​ಬಾಲಗೌರವ ಹಾಗೂ ‘ಪುಸ್ತಕ ಚಂದಿರ’ ಪ್ರಶಸ್ತಿಗೆ ಅರ್ಜಿ ಆಹ್ವಾನ: ಫೆ. 20 ಕೊನೆಯ ದಿನ

Spread the love

ಧಾರವಾಡ: ಕರ್ನಾಟಕ ಬಾಲವಿಕಾಸ ಅಕಾಡೆಮಿಯು 2024-25 ಹಾಗೂ 2025-26ನೇ ಸಾಲಿನ ‘ಬಾಲಗೌರವ’ ಪ್ರಶಸ್ತಿ ಹಾಗೂ 2024 ಮತ್ತು 2025ನೇ ಸಾಲಿನ ‘ಮಕ್ಕಳ ಪುಸ್ತಕ ಚಂದಿರ’ ಪ್ರಶಸ್ತಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಿದೆ.

​ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ವಿಶೇಷ ಸಾಧನೆಗೈದ 18 ವರ್ಷದೊಳಗಿನ ಮಕ್ಕಳಿಗೆ ಬಾಲಗೌರವ ಪ್ರಶಸ್ತಿ ನೀಡಲಾಗುತ್ತದೆ. ಕ್ರೀಡೆ, ಸಂಗೀತ, ನೃತ್ಯ, ನಟನೆ, ಚಿತ್ರಕಲೆ, ವಿಜ್ಞಾನ ಹಾಗೂ ಸಂಶೋಧನೆ ಸೇರಿದಂತೆ ಯಾವುದಾದರೂ ಒಂದು ಕ್ಷೇತ್ರದಲ್ಲಿ ಅಸಾಧಾರಣ ಸಾಧನೆ ಮಾಡಿ ಪ್ರಶಸ್ತಿ ಪುರಸ್ಕೃತವಾಗಿರುವ ಮಕ್ಕಳು ಇದಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತರು ತಮ್ಮ ಸಾಧನೆಯ ಸ್ವಯಂ ದೃಢೀಕೃತ ದಾಖಲೆಗಳು, ಸ್ವವಿವರ ಹಾಗೂ ಮನವಿಯೊಂದಿಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ನಮೂನೆಗಳನ್ನು ಆಯಾ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ಅಥವಾ ಅಕಾಡೆಮಿಯ ಕೇಂದ್ರ ಕಚೇರಿಯಲ್ಲಿ ಪಡೆದು ಭರ್ತಿ ಮಾಡಬಹುದು.

​ಇದೇ ವೇಳೆ ಮಕ್ಕಳ ಸಾಹಿತ್ಯಕ್ಕೆ ನೀಡುವ ‘ಮಕ್ಕಳ ಪುಸ್ತಕ ಚಂದಿರ’ ಪ್ರಶಸ್ತಿಗೂ ಕೃತಿಗಳನ್ನು ಆಹ್ವಾನಿಸಲಾಗಿದೆ. 2024ರ ಜನವರಿಯಿಂದ ಡಿಸೆಂಬರ್ ಮತ್ತು 2025ರ ಜನವರಿಯಿಂದ ಡಿಸೆಂಬರ್ ಅವಧಿಯಲ್ಲಿ ಪ್ರಕಟಗೊಂಡ ಮಕ್ಕಳ ಕೃತಿಗಳನ್ನು ಇದಕ್ಕೆ ಪರಿಗಣಿಸಲಾಗುತ್ತದೆ. ಸ್ವರಚಿತ ಕವನ ಸಂಕಲನ, ಕಥಾ ಸಂಕಲನ, ನಾಟಕ, ಮಕ್ಕಳ ಕಾದಂಬರಿ (ಪಠ್ಯ ಹೊರತುಪಡಿಸಿ), ವೈಜ್ಞಾನಿಕ ಲೇಖನಗಳ ಸಂಕಲನ, ಅನುವಾದಿತ ಕೃತಿ ಹಾಗೂ ಮಕ್ಕಳ ಸಾಹಿತ್ಯ ವಿಮರ್ಶಾ ಕೃತಿ ಸೇರಿದಂತೆ ಒಟ್ಟು ಏಳು ಪ್ರಕಾರಗಳಲ್ಲಿ ಪ್ರಶಸ್ತಿ ನೀಡಲಾಗುತ್ತದೆ. ಲೇಖಕರು ತಮ್ಮ ಪುಸ್ತಕವು ಯಾವ ಸಾಲಿಗೆ ಸೇರಿದೆ ಎಂಬುದನ್ನು ಸ್ಪಷ್ಟವಾಗಿ ನಮೂದಿಸಿ, ಮೌಲ್ಯಮಾಪನಕ್ಕಾಗಿ ಕೃತಿಯ 4 ಪ್ರತಿಗಳನ್ನು ತಮ್ಮ ಸ್ವವಿವರದೊಂದಿಗೆ ಸಲ್ಲಿಸಬೇಕಾಗುತ್ತದೆ.

​ಭರ್ತಿ ಮಾಡಿದ ಅರ್ಜಿಗಳನ್ನು ಹಾಗೂ ಕೃತಿಗಳನ್ನು ಸಲ್ಲಿಸಲು 2026ರ ಫೆಬ್ರವರಿ 20 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಕಾಡೆಮಿಯ ದೂರವಾಣಿ ಸಂಖ್ಯೆ 0836-2465490 ಅಥವಾ ಮೊಬೈಲ್ ಸಂಖ್ಯೆ 8050392209, 7204396275 ಹಾಗೂ 9448981944 ಸಂಪರ್ಕಿಸಬಹುದು ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *