ಧಾರವಾಡ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಸಾರ್ವಜನಿಕ ಉದ್ಯಾನವನಗಳು ಹಾಗೂ ಆಟದ ಮೈದಾನಗಳ ನಿರ್ವಹಣೆ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಡೇ-ನಲ್ಮ್ (DAY-NULM) ಅಭಿಯಾನದಡಿ ಅರ್ಹ ಮಹಿಳಾ ಸ್ವ-ಸಹಾಯ ಗುಂಪುಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಕೇಂದ್ರ ಸರ್ಕಾರ ಪುರಸ್ಕೃತ ಅಮೃತ್-2.0 ಅಭಿಯಾನದ ‘ಅಮೃತ್ ಮಿತ್ರ’ ಹಂತ-2 ಕಾರ್ಯಕ್ರಮದ ತಾಂತ್ರಿಕೇತರ ಚಟುವಟಿಕೆಗಳ ಅಡಿಯಲ್ಲಿ ಈ ನಿರ್ವಹಣಾ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಡೇ-ನಲ್ಮ್ ಅಭಿಯಾನದಡಿ ರಚನೆಯಾಗಿರುವ ಆಸಕ್ತ ಮಹಿಳಾ ಸ್ವ-ಸಹಾಯ ಗುಂಪುಗಳು ಈ ಯೋಜನೆಯಡಿ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ.
ಆಸಕ್ತ ಮಹಿಳಾ ಸ್ವ-ಸಹಾಯ ಗುಂಪುಗಳು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಹುಬ್ಬಳ್ಳಿ ಹಾಗೂ ಧಾರವಾಡದಲ್ಲಿರುವ ಡೇ-ನಲ್ಮ್ ಕಚೇರಿಯಿಂದ ನಿಗದಿತ ಅರ್ಜಿ ನಮೂನೆಯನ್ನು ಪಡೆದುಕೊಳ್ಳಬೇಕು. ಭರ್ತಿ ಮಾಡಿದ ಅರ್ಜಿ ಹಾಗೂ ಪ್ರಸ್ತಾವನೆಯನ್ನು ಮುಂದಿನ 10 ದಿನಗಳ ಒಳಗಾಗಿ ಮುಚ್ಚಿದ ಲಕೋಟೆಯಲ್ಲಿ ಸೀಲ್ ಮಾಡಿ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರಿಗೆ ಸಲ್ಲಿಸಬೇಕು ಎಂದು ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

