ಬಳ್ಳಾರಿ: ತೋರಣಗಲ್ಲು ನಕಲಿ ವೈದ್ಯನ ಕ್ಲಿನಿಕ್ ಸೀಜ್; ದೂರು ನೀಡಲು ಡಿಎಚ್‌ಒ ಕರೆ

Spread the love

🚨 ತೋರಣಗಲ್ಲು: ನಕಲಿ ವೈದ್ಯನ ಕ್ಲಿನಿಕ್ ಸೀಜ್; ದೂರು ನೀಡಲು ಡಿಎಚ್‌ಒ ಕರೆ

ಬಳ್ಳಾರಿ, ನ.13: ಯಾವುದೇ ಅಧಿಕೃತ ವೈದ್ಯಕೀಯ ಪದವಿ ಪಡೆಯದೇ, ತಾನೇ ವೈದ್ಯನೆಂದು ಸುಳ್ಳು ಹೇಳಿ ಜನರಿಗೆ ಚಿಕಿತ್ಸೆ ನೀಡುತ್ತಿದ್ದ ಸಂಡೂರು ತಾಲ್ಲೂಕಿನ ತೋರಣಗಲ್ಲು ಗ್ರಾಮದ ಓರ್ವ ವ್ಯಕ್ತಿಯ ಕ್ಲಿನಿಕ್ ಅನ್ನು ಸೀಜ್ ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಯಲ್ಲಾ ರಮೇಶ್ ಬಾಬು ತಿಳಿಸಿದ್ದಾರೆ. ತೋರಣಗಲ್ಲಿನ ಅಭಿಲಾಷ್ ಕ್ಲಿನಿಕ್‌ನಲ್ಲಿ ವೈದ್ಯ ವೃತ್ತಿ ಮಾಡುತ್ತಿದ್ದ ಬಿ.ಎನ್. ವೀರೇಶ್ ಎಂಬುವನ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ.

ಬಂಧಿತ ಬಿ.ಎನ್. ವೀರೇಶ್ ಕೇವಲ 10ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿದ್ದು, ಔಷಧಿಗಳ ಬಗ್ಗೆ ಅಲ್ಪಸ್ವಲ್ಪ ಮಾಹಿತಿ ಪಡೆದುಕೊಂಡು ಸಾರ್ವಜನಿಕರಿಗೆ ತಾನು ವೈದ್ಯನೆಂದು ಬಿಂಬಿಸಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದನು. ಸಾರ್ವಜನಿಕರಿಂದ ಈ ಕುರಿತು ದೂರುಗಳು ಬಂದ ಹಿನ್ನೆಲೆಯಲ್ಲಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯವರ ಆದೇಶದ ಮೇರೆಗೆ ಸಂಡೂರು ತಾಲ್ಲೂಕು ನೋಡಲ್ ಅಧಿಕಾರಿಯೂ ಆಗಿರುವ ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ. ಇಂದ್ರಾಣಿ ಮತ್ತು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಭರತ್ ಅವರ ನೇತೃತ್ವದ ತಂಡವು ಕ್ಲಿನಿಕ್ ಮೇಲೆ ದಾಳಿ ನಡೆಸಿತು. ದಾಳಿಯ ಸಮಯದಲ್ಲಿ ಆತನ ನಕಲಿ ವೃತ್ತಿ ದೃಢಪಟ್ಟ ಕಾರಣ ಕ್ಲಿನಿಕ್ ಅನ್ನು ಸೀಜ್ ಮಾಡಿ, ಮುಂದಿನ ಕ್ರಮಕ್ಕಾಗಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ ಎಂದು ಡಾ. ರಮೇಶ್ ಬಾಬು ತಿಳಿಸಿದರು.

ದಾಳಿಯ ಸಂದರ್ಭದಲ್ಲಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಬಂಡೆಗೌಡ ಹಾಗೂ ಆರೋಗ್ಯ ನಿರೀಕ್ಷಣಾಧಿಕಾರಿ ನಿಜಾಮುದ್ದೀನ್ ಸಹ ಹಾಜರಿದ್ದರು.

ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಮಹತ್ವದ ಮನವಿ ಮಾಡಿದರು. ಅಧಿಕೃತ ವೈದ್ಯ ಪದವಿ ಪಡೆದ ವೈದ್ಯರ ಬಳಿ ಮಾತ್ರ ತಪಾಸಣೆ ಮಾಡಿಸಿ ಸೂಕ್ತ ಚಿಕಿತ್ಸೆ ಪಡೆಯುವುದರಿಂದ ಆರೋಗ್ಯದ ಮೇಲೆ ಉಂಟಾಗಬಹುದಾದ ಗಂಭೀರ ಪರಿಣಾಮಗಳನ್ನು ತಡೆಯಬಹುದು ಎಂದು ಅವರು ಸಲಹೆ ನೀಡಿದರು. ಗ್ರಾಮಗಳಲ್ಲಿ ವೈದ್ಯ ವೃತ್ತಿ ಮಾಡುತ್ತಿರುವವರು ಕಂಡುಬಂದಲ್ಲಿ, ಅವರ ವೈದ್ಯಕೀಯ ಪದವಿ ವಿವರವನ್ನು ಪರಿಶೀಲಿಸಿ ನಂತರ ಮಾತ್ರ ಚಿಕಿತ್ಸೆ ಪಡೆಯುವುದು ಅಗತ್ಯ ಎಂದು ಹೇಳಿದರು.

ಒಂದು ವೇಳೆ ನಕಲಿ ವೈದ್ಯರು ಎಂದು ಕಂಡುಬಂದಲ್ಲಿ ತಕ್ಷಣವೇ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಾರ್ಯಾಲಯಕ್ಕೆ ದೂರು ನೀಡಬೇಕು ಎಂದು ಸಾರ್ವಜನಿಕರಿಗೆ ಕರೆ ನೀಡಿದರು. ಇಂತಹ ನಕಲಿ ವೈದ್ಯರ ವಿರುದ್ಧ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮ 2007ರಡಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

Leave a Reply

Your email address will not be published. Required fields are marked *