ಬಸನಗೌಡ ಯತ್ನಾಳರಿಂದ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ: ‘ಸಿಎಂ ಖುರ್ಚಿಗಾಗಿ ದೆಹಲಿಗೆ ದೌಡು, ಜನಕಲ್ಯಾಣ ಮರೆತಿದ್ದಾರೆ’

Spread the love

ಹುಬ್ಬಳ್ಳಿ:

ರಾಜ್ಯದಲ್ಲಿ ಕಾಂಗ್ರೆಸ್ ನಾಯಕರು ಸಿಎಂ ಕುರ್ಚಿ ಮತ್ತು ಸಚಿವ ಸ್ಥಾನಗಳಿಗಾಗಿ ಕಳೆದ ಒಂದು ತಿಂಗಳಿನಿಂದ ದೆಹಲಿಗೆ ದೌಡಾಯಿಸುತ್ತಿದ್ದಾರೆ. ತಮ್ಮ ಸ್ವಾರ್ಥ ಸಾಧನೆ ಹಾಗೂ ಸಂಖ್ಯಾಬಲ ಪ್ರದರ್ಶನದ ತವಕದಲ್ಲಿರುವ ನಾಯಕರು, ಜನಕಲ್ಯಾಣವನ್ನು ಸಂಪೂರ್ಣವಾಗಿ ಮರೆತಿದ್ದಾರೆ ಎಂದು ಮಾಜಿ ಕೇಂದ್ರ ಸಚಿವ ಮತ್ತು ಹಾಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

​ನಗರದಲ್ಲಿ (ಶನಿವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲ ಅಪ್ರಬುದ್ಧ ಮಂತ್ರಿಗಳು ಹಿಂದೂ ವಿರೋಧಿ ಹೇಳಿಕೆಗಳನ್ನು ನೀಡುವುದನ್ನಷ್ಟೇ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಪ್ರವಾಹ, ಅತೀವೃಷ್ಟಿ, ಅನಾವೃಷ್ಟಿ ಮತ್ತು ರೈತರ ಸಂಕಷ್ಟಕ್ಕೆ ಸ್ಪಂದಿಸದೆ, ಉಸ್ತುವಾರಿ ಸಚಿವರುಗಳು ಹಣ ವಸೂಲಿಗಾಗಿ ಓಡಾಡುತ್ತಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಸ್ವರೂಪದ ಆರೋಪ ಮಾಡಿದರು.

​ಡಿಕೆಶಿ-ವಿಜಯೇಂದ್ರ ಪಾಲುದಾರಿಕೆ ಆರೋಪ

​ರಾಜ್ಯದ ಉಪ ಮುಖ್ಯಮಂತ್ರಿ (ಡಿಸಿಎಂ) ಡಿ.ಕೆ. ಶಿವಕುಮಾರ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ವ್ಯವಹಾರದಲ್ಲಿ ಪಾಲುದಾರರು. ಇದೇ ಕಾರಣಕ್ಕೆ ಡಿ.ಕೆ. ಶಿವಕುಮಾರ್ ಅವರು ಶಿಕಾರಿಪುರ ವಿಧಾನಸಭಾ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ನೀಡುತ್ತಿದ್ದಾರೆ ಎಂದು ಬಸನಗೌಡ ಯತ್ನಾಳ ಅವರು ನೇರವಾಗಿ ಗಂಭೀರ ಆರೋಪ ಮಾಡಿದರು.

​ವಿಜಯೇಂದ್ರ ಅವರು ಬಿಜೆಪಿಗೆ ನ್ಯಾಯ ಒದಗಿಸಲು ಸಾಧ್ಯವಾಗುತ್ತಿಲ್ಲ. (ಬಿ.ಎಸ್. ಯಡಿಯೂರಪ್ಪ ಮತ್ತು ಬಿ.ವೈ. ವಿಜಯೇಂದ್ರ) ಇಬ್ಬರೂ ಸೇರಿಕೊಂಡು, ತಮ್ಮ ಹುಳುಕುಗಳನ್ನು ಮುಚ್ಚಿಕೊಳ್ಳುವ ಸಲುವಾಗಿ ರಾಜ್ಯದಲ್ಲಿ ವಿರೋಧ ಪಕ್ಷವೇ ಇಲ್ಲದಂತೆ ಮಾಡಿದ್ದಾರೆ ಎಂದು ಯತ್ನಾಳ ಅವರು ಕಿಡಿಕಾರಿದರು.

​’ರಾಹುಲ್ ಗಾಂಧಿ ಇಟಲಿಗೆ ಪರಾರಿಯಾಗಲಿದ್ದಾರೆ’

​ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ವಾಗ್ದಾಳಿ ಮುಂದುವರೆಸಿದ ಯತ್ನಾಳ ಅವರು, ರಾಹುಲ್ ಗಾಂಧಿಗೆ ಬುದ್ಧಿ ಭ್ರಮಣೆಯಾಗಿದೆ. ದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ನಿರ್ನಾಮ ಮಾಡಿ, ಇನ್ನು ಕೆಲವೇ ದಿನಗಳಲ್ಲಿ ಅವರು ಇಟಲಿಗೆ ಪರಾರಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದರು.

​”ರಾಹುಲ್ ಗಾಂಧಿ ಅವರ ಧೋರಣೆ, ನಡೆ ನುಡಿಯನ್ನು ನೋಡಿದರೆ ಅವರಿಗೆ ನಮ್ಮ ದೇಶದಲ್ಲಿ ಇರುವ ನೈತಿಕತೆ ಇಲ್ಲ. ಅವರ ಎಡವಟ್ಟುತನದಿಂದಲೇ ಇಂದು ಕಾಂಗ್ರೆಸ್ ದೇಶದಲ್ಲಿ ನೆಲಕಚ್ಚಿದೆ. ಬಿಹಾರ ಚುನಾವಣೆಯಲ್ಲಿ ಜನ ತಮ್ಮ ತೀರ್ಪನ್ನು ಪ್ರಕಟಿಸಿದರೂ, ರಾಹುಲ್ ಗಾಂಧಿ ಅದನ್ನು ಒಪ್ಪಿಕೊಳ್ಳದೇ, ಮತ್ತೇ ಮತಗಳ್ಳತನದ ಹಳೇ ಕ್ಯಾಸೆಟ್ ಹಾಕುತ್ತಿದ್ದಾರೆ,” ಎಂದು ಯತ್ನಾಳ ಟೀಕಿಸಿದರು.

​ರಾಹುಲ್ ಗಾಂಧಿ ಅವರ ಅಪ್ರಬುದ್ಧ ಹೇಳಿಕೆಗಳಿಂದಲೇ ಕಾಂಗ್ರೆಸ್ ನೆಲೆ ಕಳೆದುಕೊಳ್ಳುತ್ತಿದ್ದು, ಕೆಲವೇ ದಿನಗಳಲ್ಲಿ ಪಕ್ಷ ನಿರ್ನಾಮವಾಗಲಿದೆ. ಆ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು ಭಾರತವನ್ನು ತೊರೆಯಲಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಪುನರುಚ್ಚರಿಸಿದರು.

Leave a Reply

Your email address will not be published. Required fields are marked *