ಬೆಳಗಾವಿ: ಡಿಸಿಸಿ ಬ್ಯಾಂಕ್ ಚುನಾವಣೆ ಕದನ: ಕತ್ತಿ-ಪಾಟೀಲ ನಡುವಿನ ಹಣಾಹಣಿಗೆ ಬ್ರೇಕ್!

Spread the love

ಹುಕ್ಕೇರಿ: ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ (ಡಿಸಿಸಿ) ಬ್ಯಾಂಕಿನ ಆಡಳಿತ ಮಂಡಳಿ ಚುನಾವಣೆಯಲ್ಲಿ ಹುಕ್ಕೇರಿ ತಾಲ್ಲೂಕಿನ ವಿವಿದೋದ್ದೇಶ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮತಕ್ಷೇತ್ರದ ಚುನಾವಣೆ ತಾತ್ಕಾಲಿಕವಾಗಿ ಮುಂದೂಡಲ್ಪಟ್ಟಿದೆ. ಈ ಮೂಲಕ, ಈ ಕ್ಷೇತ್ರದಲ್ಲಿ ಮಾಜಿ ಸಂಸದ ರಮೇಶ ಕತ್ತಿ ಮತ್ತು ಸಂಗಮ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ರಾಜೇಂದ್ರ ಪಾಟೀಲ ಅವರ ನಡುವೆ ನಡೆಯಬೇಕಿದ್ದ ನೇರ ಹಣಾಹಣಿಗೆ ಹಿನ್ನಡೆಯಾದಂತಾಗಿದೆ.

ಹೈಕೋರ್ಟ್ ಆದೇಶದ ಹಿನ್ನೆಲೆ: ಚುನಾವಣೆ ಮುಂದೂಡಿಕೆ
ಬೆಳಗಾವಿ ಡಿಸಿಸಿ ಬ್ಯಾಂಕಿಗೆ ದಿನಾಂಕ ಅಕ್ಟೋಬರ್ 19, 2025 ರಂದು ಸಾಮಾನ್ಯ ಚುನಾವಣೆ ನಿಗದಿಯಾಗಿತ್ತು. ಆದರೆ, ಕರ್ನಾಟಕ ಉಚ್ಚ ನ್ಯಾಯಾಲಯದ ಧಾರವಾಡ ಪೀಠದಲ್ಲಿ ದಾಖಲಾದ ರಿಟ್ ಅರ್ಜಿ ಸಂಖ್ಯೆ: 107692/2025 ರ ಕುರಿತು ದಿನಾಂಕ 17-10-2025 ರಂದು ಹೊರಡಿಸಿದ ಮಧ್ಯಂತರ ಆದೇಶದ ಕಾರಣದಿಂದಾಗಿ ಹುಕ್ಕೇರಿ ತಾಲ್ಲೂಕಿಗೆ ಸಂಬಂಧಿಸಿದ ಕ್ಷೇತ್ರದ ಚುನಾವಣೆಯನ್ನು ಮುಂದೂಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಫೆಡರಲ್ ವರ್ಗದ ಸಹಕಾರ ಸಂಘಗಳ ಜಿಲ್ಲಾ ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹುಕ್ಕೇರಿ ಕ್ಷೇತ್ರದಲ್ಲಿ ಪ್ರಬಲ ಪೈಪೋಟಿ
ಬೆಳಗಾವಿ ಜಿಲ್ಲೆಯ ಸಹಕಾರಿ ರಾಜಕಾರಣದಲ್ಲಿ ಅತ್ಯಂತ ಪ್ರಮುಖವಾಗಿರುವ ಈ ಹುಕ್ಕೇರಿ ಡಿಸಿಸಿ ಬ್ಯಾಂಕ್ ಕ್ಷೇತ್ರವು ಆರಂಭದಿಂದಲೂ ಕುತೂಹಲ ಮೂಡಿಸಿತ್ತು. ಇಲ್ಲಿ ಸಹಕಾರಿ ದಿಗ್ಗಜರಾದ ರಮೇಶ ಕತ್ತಿ ಮತ್ತು ರಾಜೇಂದ್ರ ಪಾಟೀಲರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಸದ್ಯ ನ್ಯಾಯಾಲಯದ ಆದೇಶದಿಂದಾಗಿ ಈ ಕ್ಷೇತ್ರದ ಮತದಾನವನ್ನು ಮುಂದಿನ ಆದೇಶ ಬರುವವರೆಗೆ ಮುಂದೂಡಲಾಗಿದೆ. ಉಳಿದ ಕ್ಷೇತ್ರಗಳ ಚುನಾವಣೆ ಕುರಿತು ಯಾವುದೇ ಬದಲಾವಣೆಗಳ ಮಾಹಿತಿ ಲಭ್ಯವಾಗಿಲ್ಲ.

ಚುನಾವಣಾ ವೇಳಾಪಟ್ಟಿಯನ್ನು ಉಪವಿಭಾಗಾಧಿಕಾರಿಗಳು (ರಿಟರ್ನಿಂಗ್ ಅಧಿಕಾರಿಗಳು) ಈ ಮೊದಲು ಸೆಪ್ಟೆಂಬರ್ 30, 2025 ರಂದು ಹೊರಡಿಸಿದ್ದರು. ಈಗ ಕೋರ್ಟ್ ಮಧ್ಯಂತರ ಆದೇಶದ ಹಿನ್ನೆಲೆಯಲ್ಲಿ ಕೇವಲ ಹುಕ್ಕೇರಿ ತಾಲೂಕಿನ ಮತಕ್ಷೇತ್ರದ ಚುನಾವಣಾ ಪ್ರಕ್ರಿಯೆ ಸ್ಥಗಿತಗೊಂಡಿದೆ.

Leave a Reply

Your email address will not be published. Required fields are marked *