
ಧಾರವಾಡದಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಿಂದ ಒಂದು ದಿನದ ಕಾರ್ಯಕ್ರಮ
ಧಾರವಾಡ: ನವೆಂಬರ್ 25: ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಂಎಸ್‌ಎಂಇ) ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಮತ್ತು ವೇಗಗೊಳಿಸಲು (RAMP) ರೂಪಿಸಲಾದ ‘ಲೀನ್ ಯೋಜನೆ’ ಮತ್ತು ‘ಝೀರೋ ಡಿಫೆಕ್ಟ್-ಝೀರೋ ಎಫೆಕ್ಟ್ (ZED) ಯೋಜನೆ’ ಗಳ ಕುರಿತು ಧಾರವಾಡದಲ್ಲಿ ಮಂಗಳವಾರದಂದು (ನ.25) ಒಂದು ದಿನದ ಅರಿವು ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕರ್ನಾಟಕ ಸರ್ಕಾರ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಧಾರವಾಡ ಜಿಲ್ಲಾ ಕೈಗಾರಿಕಾ ಕೇಂದ್ರ ಮತ್ತು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ (ಕಾಸಿಯಾ) ಸಹಯೋಗದಲ್ಲಿ ನಗರದ ಮಸ್ಟಿಪ್ ಗ್ರ್ಯಾಂಡ್ ಹೋಟೆಲ್‌ನಲ್ಲಿ ಈ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬೆಂಗಳೂರು ಕಾಸಿಯಾ ಉಪಾಧ್ಯಕ್ಷ ನಿಂಗಣ್ಣ ಎಸ್ ಬಿರಾದಾರ ಅವರು, ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಸರ್ಕಾರವು ಪ್ರೋತ್ಸಾಹ ನೀಡುತ್ತಿದೆ. ಕಾಸಿಯಾ ಮೂಲಕ ವಲಯವಾರು ಕೈಗಾರಿಕೆಗಳ ಸಮಸ್ಯೆಗಳನ್ನು ಸರ್ಕಾರದ ಮಟ್ಟದಲ್ಲಿ ಪರಿಹರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಅವರು ಮುಂದುವರಿದು, ಯುವಕರು ಲೀನ್ ಯೋಜನೆ ಮತ್ತು ಝಡ್.ಇ.ಡಿ. ಹಾಗೂ ರಫ್ತು ಯೋಜನೆಗಳಂತಹ ವಿವಿಧ ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಸಂಘ-ಸಂಸ್ಥೆಗಳ ಜೊತೆ ಸೇರಿ ಯುವಕರು ಹೊಸ ಉದ್ಯಮವನ್ನು ಆರಂಭಿಸಿ, ಉದ್ಯಮಶೀಲತೆಯನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಜಿ. ಕೆ. ಆದಪ್ಪಗೌಡರ್, ಧಾರವಾಡ ಗ್ರೋಥ್ ಸೆಂಟರ್ ಕೈಗಾರಿಕಾ ಸಂಘದ ಅಧ್ಯಕ್ಷ ಶ್ರೀಕಾಂತ ಥಿಟೆ, ಧಾರವಾಡ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಶಿವಪುತ್ರಪ್ಪ ಆರ್. ಹೆಚ್., ಕಾಸಿಯಾದ ಧಾರವಾಡ ಜಿಲ್ಲಾಭಿವೃದ್ಧಿ ಸಮಿತಿ ಪ್ಯಾನಲ್ ಅಧ್ಯಕ್ಷ ಮಲ್ಲೇಶ ಜಾಡರ, ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕ ಸುಧಾಜೆ ಪವಾರ ಮತ್ತು ಸಹಾಯಕ ನಿರ್ದೇಶಕ ಶಿವಾನಂದ ವ್ಹಿ ಕಮ್ಮಾರ ಅವರು ಉಪಸ್ಥಿತರಿದ್ದರು.

