ಡಿಸೆಂಬರ್ 2 ಮತ್ತು 3 ರಂದು ನೇರ ಸಂದರ್ಶನ; ಕಂಪ್ಯೂಟರ್ ಸಾಕ್ಷರತಾ ಪ್ರಮಾಣಪತ್ರ ಕಡ್ಡಾಯ
ಧಾರವಾಡ: ನವೆಂಬರ್ 26: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ವತಿಯಿಂದ ರಾಷ್ಟ್ರೀಯ ಆರೋಗ್ಯ ಅಭಿಯಾನ (NHM) ಯೋಜನೆಯಡಿ ವಿವಿಧ ಕಾರ್ಯಕ್ರಮಗಳಡಿಯಲ್ಲಿ ಖಾಲಿ ಉಳಿದಿರುವ ಮತ್ತು 2025-26 ನೇ ಸಾಲಿನ ಆರ್.ಓ.ಪಿ. (ROP) ಯಲ್ಲಿ ಅನುಮೋದನೆಯಾಗಿರುವ ಒಟ್ಟು 42 ತಾತ್ಕಾಲಿಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ರಾಷ್ಟ್ರೀಯ ಆರೋಗ್ಯ ಅಭಿಯಾನದ ಸುತ್ತೋಲೆ ಅನುಸಾರವಾಗಿ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ತೇರ್ಗಡೆಯಾದ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿಯ ಉಪಾಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಯ್ಕೆ ಪ್ರಕ್ರಿಯೆಯ ವಿವರ:
ಅರ್ಹ ಅಭ್ಯರ್ಥಿಗಳಿಗೆ ಡಿಸೆಂಬರ್ 02 ಮತ್ತು 03, 2025 ರಂದು ನೇರವಾಗಿ ಅರ್ಜಿ ಆಹ್ವಾನಿಸಿ, ಆಯ್ಕೆ ಪ್ರಕ್ರಿಯೆಯನ್ನು ಕೈಗೊಳ್ಳಲಾಗುವುದು. ಅರ್ಹ ಅಭ್ಯರ್ಥಿಗಳು ಕಡ್ಡಾಯವಾಗಿ ತಮ್ಮ ಮೂಲ ದಾಖಲಾತಿಗಳೊಂದಿಗೆ ನಿಗದಿತ ದಿನಾಂಕದಂದು ಖುದ್ದಾಗಿ ಹಾಜರಾಗಿ ಅರ್ಜಿಯನ್ನು ಸಲ್ಲಿಸಬೇಕು.
ಆಯ್ಕೆ ಪ್ರಕ್ರಿಯೆಯು ಯೋಜನೆಯ ನಿಯಮಾನುಸಾರ ಮೆರಿಟ್ ಮತ್ತು ರೋಸ್ಟರ್ ಆಧಾರದ ಮೇಲೆ ನಡೆಯಲಿದೆ. ಈ ನೇಮಕಾತಿಯು ಮಾರ್ಚ್ 31, 2026 ರವರೆಗೆ ಅಥವಾ ಸರ್ಕಾರದ ನಿಯಮಾವಳಿ ಸುತ್ತೋಲೆಯ ಪ್ರಕಾರ ಯಾವುದು ಮೊದಲು ಅದಕ್ಕೆ ಅನುಗುಣವಾಗಿ ತಾತ್ಕಾಲಿಕವಾಗಿ ಜಾರಿಯಲ್ಲಿರುತ್ತದೆ.
ಹುದ್ದೆಗಳ ವಿವರ, ವಿದ್ಯಾರ್ಹತೆ ಮತ್ತು ರೋಸ್ಟರ್ ಕುರಿತ ಹೆಚ್ಚಿನ ಮಾಹಿತಿಯನ್ನು ಜಿಲ್ಲಾ ಆರೋಗ್ಯ ಅಧಿಕಾರಿಗಳ ಕಚೇರಿಯ ಸೂಚನಾ ಫಲಕಕ್ಕೆ ಲಗತ್ತಿಸಲಾಗಿದೆ. ಹುದ್ದೆಗಳ ಸಂಖ್ಯೆಯನ್ನು ಹೆಚ್ಚಿಸುವ ಮತ್ತು ಕಡಿತಗೊಳಿಸುವ ಅಧಿಕಾರವನ್ನು ಧಾರವಾಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಹೊಂದಿರುತ್ತದೆ ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ

