
ಬೆಳಗಾವಿ: ರಾಜ್ಯ ರಾಜಕಾರಣದಲ್ಲಿ ತೀವ್ರ ಪ್ರತಿಷ್ಠೆಯ ಕಣವಾಗಿದ್ದ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ (ಡಿಸಿಸಿ) ಬ್ಯಾಂಕ್ ನಿರ್ದೇಶಕರ ಸ್ಥಾನಗಳಿಗೆ ಭಾನುವಾರ (ಅ.19) ನಡೆದ ಚುನಾವಣೆಯು ಉದ್ವಿಗ್ನ ಪರಿಸ್ಥಿತಿಯಲ್ಲಿ ಮುಕ್ತಾಯಗೊಂಡಿದ್ದು, ಇಂದು ಸಂಜೆ ಫಲಿತಾಂಶ ಪ್ರಕಟಗೊಂಡಿದೆ. ಚುನಾವಣೆಗೆ ಸ್ಪರ್ಧಿಸಿದ್ದ 7 ಸ್ಥಾನಗಳ ಪೈಕಿ ಬಹುಪಾಲು ಸ್ಥಾನಗಳನ್ನು ಜಾರಕಿಹೊಳಿ ಬಣವು ಗೆದ್ದುಕೊಳ್ಳುವ ಮೂಲಕ ಬ್ಯಾಂಕ್ ಮೇಲೆ ತಮ್ಮ ಹಿಡಿತವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದೆ.
ಮತದಾನ ಕೇಂದ್ರದಲ್ಲಿ ಮಾರಾಮಾರಿ:
ಮತದಾನ ಪ್ರಕ್ರಿಯೆಯು ಬಿ.ಕೆ. ಮಾಡೆಲ್ ಪ್ರೌಢಶಾಲೆಯಲ್ಲಿ ಬೆಳಗ್ಗೆ ಆರಂಭವಾಗುತ್ತಿದ್ದಂತೆಯೇ, ಮತಗಟ್ಟೆ ಬಳಿ ಜಾರಕಿಹೊಳಿ ಹಾಗೂ ಲಕ್ಷ್ಮಣ ಸವದಿ-ರಮೇಶ್ ಕತ್ತಿ ಬಣಗಳ ಬೆಂಬಲಿಗರ ನಡುವೆ ತೀವ್ರ ಮಾರಾಮಾರಿ ನಡೆದು, ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು.
ರಾಯಬಾಗ ಕ್ಷೇತ್ರದಲ್ಲಿ ಗದ್ದಲದ ವರದಿ:
ರಾಯಬಾಗ ತಾಲೂಕಿನ ನಿರ್ದೇಶಕ ಸ್ಥಾನಕ್ಕೆ ಸಂಬಂಧಿಸಿದಂತೆ ವಿವಾದ ತಾರಕಕ್ಕೇರಿತು. ಸವದಿ-ಕತ್ತಿ ಬಣದ ಅಭ್ಯರ್ಥಿ ಬಸನಗೌಡ ಆಸಂಗಿ ಅವರ ಬೆಂಬಲಿಗರು, ಜಾರಕಿಹೊಳಿ ಬಣದ ಅಭ್ಯರ್ಥಿ ಅಪ್ಪಾಸಾಹೇಬ್ ಕುಲಗೋಡ ವಿರುದ್ಧ, ನಿರ್ದಿಷ್ಟ ಮತದಾರರಿಗೆ ಮತದಾನ ಮಾಡಲು ಬೇಕಾದ 40 ಡೆಲಿಗೇಷನ್ ಫಾರಂಗಳನ್ನೂ ನೀಡುತ್ತಿಲ್ಲ ಎಂದು ಗಂಭೀರವಾಗಿ ಆರೋಪಿಸಿ ಜಾರಕಿಹೊಳಿ ಬಣದ ಅಭ್ಯರ್ಥಿ ಇದ್ದ ಖಾಸಗಿ ಹೋಟೆಲ್‌ಗೆ ನುಗ್ಗಿ ಹಲ್ಲೆ ನಡೆಸಲು ಯತ್ನಿಸಿದರು. ಕೂಡಲೇ ಸ್ಥಳಕ್ಕಾಗಮಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.
ಫಲಿತಾಂಶ ವಿವರ: ಜಾರಕಿಹೊಳಿ ಬಣಕ್ಕೆ ಬಹುಮತ
ಡಿಸಿಸಿ ಬ್ಯಾಂಕಿನ ಒಟ್ಟು 16 ನಿರ್ದೇಶಕ ಸ್ಥಾನಗಳ ಪೈಕಿ ಈಗಾಗಲೇ ಜಾರಕಿಹೊಳಿ ಸಹೋದರರ ಬಣದ ಪ್ರಮುಖರು ಸೇರಿದಂತೆ 9 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿತ್ತು. ಉಳಿದ 7 ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಇದರಲ್ಲಿಯೂ ಜಾರಕಿಹೊಳಿ ಸಹೋದರರ ನೇತೃತ್ವದ ಬಣವು ಹೆಚ್ಚು ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಈ ಗೆಲುವಿನೊಂದಿಗೆ ಬ್ಯಾಂಕ್‌ನ ಒಟ್ಟು 16 ಸ್ಥಾನಗಳ ಪೈಕಿ ಬಹುಪಾಲು ನಿರ್ದೇಶಕರು ಜಾರಕಿಹೊಳಿ ಬೆಂಬಲಿಗರಾದಂತಾಗಿದ್ದು, ಬ್ಯಾಂಕಿನ ಆಡಳಿತ ಮಂಡಳಿಯ ಸಂಪೂರ್ಣ ಹಿಡಿತವನ್ನು ಜಾರಕಿಹೊಳಿ ಸಹೋದರರು ಪಡೆದುಕೊಂಡಿದ್ದಾರೆ. ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಜಾರಕಿಹೊಳಿ ಬೆಂಬಲಿಗರು ಬ್ಯಾಂಕ್ ಆವರಣದಲ್ಲಿ ಪಟಾಕಿ ಸಿಡಿಸಿ, ಪರಸ್ಪರ ಬಣ್ಣ ಎರಚಿ ಸಂಭ್ರಮಾಚರಣೆಯಲ್ಲಿ ತೊಡಗಿದರು. ಈ ಸಹಕಾರಿ ಚುನಾವಣೆ ಜಿಲ್ಲೆಯ ರಾಜಕೀಯ ಸಮೀಕರಣಕ್ಕೆ ಮತ್ತಷ್ಟು ಬಲ ತುಂಬಿದೆ.

