ಕನೇರಿ ಶ್ರೀಗಳರಿಗೆ ವಿಜಯಪುರ ಪ್ರವೇಶ ನಿರ್ಬಂಧ: ಕುಂದಗೋಳದಲ್ಲಿ ನ.4ರಂದು ಬೃಹತ್ ಪ್ರತಿಭಟನೆ

Spread the love

ಕುಂದಗೋಳ: ಕನ್ನೇರಿ ಮಠದ ಶ್ರೀ ಅದೃಶ್ಯ ಕಾಡಶಿದ್ದೇಶ್ವರ ಶ್ರೀಗಳರವರನ್ನು ವಿಜಯಪುರ ಪ್ರವೇಶಕ್ಕೆ ನಿರ್ಬಂಧಿಸಿರುವುದನ್ನು ಖಂಡಿಸಿ ನವೆಂಬರ್ 4ರಂದು (ಮಂಗಳವಾರ) ಬೃಹತ್ ಪ್ರತಿಭಟನೆಯ ಮೂಲಕ ತಹಶೀಲ್ದಾರರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಬಸವಾದಿಶರಣರ ಹಿಂದೂ ಸಮಾವೇಶದ ಹಿರಿಯ ಮುಖಂಡ ನಿಂಗಪ್ಪ ಜಟಾರ ತಿಳಿಸಿದ್ದಾರೆ.

ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಕನ್ನೇರಿ ಶ್ರೀಗಳರು ರೈತರ ಉದ್ದಾರಕ್ಕಾಗಿ ಅನೇಕ ಸಂಶೋಧನೆಗಳ ಮೂಲಕ ಸಂಪ್ರದಾಯಿಕ ಬೆಳೆ ಬೆಳೆಸಲು ರೈತರಲ್ಲಿ ಉತ್ತೇಜನೆ ನೀಡುತ್ತಿದ್ದು, ಸಾವಲಂಬಿ ಬದುಕು ಕಟ್ಟಿಕೊಳ್ಳುವಂತೆ ರೈತರಿಗೆ ಪ್ರೇರಣೆ ನೀಡುತ್ತಿದ್ದಾರೆ. ಜೊತೆಗೆ ಹಿಂದೂ ಧರ್ಮದ ರಕ್ಷಣೆಗೆ ಜಾಗೃತಿ ಮೂಡಿಸುತ್ತಿರುವ ಶ್ರೀಗಳರವರ ಮೇಲೆ ವಿಜಯಪುರ ಜಿಲ್ಲೆಯಲ್ಲಿ ವಿಧಿಸಿದ ಪ್ರವೇಶ ನಿರ್ಬಂಧ ಭಕ್ತ ಸಮುದಾಯಕ್ಕೆ ನೋವಿನ ಸಂಗತಿಯಾಗಿದೆ ಎಂದು ಹೇಳಿದರು.

ಅವರು ಮುಂದುವರಿಸಿ, ರಾಜ್ಯ ಸರ್ಕಾರವು ತಕ್ಷಣ ಮಧ್ಯಸ್ಥಿಕೆ ವಹಿಸಿ ಈ ನಿರ್ಬಂಧವನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು. ಅನೇಕ ಶ್ರೀಗಳು, ಶಾಸಕರು, ಸಂಘಟನೆಗಳು ಹಾಗೂ ಭಕ್ತ ಸಮುದಾಯವು ಈ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಪ್ರತಿಭಟನೆಯನ್ನು ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು. ಪ್ರತಿಭಟನೆಗೆ ಸರಕಾರ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.

ವೀರಶೈವ ಮಹಾಸಭಾ ತಾಲೂಕ ಅಧ್ಯಕ್ಷ ಉಮೇಶ ಹೇಬಸೂರ ಮಾತನಾಡಿ, ಪಟ್ಟಣದ ಗಾಳಿಮರೆಮ್ಮ ದೇವಸ್ಥಾನದಿಂದ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಪ್ರತಿಭಟನೆ ಹಮ್ಮಿಕೊಂಡು ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು. ಸಮಾಜದ ಎಲ್ಲ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಅವರು ವಿನಂತಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ಹಿರಿಯ ಮುಖಂಡರಾದ ಅರವಿಂದ ಕಟಗಿ, ಉಮೇಶ ಹೇಬಸೂರ, ಮಲ್ಲಪ್ಪ ತಡಸದ, ಕಾಡಪ್ಪ ಜಾಡರ, ದಾನಪ್ಪ ಗಂಗಾಯಿ, ತೆಂಬನಗೌಡ ಪಾಟೀಲ, ದೇವೇಂದ್ರಪ್ಪ ಜೈನರ, ಗೋವಿಂದಪ್ಪ ಛಬ್ಬಿ, ಬಸವರಾಜ ನಾವಳ್ಳಿ, ಬಸವರಾಜ ಸಂಬೂಜಿ, ಸಿದ್ದಯ್ಯ ಹಿರೇಮಠ ಸೇರಿದಂತೆ ಅನೇಕರಿದ್ದರು.

Leave a Reply

Your email address will not be published. Required fields are marked *