
ಕುಂದಗೋಳ: ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕುಂದಗೋಳ ತಾಲ್ಲೂಕು ಘಟಕದ ಪದಾಧಿಕಾರಿಗಳ ಚುನಾವಣೆ ಬುಧವಾರ ಪಟ್ಟಣದಲ್ಲಿ ಜರುಗಿದ್ದು, ನೂತನ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ಅಶೋಕ ಘೋರ್ಪಡೆ ಅವರು ಆಯ್ಕೆಯಾಗಿದ್ದಾರೆ.
ತಾಲ್ಲೂಕು ಘಟಕದ ಅಧ್ಯಕ್ಷ ಸ್ಥಾನಕ್ಕೆ ಅಶೋಕ ಘೋರ್ಪಡೆ ಹಾಗೂ ಖಾದರಸಾಬ ಡಗಲಿ ಅವರು ನಾಮಪತ್ರ ಸಲ್ಲಿಸಿದ್ದರು. ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಅಶೋಕ ಘೋರ್ಪಡೆ 04 ಮತಗಳನ್ನು ಪಡೆದು ಜಯಶಾಲಿಯಾದರು. ಇದೇ ವೇಳೆ ಪ್ರಧಾನ ಕಾರ್ಯದರ್ಶಿಯಾಗಿ ಬಸವರಾಜ ದೀಪಾವಳಿ ಹಾಗೂ ಖಜಾಂಚಿಯಾಗಿ ಶೇಖಪ್ಪ ಕುಂದಗೋಳ ಅವರು ಅವಿರೋಧವಾಗಿ ಆಯ್ಕೆಯಾದರು. ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ನಡೆಸಲಾಯಿತು.

ಚುನಾವಣಾ ಪ್ರಕ್ರಿಯೆ ಮುಗಿದ ಬಳಿಕ ಜಿಲ್ಲಾ ಘಟಕದ ಅಧ್ಯಕ್ಷ ಬಂಡು ಕುಲಕರ್ಣಿ ಅವರು ನೂತನ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು. ಜಿಲ್ಲಾ ಸಮಿತಿಗೆ ಯಾವುದೇ ತಪ್ಪು ಮಾಹಿತಿಗಳು ರವಾನೆಯಾಗದಂತೆ ಎಚ್ಚರವಹಿಸಿ, ತಾಲ್ಲೂಕಿನ ಸರ್ವ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘಟನೆಯನ್ನು ಬಲಪಡಿಸಬೇಕು. ಇದೇ ವೇಳೆ ನಕಲಿ ಪತ್ರಕರ್ತರ ಹಾವಳಿ ಬಗ್ಗೆ ಎಚ್ಚರಿಕೆ ವಹಿಸಿ ಅವರ ಚಟುವಟಿಕೆಗಳ ಮೇಲೆ ನಿಗಾ ಇಡಬೇಕು. ಕೇವಲ ವರದಿಗಳಿಗೆ ಸೀಮಿತವಾಗದೇ ಆರೋಗ್ಯ ಶಿಬಿರದಂತಹ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಪಾರದರ್ಶಕವಾಗಿ ಸೇವೆ ಸಲ್ಲಿಸಿ ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ರಾಜು ವಿಜಾಪುರ, ಪ್ರಧಾನ ಕಾರ್ಯದರ್ಶಿ ಗುರು ಬಾಂಢಗೆ, ಕಾರ್ಯಕಾರಣಿ ಸದಸ್ಯ ಮಹೇಶ ನರೇಗಲ್ ಉಪಸ್ಥಿತರಿದ್ದರು. ಅಲ್ಲದೆ ತಾಲ್ಲೂಕಿನ ಪತ್ರಕರ್ತರಾದ ಗಂಗಾಧರ ಡಾಂಗೇ, ಖಾದರಸಾಬ ಡಗಲಿ, ಮಂಜುನಾಥ ಶಿವಕ್ಕನವರ, ಸುಮಾ ಡಾಂಗೆ, ದುರ್ಗಪ್ಪ ಗೊಲ್ಲರ, ಯಲ್ಲಪ್ಪ ಹೊಸುರು, ಸುನಿಲ್ ಕರೋಗಲ್, ನಾಗರಾಜ ಕುಂಕೂರ, ಬಸವರಾಜ ಗುಡ್ಡದಕೇರಿ, ರವಿ ಕಮಡೊಳ್ಳಿ, ವಾಸು ಮುರಗಿ, ನಾಗರಾಜ ಮಧುಭಾವಿ, ಪ್ರವೀಣ್ ಗಿಡಸಕ್ಕನವರ, ಕಿರಣ ಅರ್ಕಸಾಲಿ ಹಾಗೂ ಗಿರೀಶ ಘಾಟಗೆ ಹಾಜರಿದ್ದರು.

