
ಬಳ್ಳಾರಿ, ನ. 03: ವಿಮೆ ಹೊಂದಿದ ವಾಹನ ಕಳ್ಳತನವಾಗಿದ್ದರೂ, ಕ್ಲೈಮ್ ಅರ್ಜಿಯನ್ನು ತಿರಸ್ಕರಿಸಿ ಸೇವಾ ನ್ಯೂನ್ಯತೆ ಎಸಗಿದ ಬೆಂಗಳೂರಿನ ಮೆ|| ಟಾಟಾ ಎಐಜಿ ಜನರಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್‌ನ ವ್ಯವಸ್ಥಾಪಕನಿಗೆ ಬಳ್ಳಾರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ವಿಮೆ ಮೊತ್ತ ಮತ್ತು ದಂಡ ಪಾವತಿಸುವಂತೆ ಮಹತ್ವದ ಆದೇಶ ನೀಡಿದೆ.
ದೂರುದಾರರಾದ ಬಳ್ಳಾರಿ ತಾಲ್ಲೂಕಿನ ಹೊಸ ರರ್ರಗುಡಿ ಗ್ರಾಮದ ಡಿ. ಪ್ರತಾಪ್ ರೆಡ್ಡಿ ಅವರು ತಮ್ಮ ದ್ವಿಚಕ್ರ ವಾಹನಕ್ಕೆ (ನೋಂದಣಿ ಸಂಖ್ಯೆ: ಕೆ.ಎ 34/ಇಎಸ್-5099) 14-08-2023 ರಿಂದ 13-08-2024 ರ ಅವಧಿಗೆ ವಿಮೆ ಪಾಲಿಸಿ ಪಡೆದಿದ್ದರು. ಚಾಲ್ತಿಯಲ್ಲಿರುವ ಈ ಅವಧಿಯಲ್ಲಿ, 29-04-2024 ರಂದು ಸಂಜೆ 7:30 ಕ್ಕೆ ಮನೆಯ ಮುಂದೆ ನಿಲ್ಲಿಸಿದ್ದ ಅವರ ವಾಹನ ಕಳ್ಳತನವಾಗಿತ್ತು.
ಕ್ಲೈಮ್ ತಿರಸ್ಕರಿಸಿದ ಕಂಪನಿ
ವಾಹನ ಕಳ್ಳತನದ ಕುರಿತು ಸಂಬಂಧಿಸಿದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಆ ಮಾಹಿತಿಯೊಂದಿಗೆ ದೂರುದಾರರು ಇನ್ಶೂರೆನ್ಸ್ ಕಂಪನಿಗೆ ಕ್ಲೈಮ್ ಅರ್ಜಿ ಸಲ್ಲಿಸಿದ್ದರು. ಆದರೆ, ಕ್ಲೈಮ್ ಅನ್ನು ವಿಮಾ ಕಂಪನಿ ತಿರಸ್ಕರಿಸಿತು. ಇದರಿಂದ ನೊಂದ ದೂರುದಾರರು ₹76,200 ವಿಮಾ ಮೊತ್ತದೊಂದಿಗೆ ನಷ್ಟ ಪರಿಹಾರ ಕೋರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ವೇಳೆ, ಇನ್ಶೂರೆನ್ಸ್ ಕಂಪನಿಯು ವಿಮಾ ಕಂತಿನ ನಿಯಮಗಳ ಪ್ರಕಾರ, ವಾಹನ ಕಳ್ಳತನವಾದ 48 ಗಂಟೆಯೊಳಗೆ ಮಾಹಿತಿ ನೀಡಬೇಕಿತ್ತು. ಆದರೆ ಮೋಟಾರ್ ವಾಹನ ಕಾಯ್ದೆ 1988ರ ನಿಯಮಾನುಸಾರ, 48 ಗಂಟೆಯೊಳಗೆ ಮಾಹಿತಿ ನೀಡದೇ ನಿಯಮ ಉಲ್ಲಂಘಿಸಿರುವ ಕಾರಣಕ್ಕೆ ಕ್ಲೈಮ್ ತಿರಸ್ಕರಿಸಲಾಗಿದೆ ಎಂದು ಸಮರ್ಥಿಸಿಕೊಂಡಿತು.
ಆಯೋಗದ ನಿರ್ಣಯ ಮತ್ತು ದಂಡ
ಪ್ರಕರಣದಲ್ಲಿ ಆಯೋಗದ ಅಧ್ಯಕ್ಷ ಎನ್. ತಿಪ್ಪೇಸ್ವಾಮಿ ಹಾಗೂ ಮಹಿಳಾ ಸದಸ್ಯೆ ಮಾರ್ಲಾ ಶಶಿಕಲಾ ಅವರು ದಾಖಲೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿದರು. ಆದಾಗ್ಯೂ, ವಿಮಾ ಕಂಪನಿಯು ಪಾಲಿಸಿ ವಿತರಿಸುವ ಸಮಯದಲ್ಲಿ ಸಂಪೂರ್ಣ ನಿಬಂಧನೆಗಳನ್ನು ನೀಡದೆ, ಆಯೋಗದಲ್ಲಿ ದೂರು ದಾಖಲಾದ ನಂತರ ಹಾಜರುಪಡಿಸಿ ಕ್ಲೈಮ್ ತಿರಸ್ಕರಿಸುವ ಬಗ್ಗೆ ತಕರಾರು ಸಲ್ಲಿಸುವ ಪರಿಪಾಠ ರೂಢಿಸಿಕೊಂಡಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.
ಪಾಲಿಸಿ ಚಾಲ್ತಿಯಲ್ಲಿದ್ದರೂ ಮತ್ತು ವಾಹನ ಕಳ್ಳತನವಾಗಿರುವ ಬಗ್ಗೆ ಒಪ್ಪಿಕೊಳ್ಳುತ್ತಾ, ಕೇವಲ ಮಾಹಿತಿ ತಡವಾಗಿ ಸಲ್ಲಿಸಿರುವ ಕಾರಣಕ್ಕೆ ಕ್ಲೈಮ್ ತಿರಸ್ಕರಿಸಿರುವುದು ಎದುರುದಾರರ ಸೇವಾ ನಿರ್ಲಕ್ಷ್ಯತನ ಎಂದು ಆಯೋಗವು ಪರಿಗಣಿಸಿತು. ಇದರ ಅನ್ವಯ, ವಿಮಾ ಕಂಪನಿಯು ದೂರುದಾರರಿಗೆ —
- ₹76,200 ವಿಮಾ ಪಾಲಿಸಿ ಮೊತ್ತ,
- ₹10,000 ಮಾನಸಿಕ ಹಿಂಸೆಗೆ,
- ₹5,000 ದೂರಿನ ವೆಚ್ಚ —
ಒಟ್ಟು ₹91,200 ಮೊತ್ತವನ್ನು 45 ದಿನಗಳ ಒಳಗೆ ಪಾವತಿಸಬೇಕು ಎಂದು ಆದೇಶ ನೀಡಿದೆ. ತಪ್ಪಿದಲ್ಲಿ, ₹76,200 ಮೊತ್ತಕ್ಕೆ ಶೇಕಡಾ 9 ರಷ್ಟು ಬಡ್ಡಿ ಪಾವತಿಸಬೇಕು ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಆದೇಶಿಸಿದೆ.

