರ್ಟ್‌ಅಪ್ ನೀತಿ 2025-2030 ಗಳನ್ನು ಬಿಡುಗಡೆಗೊಳಿಸಿದರು. ದತ್ತಾಂಶ ಚಾಲಿತ ತಂತ್ರಜ್ಞಾನಕ್ಕೆ ಪೂರಕವಾದ ಐಟಿ ನೀತಿಯು ರಾಜ್ಯವನ್ನು ನಾವೀನ್ಯತೆ ಮತ್ತು ಡೀಪ್ ಟೆಕ್‌ಗಳ ಜಾಗತಿಕ ತಾಣವಾಗಿಸುವ ಗುರಿ ಹೊಂದಿದೆ. ಬಾಹ್ಯಾಕಾಶ ತಂತ್ರಜ್ಞಾನ ನೀತಿಯು 2034ರ ವೇಳೆಗೆ ಕರ್ನಾಟಕವನ್ನು ಭಾರತದ ಪ್ರಮುಖ ಬಾಹ್ಯಾಕಾಶ ತಂತ್ರಜ್ಞಾನ ಕೇಂದ್ರವಾಗಿ ಪರಿವರ್ತಿಸುವ ಗುರಿಗೆ ಸಹಕಾರಿಯಾಗಲಿದೆ ಎಂದರು. ಹೊಸ ಸ್ಟಾರ್ಟ್‌ಅಪ್ ನೀತಿಯಿಂದ ಮುಂದಿನ ಐದು ವರ್ಷಗಳಲ್ಲಿ 25,000 ಸ್ಟಾರ್ಟ್‌ಅಪ್‌ಗಳ ಸ್ಥಾಪನೆಗೆ ಬಂಡವಾಳ ನೆರವು, ಮಾರುಕಟ್ಟೆ ಅವಕಾಶ ಮತ್ತು ಮೂಲಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಅವರು ತಿಳಿಸಿದರು.

​ಜ್ಞಾನಕಾಶಿ ಮತ್ತು ತಂತ್ರಜ್ಞಾನ ಶಕ್ತಿ ಕೇಂದ್ರ

​ಕಳೆದ ಮೂರು ದಶಕಗಳಿಂದ ನಡೆಯುತ್ತಿರುವ ಈ ಶೃಂಗಸಭೆಯು ವಿಶ್ವದ ಗಮನವನ್ನು ಕರ್ನಾಟಕದತ್ತ ಸೆಳೆಯುತ್ತಿದೆ ಎಂದು ಹೆಮ್ಮೆಯಿಂದ ನುಡಿದ ಸಿದ್ದರಾಮಯ್ಯ, ಕರ್ನಾಟಕವು ಜ್ಞಾನಕಾಶಿ ಎಂಬುದು ಹೆಮ್ಮೆಯ ಸಂಗತಿ. ರಾಜ್ಯವು 85 ವಿಶ್ವವಿದ್ಯಾಲಯಗಳು, 243 ಎಂಜಿನಿಯರಿಂಗ್ ಕಾಲೇಜುಗಳು ಮತ್ತು ಸುಮಾರು 1,800 ಐಟಿಐಗಳಿಗೆ ನೆಲೆಯಾಗಿದೆ. ರಾಜ್ಯದ ನಿರುದ್ಯೋಗ ಪ್ರಮಾಣ ಕೇವಲ 4.3% ರಷ್ಟಿದ್ದು, ಇದು ಸಮರ್ಥ ಉತ್ಪಾದಕತೆಯನ್ನು ತೋರಿಸುತ್ತದೆ ಎಂದರು. ಐಐಎಸ್‌ಸಿ, ಐಐಎಂ-ಬಿ, ಇಸ್ರೋ, ಡಿಆರ್‌ಡಿಒ ನಂತಹ ಪ್ರಮುಖ ಸಂಸ್ಥೆಗಳ ತವರಾಗಿರುವ ಕರ್ನಾಟಕವು 16,000ಕ್ಕೂ ಹೆಚ್ಚು ನವೋದ್ಯಮಗಳಿಗೆ ನೆಲೆಯಾಗಿದ್ದು, ಭಾರತದ ಒಟ್ಟು ನವೋದ್ಯಮ ನಿಧಿಗೆ ಸುಮಾರು 47% ರಷ್ಟು ಕೊಡುಗೆ ನೀಡುತ್ತಿದೆ. ಅಲ್ಲದೆ, ಭಾರತದ ಐಟಿ ರಫ್ತಿನಲ್ಲಿ ರಾಜ್ಯದ ಪಾಲು 42% (ರೂ. 3.2 ಲಕ್ಷ ಕೋಟಿಗೂ ಹೆಚ್ಚು) ಇದೆ ಎಂದು ಅಂಕಿಅಂಶಗಳನ್ನು ನೀಡಿದರು.

​ಪರಿವರ್ತನೆಯ ಮನ್ವಂತರಕ್ಕೆ ವೇದಿಕೆ

​ಬೆಂಗಳೂರು ಟೆಕ್ ಶೃಂಗಸಭೆಯು ಕೇವಲ ಸಮಾವೇಶವಲ್ಲ, ಇದು ಹೊಸ ವಿಚಾರಗಳು, ಬಂಡವಾಳ ಹೂಡಿಕೆ ಮತ್ತು ಪರಿವರ್ತನೆಯ ಮನ್ವಂತರಕ್ಕೆ ವೇದಿಕೆಯಾಗಿದೆ. “ಭವಿಷ್ಯಕರಣಗೊಳ್ಳಿ – ನಾವಿನ್ಯತೆಯನ್ನು ರೂಪಿಸುತ್ತಾ, ಊಹಿಸಿಲಾಗದ್ದನ್ನು ಅಳೆಯುತ್ತಾ, ಜಗತ್ತನ್ನು ಮುಂದೆ ಕೊಂಡೊಯ್ಯುವುದು” ಎಂಬ ಈ ವರ್ಷದ ಧೈಯವಾಕ್ಯವು ನಮ್ಮ ಸಾಮೂಹಿಕ ಸಂಕಲ್ಪವನ್ನು ಎತ್ತಿ ಹಿಡಿಯುತ್ತದೆ ಎಂದು ಹೇಳಿದರು. ಈ ಸಮಾವೇಶದಲ್ಲಿ ಭಾಗವಹಿಸುತ್ತಿರುವ 600ಕ್ಕೂ ಹೆಚ್ಚು ಜಾಗತಿಕ ಭಾಷಣಕಾರರು, 1,200ಕ್ಕೂ ಹೆಚ್ಚು ಪ್ರದರ್ಶಕರು ಮತ್ತು 60ಕ್ಕೂ ಹೆಚ್ಚು ದೇಶದ ನಿಯೋಗಗಳು ತಂತ್ರಜ್ಞಾನದ ಹೊಸ ಸಾಧ್ಯತೆಗಳನ್ನು ಜಗತ್ತಿಗೆ ತೆರೆದಿಡಲಿವೆ ಎಂದರು.

​ಸುಸ್ಥಿರ ಅಭಿವೃದ್ಧಿ ನಮ್ಮ ಧೇಯ ಮತ್ತು ‘ಬಿಯಾಂಡ್ ಬೆಂಗಳೂರು’

​ತಂತ್ರಜ್ಞಾನವು ಸಾಮಾಜಿಕ ಒಳಿತನ್ನು, ಆರ್ಥಿಕ ನ್ಯಾಯವನ್ನು ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಒದಗಿಸಬೇಕು ಎಂಬುದು ನಮ್ಮ ನಂಬಿಕೆ. ಕೃತಕ ಬುದ್ಧಿಮತ್ತೆ (AI), ಕ್ವಾಂಟಮ್, ಬಯೋಟೆಕ್, ಬಾಹ್ಯಾಕಾಶ ಮತ್ತು ಹಸಿರು ತಂತ್ರಜ್ಞಾನದ ಈ ಡಿಜಿಟಲ್ ಯುಗದಲ್ಲಿ, ಕರ್ನಾಟಕವು ಕ್ವಾಂಟಮ್ ತಂತ್ರಜ್ಞಾನದ ಮಾರ್ಗಸೂಚಿಗಳನ್ನು ಜಾರಿಗೆ ತಂದ ಮೊದಲ ರಾಜ್ಯವಾಗಿದೆ. ಅಲ್ಲದೆ, ‘ಬಿಯಾಂಡ್ ಬೆಂಗಳೂರು’ ಉಪಕ್ರಮದ ಮೂಲಕ ಟೈರ್ 2 ನಗರಗಳನ್ನು ನಾವಿನ್ಯತೆಯ ಕ್ಲಸ್ಟರ್‌ಗಳಾಗಿ ಅಭಿವೃದ್ಧಿಪಡಿಸುವ ಮೂಲಕ ತಂತ್ರಜ್ಞಾನ ಆರ್ಥಿಕತೆಯ ವಿಕೇಂದ್ರೀಕರಣಕ್ಕೆ ಒತ್ತು ನೀಡಲಾಗಿದೆ. ಸಂಶೋಧನೆಯಿಂದ ಮಾರುಕಟ್ಟೆಯವರೆಗೆ ಎಲ್ಲ ಅಗತ್ಯತೆಗಳನ್ನು ಪೂರೈಸುತ್ತಿರುವ ಕರ್ನಾಟಕವು ಜಾಗತಿಕ ತಂತ್ರಜ್ಞಾನ ಕ್ರಾಂತಿಯನ್ನು ಮುನ್ನಡೆಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಶ್ವಾಸ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *