ಹಾಲಭಾವಿ ಪ್ರಶಸ್ತಿ ಪುರಸ್ಕೃತರಿಂದ ಕಲಾ ಪ್ರಾತ್ಯಕ್ಷಿಕೆ: ವಿದ್ಯಾರ್ಥಿಗಳಲ್ಲಿ ಮೂಡಿತು ಕಲಾಕೃತಿ ರಚನೆಯ ತಿಳುವಳಿಕೆ

Spread the love

ಧಾರವಾಡ: ಚಿತ್ರಕಲಾಶಿಲ್ಪಿ ಶ್ರೀ ಡಿ. ವಿ. ಹಾಲಭಾವಿ ರಾಷ್ಟ್ರೀಯ ಸ್ಮಾರಕ (ರಿ) ಟ್ರಸ್ಟ್ ವತಿಯಿಂದ ಏರ್ಪಡಿಸುವ ಕಲಾ ಚಟುವಟಿಕೆಗಳ ಭಾಗವಾಗಿ ನಿನ್ನೆ (ನ. 28) ರಂದು ಪ್ರಶಸ್ತಿ ಪುರಸ್ಕೃತ ಕಲಾವಿದರಿಂದ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ರಾಷ್ಟ್ರಮಟ್ಟದಲ್ಲಿ ಹೆಸರಾಂತ ಯುವ ಹಾಗೂ ಹಿರಿಯ ಚಿತ್ರಕಲಾವಿದರಿಗೆ ಪ್ರಶಸ್ತಿ ಪ್ರದಾನ ಮಾಡುವ ಪ್ರಕ್ರಿಯೆ ನಡೆಯಿತು.

​ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಟ್ರಸ್ಟ್‌ನ ಅಧ್ಯಕ್ಷ ಬಿ. ಮಾರುತಿ ಅವರು ಮಾತನಾಡಿ, ಪ್ರಶಸ್ತಿ ಪುರಸ್ಕೃತ ಕಲಾವಿದರು ಪ್ರತ್ಯಕ್ಷವಾಗಿ ಕಲಾಕೃತಿಗಳನ್ನು ರಚಿಸುವುದರಿಂದ ಚಿತ್ರಕಲೆಯನ್ನು ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಇದರಿಂದ ಕಲಾಕೃತಿಗಳನ್ನು ಯಾವ ರೀತಿಯಾಗಿ ರಚಿಸಬಹುದು ಎಂಬ ತಿಳುವಳಿಕೆ ಮೂಡುತ್ತದೆ ಹಾಗೂ ಕಲಾವಿದರ ನಡುವೆ ಉತ್ತಮ ಕಲಾಸಂವಹನ ಏರ್ಪಡುತ್ತದೆ ಎಂದು ಹೇಳಿದರು.

​ಮಧ್ಯಾಹ್ನ ಪ್ರಶಸ್ತಿ ಪುರಸ್ಕೃತರ ಸ್ಲೈಡ್ ಶೋ ಆಯೋಜಿಸಲಾಗಿತ್ತು. ಇದಾದ ನಂತರ ಕಲಾವಿದರು ಮತ್ತು ಕಲಾ ವಿದ್ಯಾರ್ಥಿಗಳೊಂದಿಗೆ ಚಿತ್ರಕಲಾಕೃತಿಗಳ ಕುರಿತು ಸಂವಾದ ಕಾರ್ಯಕ್ರಮವನ್ನು ನಡೆಸಲಾಯಿತು.

​ಟ್ರಸ್ಟ್‌ನ ಸದಸ್ಯ ಕಾರ್ಯದರ್ಶಿ ಕುಮಾರ ಬೆಕ್ಕೇರಿ ಅವರು ಸ್ವಾಗತಿಸಿದರು. ವೇದಿಕೆಯ ಕಲಾವಿದರನ್ನು ಮತ್ತು ಅತಿಥಿಗಳನ್ನು ಟ್ರಸ್ಟ್‌ನ ಸದಸ್ಯ ಡಾ. ಬಸವರಾಜ ಕುರಿಯವರ ಪರಿಚಯಿಸಿದರು. ಟ್ರಸ್ಟ್‌ನ ಸದಸ್ಯ ಹಾಗೂ ಹಿರಿಯ ಕಲಾವಿದ ಸುರೇಶ ಹಾಲಭಾವಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ವಿ. ಹೆಚ್. ಕುರಿಯವರ ಅವರು ಕಾರ್ಯಕ್ರಮ ನಿರೂಪಿಸಿದರು ಮತ್ತು ಟ್ರಸ್ಟ್‌ನ ಹಿರಿಯ ಸದಸ್ಯ ಎಫ್. ವಿ. ಚಿಕ್ಕಮಠ ಅವರು ವಂದಿಸಿದರು.

​ಕಾರ್ಯಕ್ರಮದಲ್ಲಿ ಲೋಹಿತ್ ನಾಯ್ಕರ, ಈಶ್ವರ ಜೋಶಿ, ಡಾ. ಆನಂದ ಪಾಟೀಲ, ಸಿ. ಯು. ಬೆಳಕ್ಕಿ, ಡಾ. ಪಾರ್ವತಿ ಹಾಲಭಾವಿ ಹಾಗೂ ಚಿತ್ರಕಲಾ ಮಹಾವಿದ್ಯಾಲಯದ ಪ್ರಾಚಾರ್ಯರು, ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಟ್ರಸ್ಟ್‌ನ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *