ಧಾರವಾಡ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕರ್ನಾಟಕ ಬಾಲವಿಕಾಸ ಅಕಾಡೆಮಿಯ ವತಿಯಿಂದ 2024-25 ಮತ್ತು 2025-26ನೇ ಸಾಲಿನ ‘ಬಾಲಗೌರವ’ ಪ್ರಶಸ್ತಿಗಾಗಿ ಅರ್ಹ ಮಕ್ಕಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ಮಕ್ಕಳು ಈ ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಯಾರು ಅರ್ಜಿ ಸಲ್ಲಿಸಬಹುದು?
18 ವರ್ಷದೊಳಗಿನ ಮಕ್ಕಳಾಗಿದ್ದು, ಕ್ರೀಡೆ, ಸಂಗೀತ, ನೃತ್ಯ, ನಟನೆ, ಚಿತ್ರಕಲೆ, ವಿಜ್ಞಾನ ಮತ್ತು ಸಂಶೋಧನೆ ಅಥವಾ ಬಹುಮುಖ ಪ್ರತಿಭೆ (All-rounder) ವಿಭಾಗಗಳಲ್ಲಿ ಅಸಾಧಾರಣ ಸಾಧನೆ ಮಾಡಿರಬೇಕು. ಈಗಾಗಲೇ ಈ ಕ್ಷೇತ್ರಗಳಲ್ಲಿ ಪ್ರಶಸ್ತಿಗಳನ್ನು ಪಡೆದು ಸಾಧನೆ ಮಾಡಿದ ಮಕ್ಕಳಿಗೆ ಆದ್ಯತೆ ನೀಡಲಾಗುವುದು.
ಅರ್ಜಿ ಸಲ್ಲಿಸುವ ವಿಧಾನ:
ಆಸಕ್ತ ಮತ್ತು ಅರ್ಹ ಸಾಧಕ ಮಕ್ಕಳು ತಮ್ಮ ಸಾಧನೆಗಳ ಸ್ವಯಂ ದೃಢೀಕೃತ ನಕಲು ದಾಖಲೆಗಳು ಹಾಗೂ ಸ್ವ-ವಿವರಗಳನ್ನೊಳಗೊಂಡ ಅರ್ಜಿಯನ್ನು ಫೆಬ್ರವರಿ 20, 2026 ರೊಳಗಾಗಿ ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಕಚೇರಿಗೆ ತಲುಪಿಸಬೇಕು. ನಿಗದಿತ ಅವಧಿಯ ನಂತರ ಬರುವ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಪರಿಗಣಿಸಲಾಗುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

